Ukraine War: ರಷ್ಯಾ ಕೊಟ್ಟ ಏಟಿಗೆ ನಲುಗಿದ ಉಕ್ರೇನ್, ಪರಮಾಣು ಸ್ಥಾವರ ಟಾರ್ಗೆಟ್?
ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಬಲಶಾಲಿ ಅಸ್ತ್ರಗಳನ್ನ ಪ್ರಯೋಗ ಮಾಡುತ್ತಿದೆ, ಹೀಗೆಲ್ಲಾ ರಷ್ಯಾ ನಡೆಸುತ್ತಿರುವ ದಾಳಿಯ ಪರಿಣಾಮ ಈಗಾಗಲೇ ಉಕ್ರೇನ್ ಅಲ್ಲಾಡಿ ಹೋಗಿದೆ. ದೊಡ್ಡ, ದೊಡ್ಡ ಕ್ಷಿಪಣಿಗಳು ಮತ್ತು ಡ್ರೋನ್ ಮೂಲಕ ಉಕ್ರೇನ್ ನೆಲವನ್ನು ಧೂಳ್ ಧೂಳ್ ಮಾಡಲು ಮುಂದೆ ನುಗ್ಗಿದೆ ರಷ್ಯಾ ಸೇನೆ. ಆದರೆ ಈ ಯುದ್ಧದ ಪರಿಣಾಮ ಇದೀಗ ಪರಮಾಣು ಸ್ಥಾವರದ ಬಗ್ಗೆ ಭಯ ಮೂಡಿದೆ. ಹಾಗಾದರೆ ರಷ್ಯಾ ನೇರವಾಗಿ ಉಕ್ರೇನ್ ನೆಲದ ಪರಮಾಣು ಸ್ಥಾವರಗಳನ್ನೇ ಟಾರ್ಗೆಟ್ ಮಾಡಿದೆಯಾ?
ಹೌದು ರಷ್ಯಾ ವಿರುದ್ಧ ಇದೀಗ ಉಕ್ರೇನ್ ಗಂಭೀರ ಆರೋಪ ಮಾಡಿದ್ದು, ಪರಮಾಣು ದಾಳಿಯ ಭಯ ಶುರುವಾಗಿದೆ. ರಷ್ಯಾ ಉಕ್ರೇನ್ ಮೇಲೆ ರಾತ್ರೋರಾತ್ರಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ, ಉಕ್ರೇನ್‌ನ ಎರಡು ಅಣು ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಪೂರೈಸುವ ಉಪಕೇಂದ್ರಗಳನ್ನ ಬಂದ್ ಮಾಡಿದೆ. ಆದರೆ, ಹೀಗೆ ರಷ್ಯಾ ನಡೆಸಿರುವ ಈ ದಾಳಿ ಮುಂದೆ ಪರಮಾಣು ಬಾಂಬ್ ದಾಳಿಯ ಮುನ್ಸೂಚನೆ ಆಗಿದೆ ಎಂಬ ಆರೋಪವು ಕೂಡ ಕೇಳಿಬಂದಿದೆ. ರಷ್ಯಾ ಮಿಲಿಟರಿ ನಡೆಸಿದ ದಾಳಿ ಪರಿಣಾಮ ಒಟ್ಟು 7 ಜನ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಪರಮಾಣು ಯುದ್ಧಕ್ಕೆ ನಡೆದಿದೆಯಾ ತಯಾರಿ?
ರಷ್ಯಾ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಅಂಡ್ರಿ ಸಿಬಿಹಾ ಗಂಭೀರ ಆರೋಪ ಮಾಡಿದ್ದು, ಈ ದಾಳಿಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ರಷ್ಯಾ ಸೇನೆ ಮತ್ತೊಮ್ಮೆ ಖ್ಮೆಲ್ನಿಟ್ಸ್ಕಿ & ರಿವ್ನೆ ಅಣು ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಪೂರೈಸುವ ಉಪಕೇಂದ್ರ ಮೇಲೆ ಟಾರ್ಗೆಟ್ ಮಾಡಿ ದಾಳಿ ಆರಂಭ ಮಾಡಿದೆ, ರಷ್ಯಾ ಮಿಲಿಟರಿ ಈಗ ಯುರೋಪ್‌ನ ಅಣು ಸುರಕ್ಷತೆಗೆ ಉದ್ದೇಶಪೂರ್ವಕವಾಗಿ ಅಪಾಯ ಉಂಟುಮಾಡಿ ಆತಂಕ ಸೃಷ್ಟಿ ಮಾಡುತ್ತಿದೆ ಎಂದಿದ್ದಾರೆ. ರಷ್ಯಾ 450ಕ್ಕೂ ಹೆಚ್ಚು ಡ್ರೋನ್ ಮತ್ತು 45 ಕ್ಷಿಪಣಿ ಉಡಾಯಿಸಿದೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಭಯಾನಕ ದಾಳಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದೆ.
ರಷ್ಯಾ ದಾಳಿ ಮಾಡಿದ್ದು ಏಕೆ?
ಉಕ್ರೇನ್ ಕೂಡ ಇತ್ತೀಚೆಗೆ ರಷ್ಯಾದ ಹಲವು ಪ್ರದೇಶಗಳ ಮೇಲೆ ಡ್ರೋನ್ ದಾಳಿ ಮಾಡಿತ್ತು. ಆ ಕ್ಷಣದಲ್ಲೇ ರಷ್ಯಾ ರಿವೇಂಜ್ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿತ್ತು. ಇದೀಗ ರಷ್ಯಾ ನಡೆಸಿದ ದಿಢೀರ್ ದಾಳಿಯ ಪರಿಣಾಮ ಕೀವ್, ಪೊಲ್ಟವಾ ಮತ್ತು ಖಾರ್ಕಿವ್ ಪ್ರದೇಶಗಳ ಇಂಧನ ಸೌಕರ್ಯ ನಾಶವಾಗಿ ಹೋಗಿದೆ. ಹೀಗಾಗಿ ಚಳಿಗಾಲದ ಸಮಯದಲ್ಲಿ ಉಕ್ರೇನ್‌ನ ಲಕ್ಷಾಂತರ ಜನರು ಅತ್ತ ವಿದ್ಯುತ್ ಇಲ್ಲದೆ ಇನ್ನೊಂದು ಕಡೆ ಚಳಿಯಿಂದ ರಕ್ಷಣೆ ಪಡೆಯಲು ಆಗದೆ ಒದ್ದಾಡುತ್ತಿದ್ದಾರೆ. ಈ ವಿಚಾರ ನ್ಯಾಟೋ ದೇಶಗಳನ್ನು ಕೂಡ ಇನ್ನಷ್ಟು ರೊಚ್ಚಿಗೇಳುವಂತೆ ಮಾಡಿದೆ.












Click it and Unblock the Notifications