ರಷ್ಯಾದಿಂದ ಶಸ್ತ್ರಾಸ್ತ್ರಗಳ ಆಮದು ಕಡಿಮೆಗೊಳಿಸಿದ್ದೇಕೆ ಭಾರತ!?
ನವದೆಹಲಿ, ಮಾರ್ಚ್, 15: ಭಾರತವು ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರಗಳಲ್ಲಿ ರಷ್ಯಾದ ಪಾಲು ಇಳಿಕೆಯಾಗಿದೆ. ಕಳೆದ 2012-17ರಲ್ಲಿ ಶೇ.69ರಷ್ಟಿದ್ದ ರಷ್ಯಾದ ಪಾಲು 2017-21ರ ವೇಳೆಗೆ ಶೇ.46ಕ್ಕೆ ಕುಸಿದಿದೆ ಎಂದು ಸ್ಟಾಕ್‌ಹೋಮ್ ಮೂಲದ ರಕ್ಷಣಾ ಚಿಂತಕರ ಚಾವಡಿ ಸಿಪ್ರಿ ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 20ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದ್ದರಂತೆ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿವೆ.
ಕಳೆದ 2012-2016ಕ್ಕೆ ಹೋಲಿಸಿದರೆ 2017-21ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣವು ಶೇ.21ರಷ್ಟು ಇಳಿಕೆಯಾಗಿದೆ. ಅದಾಗ್ಯೂ, ಜಾಗತಿಕ ಮಟ್ಟದಲ್ಲಿ 2017-21ನೇ ಸಾಲಿನಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಬಹುದೊಡ್ಡ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಈ ಅವಧಿಯಲ್ಲಿ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇಕಡಾ 11ರಷ್ಟಿದೆ ಎಂದು ವರದಿ ಹೇಳಿದೆ.

ರಷ್ಯಾದ ಶಸ್ತ್ರಾಸ್ತ್ರಗಳ ಆಮದು ಪ್ರಮಾಣದಲ್ಲಿ ಇಳಿಕೆ:
"ಕಳೆದ 2012-16 ಮತ್ತು 2017-21 ಎರಡೂ ಅವಧಿಯಲ್ಲಿ ಭಾರತಕ್ಕೆ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ರಾಷ್ಟ್ರಗಳಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅದಾಗ್ಯೂ, ಈ ಎರಡು ಅವಧಿಯಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳುವ ಒಟ್ಟು ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಶೇ.47ರಷ್ಟು ಕುಸಿತದಿದೆ," ಎಂದು ಸ್ಟಾಕ್‌ಹೋಮ್ ಮೂಲದ ರಕ್ಷಣಾ ಚಿಂತಕರ ಚಾವಡಿ ಸಿಪ್ರಿ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಐದು ವರ್ಷಗಳ ವ್ಯತ್ಯಾಸದಲ್ಲಿ ರಷ್ಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಒಟ್ಟು ಶಸ್ತ್ರಾಸ್ತ್ರಗಳ ಶೇಕಡಾವಾರು ಪ್ರಮಾಣವು ಶೇ.69ರಿಂದ ಶೇ.46ಕ್ಕೆ ಇಳಿಕೆಯಾಗಿದೆ.
ಫ್ರ್ಯಾನ್ಸ್ ಶಸ್ತ್ರಾಸ್ತ್ರ ಆಮದು ಪ್ರಮಾಣ ಹೆಚ್ಚಳ:
ರಷ್ಯಾದಿಂದ ಶಸ್ತ್ರಾಸ್ತ್ರ ಆಮದು ಪ್ರಮಾಣ ಇಳಿಕೆಯಾದ ಮಾತ್ರಕ್ಕೆ ಭಾರತವು ಶಸ್ತ್ರಾಸ್ತ್ರ ಆಮದು ಪ್ರಮಾಣವನ್ನು ತಗ್ಗಿಸಿದೆ ಎಂದರ್ಥವಲ್ಲ. ಒಂದು ಮಗ್ಗಲಿನಲ್ಲಿ ರಷ್ಯಾದ ಶಸ್ತ್ರಾಸ್ತ್ರ ಆಮದು ಪ್ರಮಾಮದಲ್ಲಿ ಇಳಿಕೆಯಾಗಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಫ್ರ್ಯಾನ್ಸ್ ಶಸ್ತ್ರಾಸ್ತ್ರಗಳ ಆಮದು ಪ್ರಮಾಣವು ಹೆಚ್ಚಳವಾಗಿದೆ. ಏಕೆಂದರೆ ಒಂದು ಕಡೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತವು ದೀರ್ಘಾವಧಿ ಯೋಜನೆಗಾಗಿ ತನ್ನ ಬತ್ತಳಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ.
ರಷ್ಯಾದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಸರಬರಾಜು ವೇಗ ತಗ್ಗಿದ್ದು, ಭಾರತಕ್ಕೆ ರವಾನಿಸುವ ಶಸ್ತ್ರಾಸ್ತ್ರಗಳು ವಿಳಂಬವಾಗುತ್ತಿರುವ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಾಲ್ಕು ದೇಶಗಳಿಗೆ ಹೆಚ್ಚು ಆದ್ಯತೆ ನೀಡಿದ ರಷ್ಯಾ:
ಜಾಗತಿಕ ಮಟ್ಟದಲ್ಲಿ ರಷ್ಯಾ ಶಸ್ತ್ರಾಸ್ತ್ರಗಳ ರಫ್ತು ಪ್ರಮಾಣವು ಶೇ.26ರಷ್ಟು ಇಳಿಕೆಯಾಗಿದೆ. ಕಳೆದ 2017 ರಿಂದ 2021ರ ಸಾಲಿನಲ್ಲಿ ರಷ್ಯಾವು 45 ರಾಷ್ಟ್ರಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದೆ. ಇನ್ನು, ಶಸ್ತ್ರಾಸ್ತ್ರ ರಫ್ತು ವಿಚಾರದಲ್ಲಿ ಯುಎಸ್ಎ ಮತ್ತು ರಷ್ಯಾ ನಡುವೆ ಪೈಪೋಟಿ ನಡೆಯುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಷ್ಯಾ ಪ್ರಮುಖವಾಗಿ ನಾಲ್ಕು ದೇಶಗಳಿಗೆ ಶಸ್ತ್ರಾಸ್ತ್ರ ರಫ್ತು ಮಾಡುವುದಕ್ಕೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ತಿಳಿದು ಬಂದಿದೆ. ಈ ನಾಲ್ಕು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಚೀನಾ, ಈಜಿಪ್ತ್, ಅಲ್ಜೀರಿಯಾಗಳು ಸೇರಿವೆ.
"2012-16 ಮತ್ತು 2017-21ರ ನಡುವೆ ರಷ್ಯಾದ ಶಸ್ತ್ರಾಸ್ತ್ರ ರಫ್ತಿನಲ್ಲಿನ ಒಟ್ಟಾರೆ ಕುಸಿತದಲ್ಲಿ ಭಾರತದ ಶೇ.47 ಮತ್ತು ವಿಯೆಟ್ನಾಂನ ಶೇ.71ರಷ್ಟು ಪ್ರಮಾಣವು ಪ್ರಮುಖ ಕಾರಣವಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ರಷ್ಯಾದಿಂದ ಚೀನಾ ಮತ್ತು ಈಜಿಪ್ಟ್‌ಗೆ ಶಸ್ತ್ರಾಸ್ತ್ರ ಪೂರೈಕೆ:
ಚೀನಾ ಮತ್ತು ಈಜಿಪ್ಟ್‌ಗೆ ರಷ್ಯಾ ರಫ್ತು ಮಾಡುವ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಚೀನಾ ರಫ್ತು ಮಾಡುವ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಶೇ. 60ರಷ್ಟು ಹೆಚ್ಚಾಗಿದ್ದರೆ, ಈಜಿಪ್ಟ್‌ಗೆ ಶೇ.72ರಷ್ಟು ರಷ್ಯಾದ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಏರಿಕೆಯಾಗಿದೆ. ಇದರಿಂದಾಗಿ ರಷ್ಯಾದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವ ಎರಡನೇ ಮತ್ತು ಮೂರನೇ ಅತಿದೊಡ್ಡ ರಾಷ್ಟ್ರಗಳಾಗಿ ಚೀನಾ ಮತ್ತು ಈಜಿಪ್ಟ್ ಗುರುತಿಸಿಕೊಂಡಿವೆ. ಅದಾಗ್ಯೂ, ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ರಫ್ತುಗಳಲ್ಲಿನ ಒಟ್ಟಾರೆ ಇಳಿಕೆಯನ್ನು ಸರಿದೂಗಿಸಲು ಸಾಧ್ಯವಾಗಿಲ್ಲ.












Click it and Unblock the Notifications