170 ಜನರನ್ನು ಕೊಂದರೂ ರಾಕ್ಷಸರಿಗೆ ತೃಪ್ತಿ ಇಲ್ವಾ?
ಕನ್ಬಾಲು: ರಾಕ್ಷಸರು ಅಂತಾ ಇಂತಹವರನ್ನೇ ಕರೆಯೋದು ಅನಿಸುತ್ತೆ. ಯಾಕಂದ್ರೆ ಮಕ್ಕಳು, ಮಹಿಳೆಯರೂ ಸೇರಿ 170 ಜನರನ್ನು ಕೊಂದು ಮಗಿಸಿದ್ದರೂ ಇವರ ರಕ್ತದಾಹ ತಣಿದಿಲ್ಲ ಅಂತಾ ಕಾಣಿಸುತ್ತೆ. ಈಗ ಮತ್ತೆ ತಾವು 170 ಜನರನ್ನು ಕೊಂದಿದ್ದ ಹಳ್ಳಿಗೇ ನುಗ್ಗಿ ಗಲಾಟೆ ಮಾಡಿದ್ದಾರೆ. ಅಷ್ಟಕ್ಕೂ ನಾವು ಹೇಳುತ್ತಿರುವುದು ಮ್ಯಾನ್ಮಾರ್ (Myanmar) ಸೇನೆಯ ಕ್ರೌರ್ಯದ ಬಗ್ಗೆ
ಮ್ಯಾನ್ಮಾರ್‌ನ ಕನ್ಬಾಲು ಪಟ್ಟಣದ ಸಗಿಯಾಂಗ್ ಪ್ರದೇಶದ ಪಜಿಗಿ ಎಂಬ ಹಳ್ಳಿಯ ಹೊರಭಾಗದಲ್ಲಿ ಕಳೆದ ವಾರ ಭೀಕರ ದಾಳಿ ನಡೆಸಿತ್ತು ಸೇನೆ. ಮ್ಯಾನ್ಮಾರ್ ಸೈನಿಕರು ನಡೆಸಿದ ಭೀಕರ ದಾಳಿಯಲ್ಲಿ 170 ಪ್ರಜೆಗಳು ಜೀವ ಬಿಟ್ಟಿದ್ದರು. ಗ್ರಾಮದ ಹೊರಗೆ ದೇಶದ ಸೇನಾಡಳಿತ ವಿರೋಧಿ ಚಳವಳಿ ನಡೆಯುತ್ತಿದೆ ಎಂದು ಆರೋಪಿಸಿ, ಮೃಗಗಳಂತೆ ಬಾಂಬ್ ಎಸೆದಿತ್ತು ಸೇನೆ. ಆದರೆ ದಾಳಿಯಲ್ಲಿ ಹತ್ತಾರು ಮಕ್ಕಳ ದೇಹಗಳು ಹಾಗೂ ಮಹಿಳೆಯ ಮೃತದೇಹಳು ಛಿದ್ರವಾಗಿ ಸಿಕ್ಕವು. ಇಷ್ಟು ಸಾಲದು ಎಂಬಂತೆ ಈಗ ಮತ್ತೆ ಅದೇ ಹಳ್ಳಿಗೆ ನುಗ್ಗಿದೆ ಮ್ಯಾನ್ಮಾರ್ ಮಿಲಿಟರಿ.

200 ಪಡೆಗಳ ದಿಢೀರ್ ದಾಳಿ
ಮ್ಯಾನ್ಮಾರ್ ಸೈನಿಕರು ಪಜಿಗಿ ಹಳ್ಳಿಯಲ್ಲಿ 170 ಜನರನ್ನು ಭೀಕರವಾಗಿ ಕೊಂದ ನಂತರ ಅಲ್ಲಿಂದ 10 ಸಾವಿರ ಜನ ಊರು ಬಿಟ್ಟು ಓಡಿ ಹೋಗಿದ್ದಾರೆ. ಇಷ್ಟಾದರೂ ಕ್ರೌರ್ಯ ನಿಲ್ಲಿಸದ ಮ್ಯಾನ್ಮಾರ್ ಸೇನೆ, ಮತ್ತೆ ಅದೇ ಹಳ್ಳಿಗೆ ಸೈನಿಕರನ್ನು ನುಗ್ಗಿಸಿದೆ. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 200 ಪಡೆಗಳ ತಂಡ ಒಂದೇ ಬಾರಿಗೆ ಪಜಿಗಿ ಪ್ರದೇಶಕ್ಕೆ ನುಗ್ಗಿ, ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಜೊತೆಗೆ ಮತ್ತಷ್ಟು ಜನರಿಗೆ ಊರು ಬಿಡುವಂತೆ ಧಮ್ಕಿ ಹಾಕಿದೆಯಂತೆ ಸೇನೆ. ಇದು ಜಗತ್ತಿನಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೆಣಗಳ ರಾಶಿ ಬೀಳಿಸಿದ್ದ ಸೇನೆ
ಭೂಮಿ ಮೇಲಿನ ನರಕವಾಗಿ ಬದಲಾಗಿರುವ ಮ್ಯಾನ್ಮಾರ್ ರಕ್ತಸಿಕ್ತ ಅಧ್ಯಾಯಕ್ಕೆ ಮತ್ತೆ ಮತ್ತೆ ಸಾಕ್ಷಿಯಾಗುತ್ತಲೇ ಇದೆ. ಕಳೆದ ವಾರ ನಡೆದಿದ್ದ ಭೀಕರ ದಾಳಿಯಲ್ಲಿ ಅಮಾಯಕರು ಕೂಡ ಮೃತಪಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮ್ಯಾನ್ಮಾರ್ ಸೇನೆ ನಡೆಸಿದ್ದ ದಾಳಿ ಅದೆಷ್ಟು ಭೀಕರವಾಗಿತ್ತು ಎಂದರೆ, ಘಟನೆ ನಡೆದಾಗ ಅದೇ ಸ್ಥಳದಲ್ಲಿದ್ದ 20ರಿಂದ 30 ಮಕ್ಕಳ ದೇಹ ಛಿದ್ರವಾಗಿ ಹೋಗಿತ್ತು. ಜೊತೆಗೆ ಅದೆಷ್ಟೋ ಜನರ ದೇಹದ ಗುರುತು ಕೂಡ ಸಿಕ್ಕಿರಲಿಲ್ಲ. ಇಷ್ಟಾದರೂ ಮ್ಯಾನ್ಮಾರ್ ಆಡಳಿತ ತನ್ನ ದೌರ್ಜನ್ಯ ಮುಂದುವರಿಸಿದ್ದು, ವಿಶ್ವಸಂಸ್ಥೆಗೂ ಸಿಟ್ಟು ತರಿಸಿದೆ.
ಶವಗಳ ಮೇಲೂ ಗುಂಡಿನ ದಾಳಿ?
ಯುದ್ಧ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿ ಹೋದ ಕೆಲವೇ ಸಮಯದಲ್ಲಿ ಸತ್ತು ಬಿದ್ದಿದ್ದ 170 ಜನರ ಮೇಲೆ ಮತ್ತೆ ದಾಳಿ ನಡೆದಿತ್ತು. ಹೆಲಿಕಾಪ್ಟರ್‌ನಲ್ಲಿ ಬಂದ ಮ್ಯಾನ್ಮಾರ್ ಸೈನಿಕರು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆಂದು ಪ್ರತ್ಯಕ್ಷದರ್ಶಿ ತಿಳಿಸಿದ್ದರು. ಈ ಮೂಲಕ ಮ್ಯಾನ್ಮಾರ್ ಸೇನೆಯ ಈ ರಾಕ್ಷಸ ಕೃತ್ಯದ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ನಡೆದು ಒಂದು ವಾರ ಕಳೆದಿಲ್ಲ, ಮತ್ತೊಮ್ಮೆ ಅಂತಹದ್ದೇ ಮನುಷ್ಯ ವಿರೋಧಿ ಕೃತ್ಯ ನಡೆದಿದೆ.

ಮತ್ತೊಂದು ಕಡೆ ಮ್ಯಾನ್ಮಾರ್ ಸೇನಾ ಸರ್ಕಾರ ತಾನು ಕೊಂದಿದ್ದು ಬಂಡುಕೋರರನ್ನು ಎಂದು ಹೇಳಿತ್ತು. ಈ ಮೂಲಕ ತನ್ನ ಪಾಪ ಕೃತ್ಯ ಸಮರ್ಥನೆಗೆ ಇಳಿದಿತ್ತು. ಆದರೆ ಅಲ್ಲಿ ಸಿಕ್ಕ ಅದೆಷ್ಟೋ ಹೆಣಗಳ ಮೇಲೆ ಸಾಮಾನ್ಯ ಜನರು ತೊಡುವ ಬಟ್ಟೆಗಳೇ ಕಂಡುಬಂದಿದ್ದವು. ಇದನ್ನ ಪರಿಶೀಲನೆ ನಡೆಸಲು ಮಾಧ್ಯಮಗಳಿಗೂ ಅಲ್ಲಿ ಪ್ರವೇಶ ಸಿಗಲಿಲ್ಲ. ಮತ್ತೊಂದು ಕಡೆ ಆ ವಿಚಾರವನ್ನೇ ಮುಚ್ಚಿಹಾಕಿ, ಮತ್ತೆ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿರುವ ಆರೋಪ ಕೇಳಿಬಂದಿದೆ.












Click it and Unblock the Notifications