ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ
ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಪಾಕಿಸ್ತಾನವು ತನ್ನ 13,000 ಸೈನಿಕರು ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಸೌದಿ ಅರೇಬಿಯಾಕ್ಕೆ ರವಾನಿಸಿದೆ. ಕಳೆದ ವರ್ಷ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ರಕ್ಷಣಾ ಒಪ್ಪಂದದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪಾಕಿಸ್ತಾನವು ಸುಮಾರು 13,000 ಸೈನಿಕರು ಮತ್ತು 10ರಿಂದ 18 ಯುದ್ಧ ವಿಮಾನಗಳನ್ನು ಒಳಗೊಂಡ ಬೃಹತ್ ಸೇನಾ ತುಕಡಿಯನ್ನು ಸೌದಿ ಅರೇಬಿಯಾಕ್ಕೆ ರವಾನಿಸಿದೆ. ಈ ಸೇನಾ ಪಡೆಯು ಈಗಾಗಲೇ ಸೌದಿ ಅರೇಬಿಯಾದ ಪೂರ್ವ ವಲಯದಲ್ಲಿರುವ 'ಕಿಂಗ್ ಅಬ್ದುಲ್ ಅಜೀಜ್' ವಾಯುನೆಲೆಯನ್ನು ತಲುಪಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಈ ನಿಯೋಜನೆಯಲ್ಲಿ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಮತ್ತು ಪೂರಕ ವಿಮಾನಗಳು ಸೇರಿವೆ ಎಂದು ಸೌದಿ ಸರ್ಕಾರ ತಿಳಿಸಿದೆ.

ಏನಿದರ ಉದ್ದೇಶ?
ಉಭಯ ದೇಶಗಳ ನಡುವಿನ ಈ ಮಿಲಿಟರಿ ಸಹಕಾರವು ಜಂಟಿ ಸಮನ್ವಯವನ್ನು ಹೆಚ್ಚಿಸುವ ಮತ್ತು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಿಕೊಂಡಿವೆ. ಈ ಒಪ್ಪಂದದ ಪ್ರಮುಖ ಅಂಶವೆಂದರೆ ಒಂದು ದೇಶದ ಮೇಲೆ ನಡೆಯುವ ಯಾವುದೇ ದಾಳಿಯನ್ನು ಇನ್ನೊಂದು ದೇಶದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ನಿಯೋಜನೆಯು ಸೌದಿ ಅರೇಬಿಯಾದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.
ಇದನ್ನು ಪಾಕಿಸ್ತಾನದ ಸರ್ಕಾರಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಇದು ಉಭಯ ದೇಶಗಳ ನಡುವಿನ ದೀರ್ಘಕಾಲದ ರಕ್ಷಣಾ ಬಾಂಧವ್ಯದ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಇರುವ ರಾಜಕೀಯ ಪರಿಸ್ಥಿತಿಯ ನಡುವೆ, ಇಷ್ಟು ದೊಡ್ಡ ಮಟ್ಟದ ಸೇನಾ ನಿಯೋಜನೆಯು ಜಾಗತಿಕವಾಗಿ ಗಮನ ಸೆಳೆದಿದೆ. ಎರಡೂ ದೇಶಗಳ ನಡುವಿನ ಈ ಬಾಂಧವ್ಯವು ಕೇವಲ ಮಿಲಿಟರಿ ತರಬೇತಿಗೆ ಸೀಮಿತವಾಗದೆ, ಅನಿವಾರ್ಯ ಸಂದರ್ಭಗಳಲ್ಲಿ ಪರಸ್ಪರವಾಗಿ ಸಾರ್ವಭೌಮತ್ವವನ್ನು ರಕ್ಷಿಸುವ ಭರವಸೆಯನ್ನೂ ನೀಡಿದೆ.
ಸೌದಿಯಲ್ಲಿ ಬೀಡುಬಿಟ್ಟ ಪಾಕ್ ಸೈನಿಕರು
ವರದಿಗಳ ಪ್ರಕಾರ ಪಾಕಿಸ್ತಾನವು ಕಳೆದ ತಿಂಗಳೇ ತನ್ನ ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಈ ವಿಷಯವನ್ನು ಸೌದಿ ಅಧಿಕಾರಿಗಳು ಈಗಷ್ಟೇ ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವ 13,000 ಸೈನಿಕರ ಜೊತೆಗೆ ಈಗಾಗಲೇ ಸುಮಾರು 10,000 ಪಾಕಿಸ್ತಾನಿ ಸೈನಿಕರು ಸೌದಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನಿ ಸೈನಿಕರ ಒಟ್ಟು ಸಂಖ್ಯೆ ಏರಿಕೆಯಾಗಿದೆ.
ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಅಡಿಯಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಈ ಪಡೆಗಳು ಕೇವಲ ಸೌದಿ ಅರೇಬಿಯಾದ ರಕ್ಷಣೆಗಾಗಿ ಮಾತ್ರ ಅಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಸೌದಿಯ ಸಾರ್ವಭೌಮತ್ವಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಮಾತ್ರ ಈ ಪಡೆಗಳು ಕಾರ್ಯಾಚರಣೆಗೆ ಇಳಿಯಲಿವೆ. ಪ್ರಾದೇಶಿಕ ಉದ್ವಿಗ್ನತೆಯ ನಡುವೆ ತನ್ನ ಆಪ್ತ ಮಿತ್ರ ರಾಷ್ಟ್ರಕ್ಕೆ ರಕ್ಷಣಾ ಕವಚ ಒದಗಿಸುವುದು ಪಾಕಿಸ್ತಾನದ ಈ ನಡೆಯ ಹಿಂದಿನ ಮುಖ್ಯ ಉದ್ದೇಶ ಎನ್ನಲಾಗಿದೆ.
ಕಳೆದ ತಿಂಗಳು ಗಲ್ಫ್ ವಲಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನವು ಸೌದಿ ಅರೇಬಿಯಾಕ್ಕೆ 'ಮಿಸೈಲ್ ಇಂಟರ್ಸೆಪ್ಟರ್'ಗಳನ್ನು (ಕ್ಷಿಪಣಿ ನಿರೋಧಕ ವ್ಯವಸ್ಥೆ) ಸಹ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ವೈಮಾನಿಕ ದಾಳಿಗಳನ್ನು ತಡೆಯುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಸೌದಿಯ ಪ್ರಮುಖ ತೈಲ ಮತ್ತು ಮಿಲಿಟರಿ ಸ್ಥಾವರಗಳ ಸುರಕ್ಷತೆಯನ್ನು ಹೆಚ್ಚಿಸಲು ಈ ನೆರವನ್ನು ನೀಡಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications