ಅಮೆರಿಕ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ನಿರ್ಬಂಧಿಸಿದ ಬ್ರಿಟನ್
ಲಂಡನ್, ಮಾರ್ಚ್ 9: ಉಕ್ರೇನ್ ದೇಶದ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು ಖಂಡಿಸಿ ರಷ್ಯಾದ ಅನಿಲ, ಕಚ್ಚಾ ತೈಲ ಸೇರಿ ಎಲ್ಲಾ ಬಗೆಯ ಆಮದುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಈ ಬೆನ್ನಲ್ಲೇ ರಷ್ಯಾದಿಂದ ತೈಲೋತ್ಪನ್ನ ಆಮದು ಮಾಡಿಕೊಳ್ಳುವುದನ್ನು ಬ್ರಿಟನ್ ಕೂಡಾ ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಂತ ಹಂತವಾಗಿ ಆಮದು ನಿರ್ಬಂಧ ಜಾರಿಯಾಗಲಿದ್ದು, 2022ರ ಅಂತ್ಯದ ವೇಳೆಗೆ ಈ ನಿರ್ಬಂಧ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.
ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾದ ಕ್ರಮ ಖಂಡಿಸಿ ಈ ಮೊದಲು ಅಮೆರಿಕ ರಷ್ಯಾದ ತೈಲೋತ್ಪನ್ನಗಳನ್ನು ನಿರ್ಬಂಧಿಸಿತ್ತು. ಇದೀಗ ಬ್ರಿಟನ್ ಸಹ ಇದೇ ಹಾದಿ ಹಿಡಿದಿದೆ. ಬ್ರಿಟನ್ನಲ್ಲಿ ಬಳಕೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ.8ರಷ್ಟು ಬೇಡಿಕೆಯನ್ನು ರಷ್ಯಾದಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳು ಪೂರೈಸುತ್ತಿವೆ.

ರಷ್ಯಾದಿಂದ ಪೂರೈಕೆಯಾಗುತ್ತಿರುವ ನೈಸರ್ಗಿಕ ಅನಿಲಕ್ಕೆ ಈ ನಿರ್ಬಂಧಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಬ್ರಿಟನ್ನಲ್ಲಿ ಬಳಕೆಯಾಗುವ ನೈಸರ್ಗಿಕ ಅನಿಲದ ಪೈಕಿ ಶೇ.4ರಷ್ಟು ಪ್ರಮಾಣವನ್ನು ರಷ್ಯಾದಿಂದ ಆಮದಾಗುವ ಅನಿಲ ಪೂರೈಸುತ್ತಿದೆ. ಈ ಬಳಕೆಯನ್ನು ಸಂಪೂರ್ಣ ನಿಲ್ಲಿಸಲು ಚಿಂತನೆ ಆರಂಭವಾಗಿದೆ ಎಂದು ಬ್ರಿಟನ್ ತಿಳಿಸಿದೆ.
ಅಮೆರಿಕ ನಂತರ ಬ್ರಿಟನ್ ಸಹ ಅನಿಲ, ಕಚ್ಚಾ ತೈಲ ನಿರ್ಬಂಧ ಕ್ರಮಕ್ಕೆ ಮುಂದಾಗಿದ್ದು, ಬ್ರಿಟನ್ನ ಈ ಕ್ರಮಕ್ಕೆ ಸ್ವದೇಶದ ಜನರಿಂದ ನಿರೀಕ್ಷಿತ ಪೂರಕ ಸ್ಪಂದನೆ ಸಿಕ್ಕಿಲ್ಲ. ಈಗಾಗಲೇ ಹಣದುಬ್ಬರದಲ್ಲಿ ನಲುಗುತ್ತಿರುವ ಬ್ರಿಟನ್ನ ಜನರಿಗೆ ಸರ್ಕಾರದ ಈ ಕ್ರಮದಿಂದ ಇಂಧನ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ. ಉಕ್ರೇನ್ ಮೇಲಿನ ದಾಳಿಯ ನಂತರ ಇಡೀ ಜಗತ್ತಿನಲ್ಲಿ ಷೇರುಪೇಟೆ ಸತತ ಕುಸಿತ ಕಂಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ.

ರಷ್ಯಾದ ತೈಲೋತ್ಪನ್ನ ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ನ ಇಂಧನ ಮತ್ತು ಕೈಗಾರಿಕೆ ಸಚಿವ ಕ್ವಾಸಿ ಕ್ವಾರ್ಟೆಂಗ್, ""ರಷ್ಯಾದ ಬದಲು ನೆದರ್ಲೆಂಡ್ಸ್ ಮತ್ತು ಗಲ್ಫ್ ದೇಶಗಳ ಮೂಲಕ ತೈಲೋತ್ಪನ್ನಗಳ ಆಮದು ಮಾಡಿಕೊಳ್ಳಲು ಹೆಚ್ಚು ಗಮನ ಕೊಡಲಾಗುವುದು. ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಕ್ರಮ ಕೈಗೊಂಡಿದ್ದೇವೆ,'' ಎಂದು ತಿಳಿಸಿದ್ದಾರೆ.
ರಷ್ಯಾದ ಮೇಲಿನ ನಿರ್ಬಂಧದಿಂದ ಉಂಟಾಗುವ ತೈಲ ಬೇಡಿಕೆ ತುಂಬಿಕೊಳ್ಳಲು ಹಂತಹಂತವಾಗಿ ಮಿತ್ರದೇಶಗಳಿಂದ ಆಮದು ಮಾಡಿಕೊಳ್ಳುವ ತೈಲೋತ್ಪನ್ನಗಳ ಪ್ರಮಾಣ ಹೆಚ್ಚಿಸುತ್ತೇವೆ. ಈಗಾಗಲೇ ಯುರೋಪ್ ಸೇರಿದಂತೆ ಜಗತ್ತಿನ ಹಲವು ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.
ರಷ್ಯಾದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ.70ರಷ್ಟು ಪ್ರಮಾಣಕ್ಕೆ ಗ್ರಾಹಕರೇ ಸಿಗುತ್ತಿಲ್ಲ ಎಂದು ಕ್ವಾಸಿ ಕ್ವಾರ್ಟೆಂಗ್ ಹೇಳಿದರು. ರಷ್ಯಾ ವಿರುದ್ಧದ ನಿರ್ಬಂಧವನ್ನು ಜಾರಿಗೊಳಿಸಲು ಬ್ರಿಟನ್ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರೂಪಿಸಿದೆ. ರಷ್ಯಾದ ತೈಲೋತ್ಪನ್ನಗಳನ್ನು ರಷ್ಯಾದ ಹಡಗುಗಳೇ ಹೊತ್ತುತಂದರೆ ನಿರ್ಬಂಧ ಅನ್ವಯವಾಗುವ ನಿಯಮ ಇತ್ತು. ಇದನ್ನು ವಿರೋಧಿಸಿದ್ದ ಬ್ರಿಟನ್ನ ಸ್ಥಳೀಯ ನೌಕರರು ವಿದೇಶಿ ನೌಕೆಗಳು ಹೊತ್ತು ತರುವ ರಷ್ಯಾದ ತೈಲೋತ್ಪನ್ನಗಳನ್ನೂ ಅನ್ಲೋಡ್ ಮಾಡುವುದಿಲ್ಲ ಎಂದು ಮುಷ್ಕರ ಹೂಡಿದ್ದರು.












Click it and Unblock the Notifications