ಭಾರತದ ವಿರುದ್ಧ ಅಂತಾರಾಷ್ಟ್ರೀಯ ತನಿಖೆಗೆ ಪಾಕ್ ಆಗ್ರಹ
ನ್ಯೂಯಾರ್ಕ್, ಸೆಪ್ಟೆಂಬರ್ 22: ಭಾರತ ಸರ್ಕಾರ, ಪಾಕಿಸ್ತಾನದಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ಪರೋಕ್ಷವಾಗಿ ನಡೆಸುತ್ತಿದ್ದು, ಇದರ ವಿರುದ್ಧ ಅಂತಾರಾಷ್ಟ್ರೀ ಮಟ್ಟದಲ್ಲಿ ತನಿಖೆಯಾಗಬೇಕೆಂದು ಪಾಕಿಸ್ತಾನದ ಪ್ರಧಾನಿ ಶಾಹೀದ್ ಖಕನ್ ಅಬ್ಬಾಸಿ ಆಗ್ರಹಿಸಿದ್ದಾರೆ. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶ್ವಸಂಸ್ಥೆಯಿಂದ ರಾಜತಾಂತ್ರಿಕ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವ ಸಂಸ್ಥೆಯಲ್ಲಿ ಗುರುವಾರ ಭಾಷಣ ಮಾಡಿದ ಅವರು, ಭಾರತದ ವಿರುದ್ಧ ಹೀಗೆ ಆರೋಪಗಳನ್ನು ಮಾಡಿದರು. ಅಲ್ಲದೆ, ಭಾರತೀಯ ಸೈನಿಕರು, ಪೆಲೆಟ್ ಗನ್ ಗಳನ್ನು ಉಪಯೋಗಿಸುತ್ತಿದ್ದು, ಇದು ಜಿನಿವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ತನಿಖೆಯಾಗಬೇಕು ಎಂದು ಅವರು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಪಾಕಿಸ್ತಾನ ಸರ್ಕಾರ ಮಹತ್ತರ ಆಶಯ ಹೊಂದಿದೆ. ಇದಕ್ಕಾಗಿ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನ ಉತ್ಸುಕವಾಗಿದೆ. ಆದರೆ, ಭಾರತ ಸರ್ಕಾರ ಸರ್ಕಾರ ಶಾಂತಿ ಮಾತುಕತೆಗೆ ಮುಂದಾಗುತ್ತಿಲ್ಲ. ಇಂಥ ಶಾಂತಿ ಮಾತುಕತೆಯಿಂದ ಭಾರತ, ಬಹು ದಿನಗಳ ಹಿಂದೆಯೇ ದೂರ ಸರಿದಿದೆ. ಮತ್ತೊಂದೆಡೆ, ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕರ ಹಕ್ಕನ್ನು ಭಾರತ ಸರ್ಕಾರ ಕಸಿದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತವು ಶಾಂತಿ ಮಾತುಕತೆಗೆ ಮುಂದೆ ಬರುತ್ತಿಲ್ಲವಾದ್ದರಿಂದ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ನಿಯಮಗಳಂತೆ ತನ್ನ ಹಕ್ಕು ಚಲಾಯಿಸಬೇಕು. ಜಮ್ಮು ಕಾಶ್ಮೀರದಲ್ಲಿ ತಾನೇ ಸ್ವಯಂ ಪ್ರೇರಿತವಾಗಿ ಕೆಲವಾರು ನಿರ್ಧಾರಗಳನ್ನು ಘೋಷಿಸಬೇಕೆಂದು ಅವರು ವಿಶ್ವ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.












Click it and Unblock the Notifications