Rahul Gandhi: ಬಿಜೆಪಿ, ಪ್ರಧಾನಿ ಮೋದಿ ಬಗ್ಗೆ ಜನರಿಗೆ ಈಗ ಭಯವಿಲ್ಲ ಎಂದ ರಾಹುಲ್ ಗಾಂಧಿ
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಭಾರತೀಯರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಇದ್ದ ಭಯ ಮಾಯವಾಗಿದೆ ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಡಲ್ಲಾಸ್‌ನಲ್ಲಿ ಅನಿವಾಸಿ ಭಾರತೀಯರು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ರಾಜಕೀಯದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡರು.
2024ರ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇಷ್ಟು ಬೇಗ ಬದಲಾವಣೆ ಆಗುತ್ತದೆ ಎಂದು ನನಗೆ ಅಚ್ಚರಿಯಾಯಿತು. ಫಲಿತಾಂಶ ಬರುತ್ತಿದ್ದಂತೆ ಬಿಜೆಪಿಯ ಭಯವು ಇಲ್ಲದಂತಾಯಿತು, ಭಾರತದಲ್ಲಿ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೆದರುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.

ಇದು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷದ ದೊಡ್ಡ ಸಾಧನೆಯಲ್ಲ. ಪ್ರಜಾಪ್ರಭುತ್ವದ ಮಹತ್ವದನ್ನು ಅರಿತುಕೊಂಡಿರುವ ಭಾರತದ ಜನತೆಯ ಸಾಧನೆ ಇದು. ಪ್ರಜಾಪ್ರಭುತ್ವದ ಮೇಲಿನ ದಬ್ಬಾಳಿಕೆ, ಸಂವಿಧಾನದ ಮೇಲೆ ದಾಳಿ, ರಾಜ್ಯಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅರಿತ ಮತದಾರರ ದೊಡ್ಡ ಸಾಧನೆ ಇದು ಎಂದರು.
ಆರೆಸ್ಸೆಸ್ ಮತ್ತು ಕಾಂಗ್ರೆಸ್ ಪಕ್ಷಗಳ ಭಾರತವನ್ನು ಅರಿತಿರುವ, ನೋಡುವಲ್ಲಿ ಎಷ್ಟು ವ್ಯತ್ಯಾಸವಿದೆ ಎನ್ನುವ ಬಗ್ಗೆ ಕೂಡ ರಾಹುಲ್ ಗಾಂಧಿ ಮಾತನಾಡಿದರು. ಭಾರತ ದೇಶ ಏಕತೆಯ ಕಲ್ಪನೆ ಎಂದು ಆರೆಸ್ಸೆಸ್ ನಂಬುತ್ತದೆ, ಆದರೆ ಭಾರತ ಬಹುತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಯುನೈಟೆಡ್ ಸ್ಟೇಟ್ಸ್ ರೀತಿಯಲ್ಲಿ ಭಾರತದಲ್ಲಿ ಕೂಡ ಎಲ್ಲರೂ ಭಾಗವಹಿಸಬೇಕು ಎಂದು ಬಯಸುವುದಾಗಿ ತಿಳಿಸಿದರು.
ಭಾರತೀಯರಿಗೆ ಅರ್ಥವಾಗಿದೆ
ಭಾರತದ ಬಗ್ಗೆ ತಮ್ಮ ದೃಷ್ಟಿಕೋನದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, "ಎಲ್ಲರಿಗೂ ಕನಸು ಕಾಣಲು ಅವಕಾಶ ಕೊಡಬೇಕು ಎನ್ನುವುದನ್ನು ನಾನು ನಂಬುತ್ತೇನೆ ಎಂದರು. ಜಾತಿ, ಭಾಷೆ, ಧರ್ಮ, ಸಂಪ್ರದಾಯ ಮತ್ತು ಇತಿಹಾಸವನ್ನು ಲೆಕ್ಕಿಸದೆ ಎಲ್ಲರಿಗೂ ಅವಕಾಶ ನೀಡಬೇಕು. ಸತತವಾಗಿ ಹೋರಾಟ ಮಾಡಿದ ಬಳಿಕ ಲಕ್ಷಾಂತರ ಜನಕ್ಕೆ ಈ ಸತ್ಯ ಅರಿವಾದಗಿದೆ. ರಾಜ್ಯಗಳ ಒಕ್ಕೂಟದಲ್ಲಿ ಎಲ್ಲಾ ಭಾಷೆಗಳಿಗೆ ಗೌರವ, ಧರ್ಮಗಳಿಗೆ, ಸಂಪ್ರದಾಯಗಳಿಗೆ, ಜಾತಿಗಳಿಗೆ ಗೌರವ ಕೊಡಬೇಕು ಎಂದರು.
ಈಗ ನಾನು ಹೇಳುತ್ತಿರುವ ಎಲ್ಲಾ ವಿಚಾರಗಳು ಸಂವಿಧಾನದಲ್ಲಿದೆ. ಆಧುನಿಕ ಭಾರತಕ್ಕೆ ಸಂವಿಧಾನವೇ ಅಡಿಪಾಯವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಇದು ಅರ್ಥವಾಗಿದೆ. ಬಿಜೆಪಿಯವರು ನಮ್ಮ ಸಂಪ್ರದಾಯದ ಮೇಲೆ, ಭಾಷೆಯ ಮೇಲೆ, ರಾಜ್ಯಗಳ ಮೇಲೆ, ಇತಿಹಾಸದ ಮೇಲೆ ದಾಳಿ ಮಾಡುತ್ತಿರುವುದು ಭಾರತೀಯರಿಗೆ ಅರ್ಥವಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಭಾನುವಾರ ಅವರು ಟೆಕ್ಸಾಸ್‌ನ ಡಲ್ಲಾಸ್‌ಗೆ ಆಗಮಿಸಿದ್ದರು. ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಭಾರತೀಯ ಡಯಾಸ್ಪೊರಾ ಸದಸ್ಯರು ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.












Click it and Unblock the Notifications