ಉಕ್ರೇನ್-ರಷ್ಯಾ ಯುದ್ಧ: 24 ಗಂಟೆಗಳಲ್ಲಿ 3ನೇ ಬಾರಿ ಪ್ರಧಾನಿ ಮೋದಿ ತುರ್ತುಸಭೆ
ಕೀವ್, ಫೆಬ್ರವರಿ 28: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಉಕ್ರೇನ್ ಪರಿಸ್ಥಿತಿಯ ಕುರಿತು ಚರ್ಚಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ.
ಕಳೆದ 24 ಗಂಟೆಗಳಲ್ಲಿ ಪ್ರಧಾನಿ ಮೋದಿ ಮೂರನೇ ಬಾರಿ ತುರ್ತು ಸಭೆ ನಡೆಸುತ್ತಿದ್ದು, ಪ್ರವಾಸಕ್ಕೆ ಅಣಿಯಾಗಿರುವ ಕೇಂದ್ರ ಸಚಿವರು ಸಹ ಈ ಸಭೆಯಲ್ಲಿ ಹಾಜರಾಗಿದ್ದಾರೆ. ಭಾನುವಾರವಷ್ಟೇ ಉಕ್ರೇನ್ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಮೂಲಗಳ ಪ್ರಕಾರ, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿಕೆ ಸಿಂಗ್ ಅವರು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸಂಘಟಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಪ್ರಯಾಣಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಭಾರತೀಯರ ಸ್ಥಳಾಂತರಕ್ಕೆ ಕಾರ್ಯಾಚರಣೆ:
ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು, ಹೆಚ್ಚಾಗಿ ವಿದ್ಯಾರ್ಥಿಗಳು, ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಶನಿವಾರದಿಂದಲೇ ಆರಂಭಿಸಲಾಗಿರುವ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಇದುವರೆಗೂ 900ಕ್ಕೂ ಹೆಚ್ಚು ಭಾರತೀಯರನ್ನು ಉಕ್ರೇನ್ ನೆಲದಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲಾಗಿದೆ.
ನಾಗರಿಕರನ್ನು ರಕ್ಷಿಸುವಂತೆ ವಿಶ್ವಸಂಸ್ಥೆ ಸಂದೇಶ:
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಅಪರೂಪದ ತುರ್ತು ವಿಶೇಷ ಅಧಿವೇಶನದಲ್ಲಿ ಎಲ್ಲಾ ಪಕ್ಷಗಳು ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಕರೆ ನೀಡಿದವು. ಸಂಯಮ ಕಾಯ್ದುಕೊಂಡು ಮಾತುಕತೆ ಪ್ರಾರಂಭಿಸಲು ಸಲಹೆ ನೀಡಲಾಯಿತು. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್, "ಹಿಂಸಾಚಾರವನ್ನು ಹೆಚ್ಚಿಸುವುದು ನಾಗರಿಕರ ಸಾವಿಗೆ ಕಾರಣವಾಗುತ್ತಿದೆ. ಸಾಕು, ಸೈನಿಕರು ಬ್ಯಾರಕ್‌ಗಳಿಗೆ ಹಿಂತಿರುಗಬೇಕಾಗಿದೆ, ನಾಗರಿಕರನ್ನು ರಕ್ಷಿಸಬೇಕು," ಎಂದರು.
"ನಾವು ಎಲ್ಲಾ ಪಕ್ಷಗಳಿಂದ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುತ್ತೇವೆ; ಗರಿಷ್ಠ ಸಂಯಮವನ್ನು ರೂಢಿಸಿಕೊಂಡು ಶಾಂತಿ ಮಾತುಕತೆ ಪ್ರಾರಂಭಿಸಿ. ರಾಜತಾಂತ್ರಿಕತೆ ಮತ್ತು ಸಂವಾದ ಮೇಲುಗೈ ಸಾಧಿಸಬೇಕು" ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಹೇಳಲಾಗಿದೆ.












Click it and Unblock the Notifications