ಬಾಂಗ್ಲಾದೇಶದಲ್ಲಿ ಮತ್ತೆ ಪ್ರತಿಭಟನೆ: ಸುಪ್ರೀಂನ ಎಲ್ಲಾ ನ್ಯಾಯಾಧೀಶರ ರಾಜೀನಾಮೆಗೆ ಒತ್ತಾಯ
ಢಾಕಾ ಆಗಸ್ಟ್ 10: ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ಕಾವು ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಮಧ್ಯಂತರ ಸರ್ಕಾರ ರಚನೆಯಾದ ನಂತರವೂ ಪ್ರತಿಭಟನೆಗಳು ಮುಂದುವರಿದಿವೆ. ಈಗ ಪ್ರತಿಭಟನಾಕಾರರು ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಹೌದು.. ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಹೆಚ್ಚಾಗಿ ವಿದ್ಯಾರ್ಥಿಗಳಿರುವ ಪ್ರತಿಭಟನಾಕಾರರು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಅನ್ನು ಸುತ್ತುವರೆದು, ಮುಖ್ಯ ನ್ಯಾಯಾಧೀಶರು ತಕ್ಷಣದ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ದೇಶ ತೊರೆದ ಶೇಖ್ ಹಸೀನಾ
ಉದ್ಯೋಗ ಮೀಸಲಾತಿ ವ್ಯವಸ್ಥೆಯ ವಿರುದ್ಧ ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಡುವೆ, ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ದೇಶವನ್ನು ತೊರೆದ ಅವರು ಈಗ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಶೇಖ್ ಹಸೀನಾ ಅವರ ನಂತರ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಹೊಸದಾಗಿ ರಚನೆಯಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇತರ ರಾಷ್ಟ್ರಗಳ ಜೊತೆ ಢಾಕಾದ ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ.
ಹಸೀನಾ ಅವರು ಕೊಲೆ, ಬಲವಂತದ ನಾಪತ್ತೆ, ಮನಿ ಲಾಂಡರಿಂಗ್ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಕಾನೂನು ಸಂಘರ್ಷವನ್ನು ಎದುರಿಸಬೇಕಿದೆ ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಹಿರಿಯ ಸದಸ್ಯ ಅಮೀರ್ ಖೋಸ್ರು ಮಹಮೂದ್ ಚೌಧರಿ ಹೇಳಿದ್ದಾರೆ.

ಸುದೀರ್ಘ ಸೇವೆ ಸಲ್ಲಿಸಿದ ನಾಯಕಿಯರಲ್ಲಿ ಒಬ್ಬರಾದ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ವಾರಗಟ್ಟಲೇ ಪ್ರತಿಭಟನೆ ಮಾಡಿದ್ದರು. ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಶೇಖ್ ಹಸೀನಾ ಅವರು ಆ.5ರಂದು ರಾಜೀನಾಮೆ ನೀಡಿದ್ದಾರೆ.
ವಿದ್ಯಾರ್ಥಿ ನಾಯಕರಿಗೆ ಮಂತ್ರಿಗಿರಿ
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆಯ ಪ್ರಮುಖ ಸಂಯೋಜಕರಲ್ಲಿ ಒಬ್ಬರಾದ ವಿದ್ಯಾರ್ಥಿ ನಾಯಕ ನಹಿದ್ ಇಸ್ಲಾಂ ಅವರಿಗೆ ದೇಶದ ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಪೋಸ್ಟ್‌ಗಳ ಸಚಿವಾಲಯದ ಉಸ್ತುವಾರಿ ನೀಡಲಾಗಿದೆ. ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ಪ್ರಮುಖ ನಾಯಕ ಆಸಿಫ್ ಮೆಹಮೂದ್‌ಗೆ ಯುವಜನ ಮತ್ತು ಕ್ರೀಡಾ ಸಚಿವಾಲಯದ ಉಸ್ತುವಾರಿ ನೀಡಲಾಗಿದೆ.

ಬಾಂಗ್ಲಾದೇಶದ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಮುಳ್ಳಿನ ಮೇಲೆ ಬಟ್ಟೆ ಸಿಲುಕಿದ ಸ್ಥಿತಿಯಲ್ಲೀಗ ನೆರೆ ದೇಶದ ಜೀವನ ಪರದಾಡುತ್ತಿದೆ. ಒಂದು ಕಡೆ ದಂಗೆ ಎದ್ದ ವಿದ್ಯಾರ್ಥಿಗಳು ಬಾಂಗ್ಲಾದ ಅಲ್ಪಸಂಖ್ಯಾತ ಜನರ ಮೇಲೆ ದಾಳಿ ಮಾಡಿರುವ ಆರೋಪ ಇದೆ. ಇನ್ನೊಂದು ಕಡೆ ನಮ್ಮ ಭಾರತದ ಸಹಾಯ ಪಡೆದು ಸ್ವತಂತ್ರ್ಯ ಪಡೆದ ದೇಶವೇ ಈಗ ಭಾರತದ ವಿರುದ್ಧ ತಿರುಗಿಬೀಳುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications