ಈರುಳ್ಳಿ 300 ರುಪಾಯಿ, ಟೊಮ್ಯಾಟೊ 400 ರುಪಾಯಿ ಪಾಕಿಸ್ತಾನದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ
ಇಸ್ಲಮಾಬಾದ್, ಸೆಪ್ಟೆಂಬರ್ 5: ಈರುಳ್ಳಿ ಬೆಲೆ 300 ರುಪಾಯಿ, ಟೊಮ್ಯಾಟೊ 400 ರುಪಾಯಿ, ಆಲೂಗಡ್ಡೆ ಬೆಲೆ 400 ರುಪಾಯಿ ಏನಪ್ಪಾ ತರಕಾರಿಗೆ ಇಷ್ಟೊಂದು ಬೆಲೆನಾ ಅಂತಾ ಆಶ್ಚರ್ಯಪಡುತ್ತಿದ್ದೀರಾ, ಹೌದು ತರಕಾರಿ ಬೇಕು ಅಂದ್ರೆ ಇಷ್ಟು ದುಡ್ಡು ಕೊಡಲೇಬೇಕು, ಆದರೆ ಈ ಪರಿಸ್ಥಿತಿ ಇರೋದು ನಮ್ಮ ನೆರೆಯ ಪಾಕಿಸ್ತಾನದಲ್ಲಿ.
ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿ ಪಾಕಿಸ್ತಾನ ತತ್ತರಿಸಿದೆ. ಮನೆ ಮಠ ಕಳೆದುಕೊಂಡು ಲಕ್ಷಾಂತರ ಮಂದಿ ಬೀದಿಪಾಲಾಗಿದ್ದಾರೆ, 1300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ಬೆಲೆಯೇರಿಕೆ ಬಿಸಿ ಪಾಕಿಸ್ತಾನ ಜನರನ್ನು ಹೈರಾಣಾಗಿಸಿದೆ.
ಪ್ರವಾಹದ ಕಾರಣ ಲಕ್ಷಾಂತರ ಎಕರೆ ಕೃಷಿಭೂಮಿ ನಾಶವಾಗಿದೆ. ಆಲೂಗಡ್ಡೆ, ಈರುಳ್ಳಿ, ಸೊಪ್ಪು, ತರಕಾರಿ, ಗೋಧಿ, ಭತ್ತದ ಬೆಳೆಗಳು ಜಲಾವೃತಗೊಂಡಿದ್ದು ಬೆಳೆನಾಶವಾಗಿದೆ. ತರಕಾರಿ ಪೂರೈಕೆಯ ಕೊರತೆಯಿಂದಾಗಿ ಈಗ ಬೆಲೆ ಗಗನಕ್ಕೇರಿದೆ. ದೇಶದ ಹಣದುಬ್ಬರ ಶೇಕಡ 30ಕ್ಕೆ ತಲುಪುವ ಭೀತಿ ಎದುರಾಗಿದೆ.
ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಪಾಕಿಸ್ತಾನದ ಮೂರನೇ ಒಂದು ಭಾಗ ಮುಳುಗಡೆಯಾಗಿದೆ. ಪ್ರವಾಹದಿಂದ ಹಾನಿಗೊಳಗಾದ 80 ಪ್ರದೇಶಗಳ ದೇಶದ ವಿಪತ್ತಿನ ಪಟ್ಟಿಗೆ ಇನ್ನೂ ಎಂಟು ಜಿಲ್ಲೆಗಳನ್ನು ಸೇರಿಸಲಾಗಿದೆ.

ಬೆಳೆ ನಾಶ, ಆಹಾರ ಕೊರತೆ ಸಮಸ್ಯೆ
ಡಾಲರ್ ಎದುರು ಪಾಕಿಸ್ತಾನ ಕರೆನ್ಸಿ ಮೌಲ್ಯ ಈಗಾಗಲೇ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕ್ಷೀಣಿಸುತ್ತಿರುವ ಕರೆನ್ಸಿ ಮೀಸಲುಗಳಿಂದ ತತ್ತರಿಸುತ್ತಿದೆ. ಸುಮಾರು ಐದು ದಶಕಗಳಲ್ಲಿ ವೇಗವಾಗಿ ಹಣದುಬ್ಬರವು ಧಾರಾಕಾರ ಮಳೆಯು ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿ ಬೆಳೆಗಳನ್ನು ನಾಶಪಡಿಸಿದ ನಂತರ ಆಹಾರದ ಕೊರತೆಯನ್ನು ಎದುರಿಸುತ್ತಿದೆ.
ಕೃಷಿಯು ಆರ್ಥಿಕತೆಯ ಐದನೇ ಒಂದು ಭಾಗವನ್ನು ಹೊಂದಿರುವ ಪಾಕಿಸ್ತಾನದಲ್ಲಿ ಪ್ರವಾಹದ ಕಾರಣದಿಂದ ಉಂಟಾದ ಬೆಳೆನಾಶದಿಂದ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ.

ಎಲ್ಲಾ ತರಕಾರಿ, ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳ
ಪ್ರವಾಹಕ್ಕೂ ಮೊದಲು 50 ರುಪಾಯಿ ಇದ್ದ ಈರುಳ್ಳಿ ಬೆಲೆ ಈಗ 300 ಪಾಕಿಸ್ತಾನ ರುಪಾಯಿಗೆ ಮುಟ್ಟಿದೆ. ಟೊಮ್ಯಾಟೋ ಬೆಲೆ ಶೇಕಡಾ 300 ರಷ್ಟು ಹೆಚ್ಚಾಗಿದ್ದು 400 ರುಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಡುಗೆಗೆ ಬಳಸುವ ಎಣ್ಣೆ ದರ ಕೂಡ ಶೇಕಡ 400 ರಷ್ಟು ಹೆಚ್ಚಳವಾಗಿದೆ.
ತರಕಾರಿ ಮಾತ್ರವಲ್ಲ ಹೈನುಗಾರಿಕೆ ಮೇಲೂ ಪ್ರವಾಹ ಹೊಡೆತ ಕೊಟ್ಟಿದೆ. ಡೈರಿ ಉತ್ಪನ್ನಗಳ ಮೇಲೂ ಪರಿಣಾಮ ಬೀರಿದೆ, ಮಾಂಸದ ಸರಬರಾಜು ಕೂಡ ಏರುಪೇರಾಗಿದೆ.

ಹಣದುಬ್ಬರದಿಂದ ಪಾಕಿಸ್ತಾನ ಸಂಕಷ್ಟ ಹೆಚ್ಚಳ
ಪಾಕಿಸ್ತಾನ ವಿತ್ತ ಸಚಿವ ಮಿಫ್ತಾ ಇಸ್ಮಾಯಿಲ್ ದೇಶದ ಅರ್ಥವ್ಯವಸ್ಥೆ ಸುಧಾರಣೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ವಿಶ್ಲೇಷಕರ ಪ್ರಕಾರ ಪಾಕಿಸ್ತಾನ ಈಗಾಗಲೇ 50 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಈ ವರ್ಷ ಶೇಕಡಾ 15ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದಲ್ಲಿ ಮೂಲಭೂತ ಅವಶ್ಯಕ ವಸ್ತುಗಳ ಬೆಲೆ ಭಾರಿ ಏರಿಕೆಯಾಗಿದೆ.
ಪ್ರವಾದಿಂದ ದೇಶದ ಹಣದುಬ್ಬರದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಜೆಎಸ್ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಅಮರೀನ್ ಸೂರಾನಿ ಹೇಳಿದ್ದಾರೆ.

ನೆರವಿಗೆ ಬರುವಂತೆ ಮನವಿ ಮಾಡಿದ ಪಾಕಿಸ್ತಾನ
ಮೊದಲೇ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ ಪಾಕಿಸ್ತಾನಕ್ಕೆ ಪ್ರವಾಹ ಭಾರಿ ಹೊಡೆತ ನೀಡಿದೆ. ದೇಶದ ನೆರವಿಗೆ ಬರುವಂತೆ ಪಾಕಿಸ್ತಾನ ಹಲವು ರಾಷ್ಟ್ರಗಳಿಗೆ ಬೇಡಿಕೆ ಇಟ್ಟಿದೆ. ಪ್ರವಾಹದಿಂದ ಅಂದಾಜು 10 ಶತಕೋಟಿ ಡಾಲರ್ ಮೌಲ್ಯದ ಹಾನಿಯಾಗಿದೆ ಎಂದು ಅದು ಹೇಳಿದೆ.
ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ನೆರವು ನೀಡುವುದಾಗಿದೆ ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಘೋಷಣೆ ಮಾಡಿದ್ದು, 9 ಶತಕೋಟಿ ಡಾಲರ್ ನೆರವು ನೀಡುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 1.16 ಶತಕೋಟಿ ಡಾಲರ್ ಬೇಲ್‌ಔಟ್‌ಗೆ ಪಾಕಿಸ್ತಾನ ಮನವಿ ಮಾಡಿದೆ.












Click it and Unblock the Notifications