ಬೀದಿಗಳಲ್ಲಿ ನರಳುತ್ತಿರುವ ನಿರಾಶ್ರಿತರ ಬೆನ್ನಿಗೆ ನಿಂತ ರಾಜಕುಮಾರ!
ಲಂಡನ್: ರಾಜವಂಶ ಅಂದರೆ ಐಷಾರಾಮಿ ಜೀವನ ನಡೆಸೋದು, ಮನಸ್ಸಿಗೆ ಬಂದಂತೆ ದುಡ್ಡು ಖರ್ಚು ಮಾಡೋದು. ಹೀಗೆ ಏನೇನೋ ಇರುತ್ತೆ, ಆದ್ರೆ ಎಲ್ಲ ರಾಜವಂಶಸ್ಥರಿಗೂ ಇದೇ ಜೀವನ ಆಗಿರುವುದಿಲ್ಲ. ಈ ಮಾತನ್ನ ವೇಲ್ಸ್‌ನ ದಿವಂಗತ ರಾಜಕುಮಾರಿ ಡಯಾನರ ಪುತ್ರ ವಿಲಿಯಂ ಸಾಬೀತು ಮಾಡಿದ್ದಾರೆ. ಅರೆರೆ ರಾಜಕುಮಾರ ವಿಲಿಯಂ ಮಾಡಿದ್ದೇನು? ಅಂದ್ರಾ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಕೊರೊನಾ ಬಳಿಕ ಯುರೋಪ್ ರಾಷ್ಟ್ರಗಳು ಭಾರಿ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲೂ ಈ ದೇಶಗಳ ಸಾಲಿಗೆ ಬ್ರಿಟನ್ ಕೂಡ ಸೇರಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ತತ್ತಿರಿಸಿರುವ ಬ್ರಿಟನ್ ನಿರಾಶ್ರಿತರ ಸಮಸ್ಯೆ ಎದುರಿಸುತ್ತಿದೆ. ಇದರ ಜೊತೆ ಬೇರೆ ದೇಶಗಳಿಂದ ಬಂದ ನಿರಾಶ್ರಿತರು ಕೂಡ ಈ ದೇಶದಲ್ಲಿ ನರಳುತ್ತಿದ್ದಾರೆ. ಹೀಗಾಗಿ ದೇಶದಲ್ಲಿನ ನಿರಾಶ್ರಿತರಿಗೆ ಸೂರು ಕಲ್ಪಿಸುವ 5 ವರ್ಷದ ಅಭಿಯಾನಕ್ಕೆ ರಾಜಕುಮಾರ ವಿಲಿಯಂ ಈಗ ಚಾಲನೆ ನೀಡಿದ್ದಾರೆ. ರಾಜಕುಮಾರ ವಿಲಿಯಮ್ ತಮ್ಮ ರಾಯಲ್ ಫೌಂಡಶೇನ್ ಮೂಲಕ ಮೊದಲಿಗೆ 3 ಮಿಲಿಯನ್ ಪೌಂಡ್ಸ್ ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ ₹31 ಕೋಟಿ ನೀಡಿದ್ದಾರೆ. ಇದು ಮೊದಲನೇ ಕಂತು ಮಾತ್ರ, ಇನ್ನೂ ಹಲವು ಕಂತಿನಲ್ಲಿ ಹಣ ನೀಡಲು ಸಜ್ಜಾಗಿದ್ದಾರೆ.

ಹೇಗೆ ನಡೆಯಲಿದೆ ಈ ಕಾರ್ಯಾಚರಣೆ?
ಅಷ್ಟಕ್ಕೂ ದಕ್ಷಿಣ ಲಂಡನ್‌ನ ಒಂದು ಜಾಗವನ್ನ ಗುರುತಿಸಲಾಗಿದೆ. 6 ಪ್ರಮುಖ ಪ್ರದೇಶದ ಪೈಕಿ ಒಂದು ಜಾಗವನ್ನ ಆಯ್ಕೆ ಮಾಡಿಕೊಂಡಿರುವ ರಾಜಕುಮಾರ ವಿಲಿಯಂ ಹೊಸದಾಗಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ತಮ್ಮ ಜೀವನದ ನೈಜ ಘಟನೆಯನ್ನೂ ಇದೇ ವೇಳೆ ಸ್ಮರಿಸಿಕೊಂಡ ವಿಲಿಯಂ, ನಾನು ಮೊದಲ ಬಾರಿಗೆ ನಿರಾಶ್ರಿತರ ಗುಡಿಸಿಲಿಗೆ ಹೋಗಿದ್ದಾಗ 11 ವರ್ಷವಾಗಿತ್ತು, ಅಲ್ಲಿನ ಪರಿಸ್ಥಿತಿ ನನ್ನ ಮೇಲೆ ಆಳ ಮತ್ತು ದೀರ್ಘವಾದ ಪರಿಣಾಮ ಬೀರಿತ್ತು ಎಂದು ಬದುಕಿನ ಘಟನೆ ಮೆಲುಕು ಹಾಕಿದ್ದಾರೆ. ಹಾಗೇ ಮನೆಗಳನ್ನ ನಿರ್ಮಿಸಿ ನಿರಾಶ್ರಿತರ ಸಮಸ್ಯೆ ತೊಡೆದುಹಾಕಲಾಗುವುದು ಎಂದು ವಿಲಿಯಂ ಇದೇ ವೇಳೆ ಘೋಷಿಸಿದ್ದಾರೆ. 3 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಈ ದೇಶದಲ್ಲಿ ಇರುವ ಬಗ್ಗೆ ಅಂದಾಜಿಸಲಾಗಿದೆ.
ಅಕ್ರಮ ವಲಸಿಗರಿಗೆ ಗೇಟ್ ಪಾಸ್!
ಇತ್ತ ರಾಜಕುಮಾರ ವಿಲಿಯಂ ನಿರಾಶ್ರಿತರಿಗೆ ಸೂರು ಕಲ್ಪಿಸುವ ಮಾತನಾಡ್ತಿದ್ದಾರೆ, ಅತ್ತ ಬ್ರಿಟನ್ ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸಿಗರ ಪ್ರವೇಶ ತಡೆಯಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೊಸ ಯೋಜನೆ ಪ್ರಕಟಿಸಿದ್ದಾರೆ. ಅಕ್ರಮವಾಗಿ ಬಂದವರು ದೇಶದಲ್ಲಿ ರಾಜಾಶ್ರಯ ಕೋರಲು ಅವಕಾಶ ನೀಡುವುದಿಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ರು. ನೀವು ಇಲ್ಲಿಗೆ ಕಾನೂನುಬಾಹಿರವಾಗಿ ಬಂದಿದ್ದರೆ ರಾಜಾಶ್ರಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಉಳಿದುಕೊಳ್ಳುವುದೂ ಸಾಧ್ಯವಿಲ್ಲ ಎಂದು ರಿಷಿ ಸುನಕ್ ಅಕ್ರಮ ವಲಸಿಗರಿಗೆ ವಾರ್ನಿಂಗ್ ಕೊಟ್ಟಿದ್ದರು. ಇದಾದ ಬಳಿಕ ಬ್ರಿಟನ್‌ನ ಮೂಲೆ ಮೂಲೆಯಲ್ಲೂ ಅಕ್ರಮ ವಲಸಿಗರಿಗಾಗಿ ಸರ್ಚಿಂಗ್ ನಡೆಯುತ್ತಿದೆ (Illegal Immigration).

ನುಗ್ಗಿ ಬರುತ್ತಿದ್ದಾರೆ ಅಕ್ರಮ ವಲಸಿಗರು!
ಇನ್ನೇನು ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷ ನೀಡಿದ ಪ್ರಮುಖ ಭರವಸೆಗಳಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಕೂಡ ಸೇರಿದೆ. ಹೀಗೆ ಅಕ್ರಮ ವಲಸಿಗರನ್ನ ಬ್ರಿಟನ್‌ನಿಂದ ಹೊರ ಕಳುಹಿಸುವ ಕೆಲಸ ತುರ್ತಾಗಿ ನಡೆಯುತ್ತಿದೆ. ಅಕ್ರಮ ವಲಸಿಗರ ವಿರುದ್ಧದ ಹೊಸ ಕಾನೂನಿನ ಅಡಿಯಲ್ಲಿ, ಇಂಗ್ಲಿಷ್ ಕಾಲುವೆಯ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಎಲ್ಲಾ ವಲಸಿಗರನ್ನ ಗಡಿಪಾರು ಮಾಡುವ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಸಣ್ಣ ಸಣ್ಣ ದೋಣಿಗಳ ಮೂಲಕವೇ ಇಂಗ್ಲೆಂಡ್ ಆಗ್ನೇಯ ಕರಾವಳಿ ತೀರಗಳಿಗೆ 45,000ಕ್ಕೂ ಹೆಚ್ಚು ವಲಸಿಗರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಇದೆ. 2018ರಿಂದ ಈ ಕಳ್ಳ ಮಾರ್ಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಪ್ರತಿ ವರ್ಷ ಶೇಕಡಾ 60ರಷ್ಟು ಏರಿಕೆ ಕಂಡುಬಂದಿದೆ.












Click it and Unblock the Notifications