ಕಾಂಗ್ರೆಸ್ ಜತೆ ಕೈಜೋಡಿಸುವಂತೆ 'ಎನ್‌ಆರ್‌ಐ'ಗಳಿಗೆ ರಾಹುಲ್ ಆಹ್ವಾನ
ವಾಷಿಂಗ್ಟನ್, ಸೆಪ್ಟೆಂಬರ್ 21: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಿದರು. ಈ ವೇಳೆ ಅವರು ಕಾಂಗ್ರೆಸ್ ಜತೆ ಕೆಲಸ ಮಾಡುವಂತೆ ಎನ್‌ಆರ್‌ಐಗಳಿಗೆ ಆಹ್ವಾನ ನೀಡಿದರು.
"ಎನ್‌ಆರ್‌ಐಗಳು ಅಸಮಾನ್ಯ ಜ್ಞಾನವನ್ನು ಹೊಂದಿದ್ದಾರೆ. ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಎನ್‌ಆರ್‌ಐಗಳಿಗೆ ಅನುಭವ ಇದೆ. ನಾನು ನಿಮ್ಮನ್ನು ಕಾಂಗ್ರೆಸ್ ಜತೆ ಕೆಲಸ ಮಾಡಲು ಆಹ್ವಾನಿಸುತ್ತೇನೆ. ನಮ್ಮ ಜತೆ ಬಂದು ಭವಿಷ್ಯದ ಬಗ್ಗೆ ಚರ್ಚೆ ನಡೆಸಿ," ಎಂದವರು ಎನ್‌ಆರ್‌ಐಗಳನ್ನು ಆಹ್ವಾನಿಸಿದರು.

"ಮೂಲ ಕಾಂಗ್ರೆಸ್ ಆಂದೋಲನವು ಎನ್‌ಆರ್‌ಐ ಚಳುವಳಿಯಿಂದ ಆರಂಭವಾಗಿದೆ. ಮಹಾತ್ಮಾ ಗಾಂಧೀಜಿ ಓರ್ವ ಅನಿವಾಸಿ ಭಾರತೀಯರಾಗಿದ್ದರು. ಜವಾಹರಲಾಲ್ ನೆಹರು, ಅಂಬೇಡ್ಕರ್, ಆಜಾದ್, ಪಟೇಲ್ ಈ ಮಹನೀಯರೆಲ್ಲರೂ ವಿದೇಶಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತು ನಂತರ ಭಾರತಕ್ಕೆ ಬಂದು, ಅಲ್ಲಿ ದೊರೆತ ಕಲ್ಪನೆಗಳನ್ನು ಬಳಸಿಕೊಂಡು ಭಾರತವನ್ನು ಮಾರ್ಪಾಡುಗೊಳಿಸಿದರು," ಎಂದು ಅಭಿಪ್ರಾಯಪಟ್ಟರು.
"ನಮ್ಮ ದೇಶದಲ್ಲಿ ಹಲವು ಧರ್ಮಗಳಿವೆ. ಅನೇಕ ಭಾಷೆಗಳು ನಮ್ಮ ದೇಶದಲ್ಲಿದೆ. ಪ್ರತಿಯೊಬ್ಬರೂ ಸಂತಸವಾಗಿ ಜೀವಿಸುತ್ತಿದ್ದಾರೆ. ಈ ಎಲ್ಲಕ್ಕೂ ಕಾಂಗ್ರೆಸ್ ಪಕ್ಷದ ವಿಚಾರಗಳೇ ಕಾರಣ. ಕಾಂಗ್ರೆಸ್ ಗೆ 130ವರ್ಷಗಳ ಇತಿಹಾಸವಿರಬಹುದು. ಆದರೆ 1000ವರ್ಷಗಳಿಗೂ ಮೀರಿದ ವಿಚಾರಗಳನ್ನು ಕಾಂಗ್ರೆಸ್ ಹೊಂದಿದೆ," ಎಂದು ಅವರು ಹೇಳಿದರು.

ಕೃಷಿಯು ಅತಿ ಮಹತ್ವದ ಆಸ್ತಿಯಾಗಿದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿದೆ. ನಾವು ಶೀತಲ ಗೃಹಗಳ ಸರಪಳಿಯನ್ನು ಅಭಿವೃದ್ಧಿಪಡಿಸಬೇಕು. ಆಹಾರ ಸಂಸ್ಕರಣ ಘಟಕಗಳನ್ನು ಅನ್ನದಾತರ ಸನಿಹಕ್ಕೆ ತರಬೇಕು. ಭಾರತೀಯ ಕೃಷಿಯನ್ನು ಬಲಪಡಿಸಬೇಕು. ಎಲ್ಲಕ್ಕೂ ಮಿಗಿಲಾಗಿ ನಮ್ಮ ರೈತರನ್ನು ಸದೃಢರಾಗಿಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
"ನಮ್ಮ ದೇಶದ ಐಐಟಿಗಳ ಬಗೆಗೂ ನಾನು ದೃಷ್ಟಿಕೋನ ಹೊಂದಿದ್ದೇನೆ. ಅಮೆರಿಕದಲ್ಲಿ ವಿಶ್ವವಿದ್ಯಾಲಯಗಳು ಜ್ಞಾನ ಜಾಲಗಳಾಗಿದ್ದು, ಅವುಗಳನ್ನು ಪರಸ್ಪರ ಬೆಸೆಯಲಾಗಿದೆ. ದೈನಂದಿನ ವ್ಯವಹಾರ, ಆರ್ಥಿಕತೆಯೊಂದಿಗೆ ವಿವಿಗಳು ಸಂಪರ್ಕ ಹೊಂದಿವೆ. ಆದರೆ ನಮ್ಮ ಐಐಟಿಗಳು ಪ್ರಚಂಡ ಸಂಸ್ಥೆಗಳೇನೋ ಹೌದು. ಆದರೆ ಅವುಗಳಿಗೆ ಇಲ್ಲಿನಂತೆ ಸಂಪರ್ಕ ಜಾಲವಿಲ್ಲ. ನಮ್ಮ ಐಐಟಿಗಳನ್ನು ಕೈಗಾರಿಕೆಗಳು ಮತ್ತು ದೈನಂದಿನ ವ್ಯವಹಾರಗಳಿಗೆ ಸಂಪರ್ಕಿಸಲು ಸಾಧ್ಯವಾದರೆ ಆಗ ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಬಹುದು," ಎಂದು ತಮ್ಮ ದೂರದೃಷ್ಟಿಯನ್ನು ರಾಹುಲ್ ಹಂಚಿಕೊಂಡಿದ್ದಾರೆ.












Click it and Unblock the Notifications