Taliban: ತಾಲಿಬಾನ್ ಉಗ್ರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ರಷ್ಯಾ!
ತಾಲಿಬಾನ್ ಉಗ್ರರಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಜಗತ್ತಿನಾದ್ಯಂತ ಉಗ್ರರು ಎಂಬ ಪಟ್ಟ ಕಟ್ಟಿಕೊಂಡು ಸುತ್ತಾಡುತ್ತಿದ್ದ ತಾಲಿಬಾನಿಗಳಿಗೆ ಇದೀಗ ಹೊಸ ಮನ್ವಂತರವೇ ಆರಂಭವಾಗಿದೆ. 2021 ರಲ್ಲಿ ತಾಲಿಬಾನಿಗಳ ಉಪಟಳ ತಡೆಯಲು ಆಗದೆ ಅಮೆರಿಕ ಅಲ್ಲಿಂದ ಎಸ್ಕೇಪ್ ಆದ ನಂತರ ಇದೇ ಮೊದಲ ಬಾರಿಗೆ ತಾಲಿಬಾನ್ ಉಗ್ರರಿಗೆ ಜಾಗತಿಕ ಮಟ್ಟದಲ್ಲೂ ಮನ್ನಣೆ ಸಿಗುತ್ತಿದೆ. ಈ ಮೂಲಕ ತಾಲಿಬಾನ್ ಉಗ್ರರಿಗೆ ರಷ್ಯಾ ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಗಾದ್ರೆ ರಷ್ಯಾ ಕೊಟ್ಟಿರುವ ಗುಡ್‌ನ್ಯೂಸ್ ಏನು? ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನಿಗಳಿಗೆ ಇದರಿಂದ ಏನು ಪ್ರಯೋಜನ?
ತಾಲಿಬಾನ್ ಅಲ್ಲ.. ಅಲ್ಲ.. ಈ ಹಾಡನ್ನು ನೀವು ಕೇಳಿಯೇ ಇರ್ತೀರಿ. ಪವರ್ ಸ್ಟಾರ್ ಬಿರುದು ಪಡೆದ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾದಲ್ಲಿ ಈ ಹಾಡಿನ ಸಾಲುಗಳು ಸಖತ್ ಸದ್ದು ಮಾಡಿದ್ದವು. ಹೀಗಿದ್ದಾಗ ತಾಲಿಬಾನ್ ಪದ ಕರ್ನಾಟಕದಲ್ಲಿ ಕೂಡ ಸಿಕ್ಕಾಪಟ್ಟೆ ಫೇಮಸ್ ಎನ್ನಬಹುದು. ತಾಲಿಬಾನ್ ಅಂದ್ರೆ ಜಗತ್ತಿನಾದ್ಯಂತ ಒಂದು ಕೆಟ್ಟ ಮನೋಭಾವ ಬೇಳೆದು, ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ತಾಲಿಬಾನ್ ಹೆಸರಿನ ಜೊತೆಯಲ್ಲೇ ಉಗ್ರರು ಎಂಬ ಪದ ಕೂಡ ಬೆರೆತು ಹೋಗಿದೆ. ಇಂತಹ ಸಮಯದಲ್ಲೇ ರಷ್ಯಾ ಇದೀಗ ಗುಡ್ ನ್ಯೂಸ್ ಒಂದನ್ನ ತಾಲಿಬಾನ್ ಸರ್ಕಾರಕ್ಕೆ ನೀಡಲು ಸಜ್ಜಾಗಿದೆ!

ತಾಲಿಬಾನ್ ಉಗ್ರರು ಅಲ್ಲ.. ಅಲ್ಲ..!
ಹೌದು, ಅಮೆರಿಕದ ನಾಯಕರಿಗೆ ತಿರುಗೇಟು ನೀಡುವ ರೀತಿಯಲ್ಲಿ ಇದೀಗ ರಷ್ಯಾ ಸರ್ಕಾರ ಮಹತ್ವದ ತೀರ್ಮಾನ ಒಂದನ್ನ ತೆಗೆದುಕೊಂಡಿದೆ. ಆ ಪ್ರಕಾರ, ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್ ಗುಂಪನ್ನು ತೆಗೆದು ಹಾಕಲು ಇದೀಗ ರಷ್ಯಾ ನಿರ್ಧಾರ ಮಾಡಿದೆ. ಈ ಕುರಿತು ಇದೀಗ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಅಫ್ಘಾನಿಸ್ತಾನ ದೇಶದಲ್ಲಿ ಸರ್ಕಾರ ರಚನೆ ಮಾಡಿದ್ದರೂ, ತಾಲಿಬಾನ್ ಸಂಘಟನೆಗೆ ಉಗ್ರರು ಎಂಬ ಪಟ್ಟ ಹಾಗೇ ಇತ್ತು. ಆದರೆ ಇದೀಗ ಪ್ರಪಂಚದಲ್ಲೇ ಮೊದಲ ಬಾರಿಗೆ ರಷ್ಯಾ ಹೊಸ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ.
20 ವರ್ಷ ಹೋರಾಡಿದ್ದ ತಾಲಿಬಾನಿಗಳು!
ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸಂಪೂರ್ಣ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ, 2021 ರ ಆಗಸ್ಟ್ 31ನ್ನೇ ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಹೀಗೆ 3 ವರ್ಷಗಳಿಂದ ಇಡೀ ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಬಿದ್ದಿದ್ದರೂ, ಜಾಗತಿಕವಾಗಿ ತಾಲಿಬಾನ್ ಯಾವುದೇ ರೀತಿಯ ಬೆಂಬಲ ಪಡೆಯುತ್ತಿಲ್ಲ, ಇಂತಹ ಸಮಯದಲ್ಲೇ ರಷ್ಯಾದ ಸರ್ಕಾರ ಈಗ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ. ತಾಲಿಬಾನ್ ಸಂಘಟನೆಯನ್ನು 'ಉಗ್ರರು' ಎಂಬ ಪಟ್ಟಿಯಿಂದ ಕೈಬಿಡಲು ಈಗ ನಿರ್ಧಾರ ಕೈಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ನಿರ್ಧಾರ ಯಾವ ರೀತಿ ಪರಿಣಾಮ ಬೀರಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications