ಭಾರತವನ್ನ ಗ್ರೇಟ್ ಎಂದ ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಹೇಳಿದ್ದೇನು?
ಭಾರತ ಈಗ ಬಲಿಷ್ಠವಾಗಿ ಬೆಳೆಯುತ್ತಿದೆ. 1947ರಲ್ಲಿ ಸ್ವಾತಂತ್ರ್ಯ ಪಡೆದಿದ್ದ ಭಾರತ ಹಂತ ಹಂತವಾಗಿ ಮೇಲೆ ಬರುತ್ತಿದೆ. ಅದರಲ್ಲೂ ಕಳೆದ 20 ವರ್ಷದಲ್ಲಿ, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ದೊಡ್ಡ ಸಾಧನೆ ಮಾಡುತ್ತಿದೆ. ಹೀಗಿದ್ದಾಗ ನೆರೆಯ ದೇಶ ಹಾಗೂ ಭಾರತದ ಶತ್ರು ಪಾಕಿಸ್ತಾನ ಮಾತ್ರ ಇಂದಿಗೂ ತುತ್ತು ಅನ್ನಕ್ಕಾಗಿ ಪರದಾಡುತ್ತಿದೆ. ಇದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಭಾರತವನ್ನು ಹೊಗಳಿದ್ದಾರೆ.
ಭಾರತ 'ಚಂದ್ರಯಾನ-3' ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ರೋವರ್‌ನ ಇಳಿಸಿದೆ. ಈ ಬಗ್ಗೆ ಜಗತ್ತೇ ಹೆಮ್ಮೆ ವ್ಯಕ್ತಪಡಿಸಿದೆ. ಆದರೂ ಭಾರತ ಮಾಡಿದ ಸಾಧನೆಯ ಬಗ್ಗೆ ಪಾಕಿಸ್ತಾನ ದೇಶದ ಕೆಲ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡಿ ಸುಮ್ಮನಾಗಿದ್ದರು. ಹೀಗಿದ್ದಾಗ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಭಾರತವನ್ನು ಹೊಗಳಿದ್ದರು. ಈಗ ಮತ್ತೆ ತಮ್ಮ ಅದೇ ಮಾತನ್ನು ರಿಪೀಟ್ ಮಾಡಿರುವ ನವಾಜ್ ಷರೀಫ್, ಪರೋಕ್ಷವಾಗಿ ಭಾರತವು ಗ್ರೇಟ್ ಅಂತಾ ಹೇಳಿದ್ದಾರೆ. ಹಾಗಾದರೆ ಅಸಲಿಗೆ ನವಾಜ್ ಷರೀಫ್ ಹೇಳಿದ್ದು ಏನು?

ಭಾರತವನ್ನು ಗ್ರೇಟ್ ಎಂದ ಪಾಕಿಸ್ತಾನ!
ಪಾಕಿಸ್ತಾನದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪಾಕಿಸ್ತಾನ ರಾಜಕಾರಣಿಗಳು ಇದೀಗ ಪ್ರಚಾರದ ಭರಾಟೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿದ್ದಾಗಲೇ ಇಸ್ಲಾಮಾಬಾದ್‌ನ ಪಿಎಂಎಲ್-ಎನ್ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಪಾಕಿಸ್ತಾನದ ಶೋಚನೀಯ ಪರಿಸ್ಥಿತಿ ಬಗ್ಗೆ ಹೇಳಿಕೆ ನೀಡಿದ್ದಾರೆ. 'ನಮ್ಮ ನೆರೆ ದೇಶಗಳೆಲ್ಲಾ ಚಂದ್ರನ ಕಡೆಗೆ ತಲುಪಿವೆ. ಆದರೂ ಪಾಕಿಸ್ತಾನಕ್ಕೆ ಇನ್ನೂ ಕೂಡಾ ನೆಲದಿಂದಲೇ ಎದ್ದೇಳಲು ಸಾಧ್ಯ ಆಗುತ್ತಿಲ್ಲ' ಎಂದಿದ್ದಾರೆ ನವಾಜ್ ಷರೀಫ್.
ಪಾಕಿಸ್ತಾನದ ಬಗ್ಗೆ ನವಾಜ್ ಆಕ್ರೋಶ
ಅಲ್ಲದೆ ಇದೇ ವೇಳೆ ಪಾಕಿಸ್ತಾನದ ಈಗಿನ ಪರಿಸ್ಥಿತಿ ಬಗ್ಗೆಯೂ ರೊಚ್ಚಿಗೆದ್ದು ಮಾತನಾಡಿದ ನವಾಜ್ ಷರೀಫ್ ಅವರು, ನಮ್ಮ ಪತನಕ್ಕೆ ನಾವೇ ಹೊಣೆ ಆಗಿದ್ದೇವೆ. ಅಕಸ್ಮಾತ್ ಹೀಗೆಲ್ಲಾ ಆಗದೇ ಇದ್ದಿದ್ದರೆ, ನಾವು ಬೇರೆ ಯಾವುದೋ ಸ್ಥಾನದಲ್ಲಿ ಇರಬೇಕಿತ್ತು. 2013 ರಲ್ಲಿ ನಾವು ವಿದ್ಯುತ್ ಅಭಾವ ಎದುರಿಸಿದ್ದೆವು. ನಾವು ಅಧಿಕಾರಕ್ಕೇರಿದ ಬಳಿಕ ಅದಕ್ಕೆ ಕೊನೆಹಾಡಿದ್ದೇವೆ ಎಂದು ಇದೇ ವೇಳೆ ನವಾಜ್ ಷರೀಫ್ ತಿಳಿಸಿದರು. ಈ ಮೂಲಕ ವಿರೋಧ ಪಕ್ಷಗಳಿಗೆ ತಮ್ಮ ಮಾತುಗಳಿಂದ ಕುಟುಕಿದ್ದಾರೆ ನವಾಜ್ ಷರೀಫ್.

ಇಮ್ರಾನ್ ಖಾನ್ ವಿರುದ್ಧ ಸಿಟ್ಟು?
ದೇಶಾದ್ಯಂತ ಭಯೋತ್ಪಾದನೆ ಅಂತ್ಯ ಮಾಡಿದ್ದೇವೆ. ಕರಾಚಿಯಲ್ಲಿ ಶಾಂತಿಯ ಮತ್ತೆ ಸ್ಥಾಪನೆ ಮಾಡಿದ್ದೇವೆ. ಹೆದ್ದಾರಿ ನಿರ್ಮಿಸಿದ್ದೆವು. ಚೀನಾ & ಪಾಕ್ ಕಾರಿಡಾರ್ ಯೋಜನೆಯು ಬಂತು. ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಯುಗ ಆರಂಭವಾಗಿತ್ತು' ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್. ಇದೇ ವೇಳೆ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಲ್ಲಿದ್ದ ಜನ ಪಾಕ್ ಮಾಜಿ ಪ್ರಧಾನಿಯ ಈ ಮಾತಿಗೆ ಶಿಳ್ಳೆ & ಚಪ್ಪಾಳೆ ಹಾಕಿ ಸ್ವಾಗತಿಸಿದರು.
'ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿದ್ದೇವೆ'
ಹಾಗೇ ತಮ್ಮ ಮಾತು ಮುಂದುವರಿಸಿದ ನವಾಜ್ ಷರೀಫ್, ಪಾಕಿಸ್ತಾನ ಈಗ ಎದುರಿಸುತ್ತಿರುವ ಸಮಸ್ಯೆಗೆ ಯಾರನ್ನು ಬೈಯಬೇಕಿದೆ? ನೀವೇ ಹೇಳಿ ಅಂತಾ ಜನರನ್ನೇ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, 'ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿದ್ದೇವೆ' ಎಂದೂ ಅವರು ಹೇಳಿದ್ದಾರೆ. ಹಾಗೇ 2014 ರಲ್ಲಿ ತಮ್ಮ ಸರಕಾರದ ಆಡಳಿತದಲ್ಲಿ ಹಣದುಬ್ಬರ ಅತ್ಯಂತ ಕೆಳಮಟ್ಟದಲ್ಲಿತ್ತು. ಆಗ ಇಸ್ಲಾಮಾಬಾದ್‌ನಲ್ಲಿ ಪಾಕ್‌ನ 2 ರೂಪಾಯಿಗೆ ಸಿಗುತ್ತಿದ್ದ ರೋಟಿ ಈಗ ಪಾಕಿಸ್ತಾನದ 30 ರೂಪಾಯಿಗೆ ತಲುಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಭರ್ಜರಿಯಾಗಿ ಚುನಾವಣಾ ಪ್ರಚಾರ ಮುಂದುವರಿಸಿದ್ದಾರೆ ನವಾಜ್ ಷರೀಫ್.












Click it and Unblock the Notifications