ಮುಸ್ಲಿಮರನ್ನು ಗೌರವಿಸದಿದ್ದರೆ ಭಾರತವು ಇಬ್ಭಾಗವಾಗುವ ಅಪಾಯವಿದೆ: ಮೋದಿಗೆ ಸಲಹೆ ನೀಡಲು ಬೈಡನ್‌ಗೆ ಸೂಚಿಸಿದ ಒಬಾಮಾ
ನವದೆಹಲಿ, ಜೂನ್ 23: ಮುಸ್ಲಿಂ ಅಲ್ಪಸಂಖ್ಯಾತರನ್ನು ಗೌರವಿಸದಿದ್ದರೆ ಭಾರತವು ಇಬ್ಭಾಗವಾಗುವ ಅಪಾಯವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಗುರುವಾರ ಹೇಳಿದ್ದಾರೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಸ್ತಾಪಿಸಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಸೂಚಿಸಿದ್ದಾರೆ.
ಸಿಎನ್‌ಎನ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಒಬಾಮಾ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. 'ನಾನು ಅಮೆರಿಕದ ಅಧ್ಯಕ್ಷನಾಗಿದ್ದಾಗ ಪ್ರಧಾನಿ ಮೋದಿ ನನಗೆ ಚೆನ್ನಾಗಿ ಪರಿಚಯವಿದ್ದರು. ಒಂದು ವೇಳೆ, ನಾನೀಗ ಅವರೊಂದಿಗೆ ಮಾತುಕತೆ ನಡೆಸಿದ್ದರೆ, ಭಾರತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿಯ ಕುರಿತು ಚರ್ಚೆ ಮಾಡುತ್ತಿದ್ದೆ' ಎಂದು ಹೇಳಿದ್ದಾರೆ.

'ನೀವು ( ಮೋದಿ ) ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ, ಒಂದು ಹಂತದಲ್ಲಿ ಭಾರತವು ಇಬ್ಭಾಗವಾಗಲು ಪ್ರಾರಂಭಿಸುವ ಬಲವಾದ ಸಾಧ್ಯತೆಯಿದೆ. ಇದು ನನ್ನ ವಾದದ ಪ್ರಮುಖ ಅಂಶವಾಗಿರುತ್ತಿತ್ತು' ಎಂದು ಅವರು ಪ್ರತಿಪಾದಿಸಿದ್ದಾರೆ.
'ಅಧ್ಯಕ್ಷ ಬೈಡನ್ ಹಾಗೂ ಪ್ರಧಾನಿ ಮೋದಿ ಭೇಟಿ ವೇಳೆ, ಭಾರತದಲ್ಲೀನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಸ್ತಾಪವಾಗಬೇಕು. ಬಹುಸಂಖ್ಯಾತ ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು. ಅದು ಉಲ್ಲೇಖಿಸಬೇಕಾದ ಸಂಗತಿಯಾಗಿದೆ' ಎಂದು ಒಬಾಮಾ ಹೇಳಿದ್ದಾರೆ.
'ಅಂತಹ ದೊಡ್ಡ ಆಂತರಿಕ ಸಂಘರ್ಷಗಳು ಪ್ರಾರಂಭಿಸಿದಾಗ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಹಾಗಾಗಿ, ಈ ತಾರತಮ್ಯ ಕೇವಲ ಮುಸ್ಲಿಮರ ಹಿತಾಸಕ್ತಿಗಳಿಗೆ ಮಾತ್ರವಲ್ಲದೆ ಹಿಂದೂ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ' ಎಂದು ಅವರು ತಿಳಿಸಿದ್ದಾರೆ.

ಮಾನವ ಹಕ್ಕುಗಳ ಬಗ್ಗೆ ಮಿತ್ರ ರಾಷ್ಟ್ರಗಳಿಗೆ ಸಂಬೋಧಿಸುವುದು ಯಾವಾಗಲೂ ಸಂಕೀರ್ಣ ಕೆಲಸವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೈಡನ್, ಮೋದಿ ಸುದ್ದಿಗೋಷ್ಠಿ
ಯುಎಸ್ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬ ನಾಗರಿಕನ ಘನತೆಯನ್ನು ನಂಬುವುದು ಭಾರತದ ಡಿಎನ್‌ಎಯಲ್ಲಿದೆ ಎಂದು ಮೋದಿ ಹೇಳಿದ್ದಾರೆ. 'ನಾವು ಪ್ರತಿಯೊಬ್ಬ ನಾಗರಿಕನ ಘನತೆಯ ಬಗ್ಗೆ ಕಾಳಜಿ ವಹಿಸುತ್ತೇವೆ. ಅದು ಅಮೆರಿಕದ ಡಿಎನ್‌ಎಯಲ್ಲಿದೆ ಮತ್ತು ಭಾರತದ ಡಿಎನ್‌ಎಯಲ್ಲಿ ಇದೆ. ಇಡೀ ಜಗತ್ತು ನಮ್ಮ ಯಶಸ್ಸಿನಲ್ಲಿ ಪಾಲನ್ನು ಹೊಂದಿದೆ ಎಂದು ನಾನು ನಂಬುತ್ತೇನೆ' ಎಂದು ಬೈಡನ್ ಹೇಳಿದರು.
ಯುಎಸ್ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಯಾವುದೇ ತಾರತಮ್ಯ ಮಾಡಿಲ್ಲವೆಂದು ಹೇಳಿದರು.
'ಜಾತಿ, ಧರ್ಮ, ಧರ್ಮ, ಲಿಂಗವನ್ನು ನಾವು ಲೆಕ್ಕಿಸುವುದಿಲ್ಲ. ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ' ಎಂದು ಪ್ರಧಾನಿ ಮೋದಿ ತಿಳಿಸಿದರು.
ರಕ್ಷಣೆ, ಬಾಹ್ಯಾಕಾಶ, ಶುದ್ಧ ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಭಾರತ-ಯುಎಸ್ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಇಲ್ಲಿಗೆ ಭೇಟಿ ಮಾಡಿದ್ದೇನೆ ಎಂದು ಪ್ರತಿಪಾದಿಸಿದರು.












Click it and Unblock the Notifications