ಉಕ್ರೇನ್ ಮೇಲೆ ರಾಸಾಯನಿಕ ಶಸ್ತ್ರಾಸ್ತ್ರ ಪ್ರಯೋಗಿಸಿತಾ ರಷ್ಯಾ: ಝೆಲೆನ್ಸ್ಕಿ ಹೇಳುವುದೇನು?
ಕೀವ್, ಏಪ್ರಿಲ್ 12: ಉಕ್ರೇನ್‌ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೂ ಮೊದಲೇ ಪಶ್ಚಿಮದ ರಾಷ್ಟ್ರಗಳು ಮಾಸ್ಕೋ ಮೇಲೆ ಹೆಚ್ಚಿನ ನಿರ್ಬಂಧವನ್ನು ವಿಧಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.
ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧವನ್ನು ಹೇರುವುದರ ಮೂಲಕ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದಿರಲಿ ಅದರ ಬಗ್ಗೆ ಮಾತನಾಡುವುದಕ್ಕೂ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಷ್ಯಾ ಮುತ್ತಿಗೆ ಹಾಕಿರುವ ದಕ್ಷಿಣ ಉಕ್ರೇನಿಯನ್ ಬಂದರಿನ ಮರಿಯುಪೋಲ್ ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ಸೋಮವಾರ ವರದಿಯಾಗಿದೆ. ಆದರೆ ಈ ವರದಿಯ ಬಗ್ಗೆ ಯಾವುದೇ ದೃಢೀಕರಣವಿಲ್ಲ ಎಂದು ಗೊತ್ತಾಗಿದೆ. ಈ ಹಿನ್ನೆಲೆ "ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ" ಎಂದಿರುವ ಝೆಲೆನ್ಸ್ಕಿ, ರಾಸಾಯನಿಕ ಅಸ್ತ್ರಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಹೇಳಲಿಲ್ಲ.

ವಿಶ್ವ ನಾಯಕರಿಗೆ ನೆನಪು ಮಾಡಿದ ಝೆಲೆನ್ಕ್ಸಿ:
"ರಷ್ಯಾದ ಸೇನಾ ಪಡೆಯು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬುದರ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಈ ಅಂಶವನ್ನು ನಾನು ವಿಶ್ವ ನಾಯಕರಿಗೆ ಮತ್ತೊಮ್ಮೆ ನೆನಪಿಸುವುದಕ್ಕೆ ಬಯಸುತ್ತೇನೆ. ಈ ಸಮಯದಲ್ಲಿ ಅದು ರಷ್ಯಾದ ಆಕ್ರಮಣಕ್ಕೆ ಹೆಚ್ಚು ಕಠಿಣ ಮತ್ತು ವೇಗವಾಗಿ ಪ್ರತಿಕ್ರಿಯಿಸಲು ಅಗತ್ಯವಾಗಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಹೇಳಿದ್ದಾರೆ.
ರಾಸಾಯನಿಕ ದಾಳಿಯ ಬಗ್ಗೆ ಸ್ಪಷ್ಟತೆಯಿಲ್ಲ:
ಮರಿಯುಪೋಲ್‌ನಲ್ಲಿ ರಷ್ಯಾ ಸೇನೆಯು ರಾಸಾಯನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ. ಈ ಕುರಿತು ಹೆಚ್ಚಿ ಮಾಹಿತಿ ಮತ್ತು ಸ್ಪಷ್ಟನೆಯನ್ನು ಮುಂದೆ ನೀಡಲಾಗುವುದು ಎಂದು ಮರಿಯುಪೋಲ್‌ನ ಮೇಯರ್ ಸಹಾಯಕ ಪೆಟ್ರೋ ಆಂಡ್ರ್ಯುಶ್ಚೆಂಕೊ ಹೇಳಿದ್ದಾರೆ.

ಉಕ್ರೇನ್‌ನ ಪೂರ್ವಕ್ಕೆ ಜನರ ಸ್ಥಳಾಂತರ:
ರಷ್ಯಾದ ಆಕ್ರಮಣದಿಂದ ಸಾವಿರಾರು ಜನರು ಸಾವಿನ ಮನೆ ಸೇರಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಕೀವ್‌ನ ಗೇಟ್‌ಗಳಿಂದ ಉಕ್ರೇನ್‌ನ ಪೂರ್ವಕ್ಕೆ ಜನರು ಸ್ಥಳಾಂತರಗೊಂಡಿದ್ದು, ಅಲ್ಲಿ ಭಾರಿ ಆಕ್ರಮಣ ನಡೆಯುವ ನಿರೀಕ್ಷೆಯಿದೆ. ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವುದೊಂದೇ ಪ್ರಮುಖ ಮಾರ್ಗವಾಗಿದೆ ಎಂದು ಯುರೋಪಿಯನ್ ಒಕ್ಕೂಟ ಹೇಳಿದೆ.
ರಷ್ಯಾ ವಿರುದ್ಧ ತೈಲ ನಿರ್ಬಂಧ:
"ರಷ್ಯಾದ ಕಡೆಯಿಂದ ವಿನಾಶಕಾರಿ ಶಸ್ತ್ರಾಸ್ತ್ರಗಳ ದಾಳಿಗೆ ಪ್ರತಿಯಾಗಿ ಅವರು ಪದಗಳಲ್ಲಿ ವಿವರಿಸಲು ಆಗದ ರೀತಿಯಲ್ಲಿ ನಿರ್ಬಂಧವನ್ನು ಹೇರುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾದ ತೈಲದ ಮೇಲಿನ ನಿರ್ಬಂಧವು ಅತ್ಯಗತ್ಯವಾಗಿದೆ. ತೈಲದ ಮೇಲಿನ ನಿರ್ಬಂಧದ ಹೊರತಾಗಿ ಬೇರೆ ಯಾವುದೇ ರೀತಿಯ ನಿರ್ಬಂಧವನ್ನು ವಿಧಿಸಿದರೂ ರಷ್ಯಾ ನಗುನಗುತ್ತಾ ಸ್ವೀಕರಿಸುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications