'ಹೊಸ ಸರಕಾರ ರಚನೆ ಆಗುವ ತನಕ ಭಾರತದ ಜತೆ ಮಾತುಕತೆಯಿಲ್ಲ'
ಪಾಕಿಸ್ತಾನವು ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಿದ್ಧವಿದೆ. ಆದರೆ ಅದು ಲೋಕಸಭೆ ಚುನಾವಣೆ ನಂತರವಷ್ಟೇ ಎಂದು ಪಾಕಿಸ್ತಾನದ ಮಾಹಿತಿ ಖಾತೆ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯು ಮಾತುಕತೆಗೆ ಸೂಕ್ತವಾದುದಲ್ಲ ಎಂದು ಗಲ್ಫ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತದ ಜತೆ ಮಾತುಕತೆಯನ್ನು ನಾವು ನಿಧಾನ ಮಾಡಿದೆವು. ಏಕೆಂದರೆ ಸದ್ಯಕ್ಕೆ ಭಾರತದ ನಾಯಕತ್ವ ವಹಿಸಿರುವವರಿಂದ ಯಾವುದೆ ದೊಡ್ಡ ನಿರ್ಧಾರವನ್ನು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅಲ್ಲಿ ಸ್ವಲ್ಪ ಮಟ್ಟಿಗಿನ ಸ್ಥಿರತೆ ಇಲ್ಲದೆ ಮಾತುಕತೆ ನಡೆಸುವುದು ಉಪಯೋಗವಿಲ್ಲ. ಚುನಾವಣೆ ಮುಗಿದು ಸರಕಾರ ರಚನೆ ನಡೆಸಿದ ನಂತರ ಮುಂದೆ ಹೆಜ್ಜೆ ಇಡುತ್ತೇವೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯ ಕಳೆದ ನವೆಂಬರ್ ನಲ್ಲಿ ಶುರುವಾದ ಕರ್ತರ್ ಪುರ್ ಕಾರಿಡಾರ್ ನಿಂದ ಸಿಖ್ ಸಮುದಾಯಕ್ಕೆ ಮಾತ್ರ ಸಹಾಯ ಆಗುವುದಿಲ್ಲ. ಇದರಿಂದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೂ ಸಹಕಾರಿ ಆಗಲಿದೆ.

ಯಾವುದಾದರೂ ನಿರ್ದಿಷ್ಟ ನಾಯಕತ್ವದ ನಿರೀಕ್ಷೆಯಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಪ್ರಜೆಗಳು ಆರಿಸುವ ಯಾವುದೇ ನಾಯಕರು ಹಾಗೂ ಪಕ್ಷವನ್ನು ನಾವು ಗೌರವಿಸುತ್ತೇವೆ. ಅಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅವರ ಜತೆಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಅಮೆರಿಕ ಹಾಗೂ ಅಫ್ಘನ್ ತಾಲಿಬಾನ್ ಮಧ್ಯೆ ನಡೆಯುತ್ತಿರುವ ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯೆ ಭೇಟಿ ಆಗಲಿದೆ. ಅದೇನಿದ್ದರೂ ಅಫ್ಘನ್ ನ ಶಾಂತಿ ಮಾತುಕತೆ ನಂತರ. ನಾವು ಅದು ಸಾಧ್ಯವಾಗಲಿ ಎಂದು ಕಾಯುತ್ತಿದ್ದೇವೆ ಎಂದು ಹೆಳಿದ್ದಾರೆ.












Click it and Unblock the Notifications