ಕೆಲಸ ಬಿಡದಿದ್ದಕ್ಕೆ ಪತ್ರಕರ್ತೆಯನ್ನು ಗುಂಡಿಕ್ಕಿ ಕೊಂದ ಗಂಡ
ಲಾಹೋರ್, ನವೆಂಬರ್ 27: ಕೆಲಸ ತ್ಯಜಿಸಲು ನಿರಾಕರಿಸಿದ ಕಾರಣಕ್ಕೆ 27 ವರ್ಷದ ಪತ್ರಕರ್ತೆಯನ್ನು ಆಕೆಯ ಗಂಡ ಗುಂಡಿಕ್ಕಿ ಕೊಂದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಈ ದಂಪತಿ ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ ಮದುವೆಯಾಗಿ ಕೆಲವು ದಿನಗಳಲ್ಲಿಯೇ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿರುವ ಮಾಹಿತಿ ತಿಳಿಸಿದೆ.
ಉರ್ದು ದಿನಪತ್ರಿಕೆಯೊಂದಲ್ಲಿ ಕೆಲಸ ಮಾಡುತ್ತಿದ್ದ ಉರೂಜ್ ಇಕ್ಬಾಲ್ ಕೇಂದ್ರ ಲಾಹೋರ್‌ನ ಖಿಲಾ ಗುಜ್ಜರ್ ಸಿಂಗ್‌ನಲ್ಲಿರುವ ತಮ್ಮ ಕಚೇರಿಗೆ ಪ್ರವೇಶಿಸುತ್ತಿದ್ದರು. ಆ ವೇಳೆ ಆಕೆಯ ಪತಿ ದಿಲಾವರ್ ಅಲಿ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉರೂಜ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿದ್ದರು. ಆಕೆಯ ಪತಿ ದಿಲಾವರ್ ಕೂಡ ಮತ್ತೊಂದು ಉರ್ದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಉರೂಜ್ ಅವರ ಸಹೋದರ ಯಾಸಿರ್ ಇಕ್ಬಾಲ್ ನೀಡಿರುವ ದೂರಿನಂತೆ ಕೊಲೆಯಾದ ಮಹಿಳೆಯ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮ್ಮ ಸಹೋದರಿ ಮತ್ತು ದಿಲಾವರ್ ಇಬ್ಬರೂ ಏಳು ತಿಂಗಳ ಹಿಂದಷ್ಟೇ ಪ್ರೇಮವಿವಾಹವಾಗಿದ್ದರು. ಆದರೆ ವಿವಿಧ ಕೌಟುಂಬಿಕ ಕಾರಣಗಳಿಂದಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಸಂಬಂಧ ಹಳಸಿತ್ತು. ಆಕೆಯನ್ನು ಕೆಲಸ ತ್ಯಜಿಸುವಂತೆ ದಿಲಾವರ್ ಪದೇ ಪದೇ ಒತ್ತಡ ಹೇರುತ್ತಿದ್ದ ಎಂದು ಇಕ್ಬಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ದಿಲಾವರ್ ಪತ್ನಿಗೆ ಹಿಂಸೆ ನೀಡುತ್ತಿದ್ದ. ಹೀಗಾಗಿ ಆತನ ವಿರುದ್ಧ ಇತ್ತೀಚೆಗೆ ದೂರು ಕೂಡ ನೀಡಲಾಗಿತ್ತು. ಆದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಅಪರಾಧ ವರದಿಗಾರ್ತಿಯಾಗಿದ್ದ ಉರೂಜ್, ಪತಿಯೊಂದಿಗೆ ಮನಸ್ತಾಪ ಉಂಟಾದ ಬಳಿಕ ಆತನಿಂದ ದೂರವಾಗಿ ತನ್ನ ಪತ್ರಿಕೆ ಇರುವ ಕಟ್ಟಡದಲ್ಲಿಯೇ ಹೊಂದಿಕೊಂಡಂತೆ ಇರುವ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದರು.












Click it and Unblock the Notifications