ಪಾಕ್ ಸಂಸತ್ತು ವಿಸರ್ಜನೆ: ಸೇನೆಯ ಪಾತ್ರವಿಲ್ಲ ಎಂದ ವಕ್ತಾರ
ಇಸ್ಲಾಮಾಬಾದ್, ಏಪ್ರಿಲ್ 03: ಪಾಕಿಸ್ತಾನದಲ್ಲಿ ಅಧ್ಯಕ್ಷ ಆರೀಫ್ ಅಲ್ವಿ ಭಾನುವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು, 90 ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ದೇಶದಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆಯ ಯಾವುದೇ ರೀತಿಯ ಪಾಲ್ಗೊಳ್ಳುವಿಕೆ ಇಲ್ಲ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ ಅವರು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ನಂತರ ಮತ್ತು ರಾಷ್ಟ್ರೀಯ ಅಸೆಂಬ್ಲಿ (ಎನ್‌ಎ) ವಿಸರ್ಜನೆಯ ಕುರಿತು ಖಾಸಗಿ ಟಿವಿ ಚಾನೆಲ್‌ನೊಂದಿಗೆ ಮಾತನಾಡುವಾಗ ಮಿಲಿಟರಿ ವಕ್ತಾರರು ಈ ಹೇಳಿಕೆಗಳನ್ನು ನೀಡಿದ್ದಾರೆ.
"ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಏನಾಯಿತು ಎಂಬುದಕ್ಕೂ ಸೈನ್ಯಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿದ್ದಾರೆ. ಆರ್ಟಿಕಲ್ 5 ರ ಅಡಿಯಲ್ಲಿ ಇದು "ಅಸಂವಿಧಾನಿಕ" ಎಂದು ಬಣ್ಣಿಸಿ ಉಪ ಸ್ಪೀಕರ್ ಖಾಸಿಂ ಸೂರಿ ಅವರು ಭಾನುವಾರದಂದು ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸಲು ಪ್ರತಿಪಕ್ಷಗಳು ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದರು.

ಕೆಳಮನೆಯ ವಿಸರ್ಜನೆಯ ಬಗ್ಗೆ ರಾಷ್ಟ್ರಪತಿಗಳಿಗೆ ಸಲಹೆಯನ್ನು ಕಳುಹಿಸಲು ಇದು ಪ್ರಧಾನಿಗೆ ಅವಕಾಶವನ್ನು ಒದಗಿಸಿದೆ. ಮಾರ್ಚ್ 8 ರಂದು ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಆದರೆ ಪ್ರಧಾನ ಮಂತ್ರಿ ಖಾನ್ ತನ್ನ ಚುನಾಯಿತ ಸರ್ಕಾರವನ್ನು ಉರುಳಿಸಲು "ವಿದೇಶಿ ಪಿತೂರಿ" ಎಂದು ಆರೋಪ ಮಾಡುತ್ತಾ ಬಂದಿದ್ದಾರೆ.
ಪ್ರಧಾನ ಮಂತ್ರಿ ಖಾನ್ ಪ್ರಕಾರ, ಉನ್ನತ ಸೇನಾ ನಾಯಕತ್ವವು ಕಳೆದ ವಾರ ಅವರನ್ನು ಭೇಟಿ ಮಾಡಿದೆ. ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಮೂರು ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಅವರ ರಾಜೀನಾಮೆ, ಅವಿಶ್ವಾಸವನ್ನು ಎದುರಿಸುವುದು ಅಥವಾ ಆರಂಭಿಕ ಚುನಾವಣೆಗಳನ್ನು ಕರೆಯುವುದು ಸೇರಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ
ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಲಹೆಯ ಮೇರೆಗೆ ಪಾಕಿಸ್ತಾನ ರಾಷ್ಟ್ರಪತಿ ಆರೀಫ್ ಅಲ್ವಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಫಾರೂಖ್ ಹಬೀಬ್ ಹೇಳಿದ್ದಾರೆ. ಸಚಿವರು ನೀಡಿರುವ ಮಾಹಿತಿಯ ಪ್ರಕಾರ 90 ದಿನಗಳಲ್ಲಿ ಚುನಾವಣೆ ನಡೆಯಲಿದೆ. 342 ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದೆ. ಅವಿಶ್ವಾಸ ನಿರ್ಣಯ ತಿರಸ್ಕಾರ ಮಾಡಿರುವುದನ್ನು ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ.












Click it and Unblock the Notifications