Kim Jong Un: ರೈತರ ಜಮೀನಿಗೆ ಸರ್ವಾಧಿಕಾರಿಯ ದಿಢೀರ್ ಭೇಟಿ!
ಸಿಯೋಲ್: ಅಕ್ಷರಶಃ ನರಕ ಎಂಬ ಕುಖ್ಯಾತಿ ಪಡೆದ ದೇಶ ಅದು. ಅಲ್ಲಿ ಜನ ಅಕಸ್ಮಾತ್ ತಮ್ಮ ಅಧ್ಯಕ್ಷನ ವಿರುದ್ಧ ಮಾತನಾಡಿದರೆ ಮುಗೀತು ಕಥೆ. ಕತ್ತು ಕಚ್.. ಬಾಡಿ ಪಚಕ್! ಆತ ಹೇಗೆ ಸತ್ತ ಅನ್ನೋದು ಕೂಡ ಗೊತ್ತಾಗೋದಿಲ್ಲ. ಇಷ್ಟೆಲ್ಲಾ ಭಯಾನಕತೆ ಇರುವ ಈ ದೇಶದಲ್ಲಿ ಭೀಕರವಾಗಿ ಚಂಡಮಾರುತ ಅಪ್ಪಳಿಸಿತ್ತು. ರೈತರ ಬೆಳೆ ಬಿರುಗಾಳಿಯ ರಭಸಕ್ಕೆ ಕೊಚ್ಚಿ ಹೋಗಿತ್ತು. ಈಗ ರೈತರ ಸಂಕಷ್ಟಕ್ಕೆ ಸರ್ವಾಧಿಕಾರಿ ಹೆಗಲು ಕೊಡುತ್ತಿದ್ದಾನೆ.
ಹೌದು, ಉತ್ತರ ಕೊರಿಯಾದಲ್ಲಿ ಕಳೆದ ವಾರ ಅಪ್ಪಳಿಸಿದ ಸೈಕ್ಲೋನ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹೀಗಾಗಿ ಪರಿಸ್ಥಿತಿ ಅವಲೋಕನ ಮಾಡುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷರು, ತನ್ನ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತನ ಜಮೀನಿಗೆ ನೇರವಾಗಿ ತೆರಳಿದ್ದಾರೆ. ಅಲ್ಲಿ ಕೃಷಿಕರ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆದಿದೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು & ರೈತರಿಗೆ ಬೆಂಬಲ ನೀಡಲು ತನ್ನ ಸೇನೆಗೆ ಸರ್ವಾಧಿಕಾರಿ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಉತ್ತರ ಕೊರಿಯಾದಲ್ಲಿ ಈ ಬಾರಿ ಆಹಾರದ ಅಭಾವ ಎದುರಾಗುವ ಭೀತಿ ಮೂಡಿದೆ.

ತಿನ್ನಲು ಅನ್ನವಿಲ್ಲ.. ಆದರೂ ಶೋಕಿ!
ಕಿಮ್ ಜಾಂಗ್ ಉನ್ ಅಲಿಯಾಸ್ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಹಲವಾರು ಆರೋಪ ಇದೆ. ತನ್ನ ಚಿಕ್ಕಪ್ಪನನ್ನೇ ಕೊಂದಿದ್ದು, ತನ್ನ ವಿರೋಧಿಗಳನ್ನು ಒಬ್ಬೊಬ್ಬರಾಗಿ ಮುಗಿಸಿದ್ದು. ಹೀಗೆ ಹೇಳುತ್ತಾ ಹೋದರೆ ಅದಕ್ಕೆ ದಿನಗಳೇ ಸಾಲುವುದಿಲ್ಲ. ಇಂತಿಪ್ಪ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ಪ್ರಜೆಗಳಿಗೆ ಅನ್ನವಿಲ್ಲದಿದ್ದರೂ ತೆಲೆ ಕೆಡಿಸಿಕೊಳ್ಳೋದಿಲ್ಲ. ಉತ್ತರ ಕೊರಿಯಾ ಜನರು ಹಸಿವಿನಿಂದ ನರಳಿ ಸಾಯುತ್ತಾರೆ ಅನ್ನೋ ಮಾತಿದೆ. ಆದ್ರೆ ಈ ಘಟನೆ ಅಚ್ಚರಿ ಮೂಡಿಸಿದ್ದು, ಈಗ ಕಿಮ್ ಜಾಂಗ್ ಉನ್ ರೈತರ ಕಷ್ಟ ಸುಖ ಕೇಳಿದ್ದಾನೆ.
ಭೀಕರ ಬಿರುಗಾಳಿಗೆ ಜನರು ತತ್ತರ
ಉತ್ತರ ಕೊರಿಯಾ ಪ್ರಾಕೃತಿಕ ವಿಕೋಪಕ್ಕೆ ನರಳಿ ಹೋಗಿದೆ. ಅದ್ರಲ್ಲೂ ಕಳೆದ ವಾರವಷ್ಟೇ ಭೀಕರ ಚಂಡಮಾರುತ ಉತ್ತರ ಕೊರಿಯಾಗೆ ಆಘಾತ ನೀಡಿದೆ. ಜನ ಮತ್ತು ಅನ್ನದಾತರು ನರಳುತ್ತಿದ್ದಾರೆ. ಇದೀಗ ಪರಿಸ್ಥಿತಿ ಅರಿತಂತೆ ಕಾಣುತ್ತಿರುವ ಕಿಮ್ ಜಾಂಗ್ ಉನ್, ರೈತರಿಗೆ ಎದುರಾದ ಕಷ್ಟ ಆಲಿಸಿದ್ದಾನೆ. ಆದರೆ ಇದು ಇಷ್ಟಕ್ಕೇ ಮುಗಿಯುತ್ತಾ? ಅಥವಾ ರೈತರಿಗೆ ಕಿಮ್ ಜಾಂಗ್ ಉನ್ ಸಹಾಯ ಮಾಡುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ. ಈ ರೀತಿ ಮಾಡದಿದ್ದರೆ ಉತ್ತರ ಕೊರಿಯಾ ಮತ್ತೆ ಆಹಾರದ ಅಭಾವಕ್ಕೆ ಸಿಲುಕುವುದು ಪಕ್ಕಾ.

ಸರ್ವಾಧಿಕಾರಿಗೆ ಉಪಗ್ರಹದ ಹುಚ್ಚು!
ಉತ್ತರ ಕೊರಿಯಾ ಮತ್ತೆ ಗುಡುಗಲು ಸಜ್ಜಾಗಿದ್ದು, ಅದರಲ್ಲೂ ಮಿಲಿಟರಿ ಉಪಗ್ರಹ ಉಡಾವಣೆ ಮೂಲಕ ಶಾಕ್ ಕೊಡಲು ಸಿದ್ಧವಾಗಿದೆ. ಮೇ ತಿಂಗಳಲ್ಲಿ ಇದೇ ರೀತಿ ಮಿಲಿಟರಿ ಸ್ಯಾಟಲೈಟ್‌ನ ಉಡಾವಣೆಗೆ ಯತ್ನಿಸಿದ್ದ ಉತ್ತರ ಕೊರಿಯಾ ಸೋತಿತ್ತು. ಈಗ ಮತ್ತೆ ಪ್ರಯತ್ನಕ್ಕೆ ಕೈಹಾಕಲು ಸಜ್ಜಾಗಿದ್ದು, ಆಗಸ್ಟ್ ಕೊನೆಯಲ್ಲಿ ಇಲ್ಲ ಅಂದ್ರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಈ ಸಾಹಸ ಮಾಡಲು ಸಜ್ಜಾಗಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಹೀಗೆ ಸೈಕ್ಲೋನ್ ಅಪ್ಪಳಿಸಿದ ಕೆಲವೇ ದಿನದಲ್ಲಿ ಸರ್ವಾಧಿಕಾರಿ ತನ್ನ ಉಪಗ್ರಹ ಪ್ರೀತಿ ಹೊರಹಾಕಿದ್ದಾನೆ.

ಉತ್ತರ ಕೊರಿಯಾ ಕ್ಷಿಪಣಿಗಳ ತವರು
ಕಿಮ್ ಜಾಂಗ್ ಉನ್ ಕಳೆದ ತಿಂಗಳು ಹಲವು ಕ್ಷಿಪಣಿಗಳನ್ನ ಪ್ರಯೋಗ ನಡೆಸಿದ್ದ. ಅದ್ರಲ್ಲಿ ಕೆಲ ಮಿಸೈಲ್‌ಗಳು ಅಮೆರಿಕದ ಪ್ರಮುಖ ನಗರಗಳ ಮೇಲೆಯೂ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯ ಭಯ ಶುರುವಾಗಿತ್ತು. ಹೀಗೆ ತನ್ನ ಕ್ಷಿಪಣಿಗಳ ಮೂಲಕ ಭಯ ಹುಟ್ಟಿಸುವ ಸರ್ವಾಧಿಕಾರಿಗೆ ಉಪಗ್ರಹದ ಮೇಲೆಯೂ ಹುಚ್ಚು ಹಿಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ತನ್ನ ಮೊದಲನೇ ಮಿಲಿಟರಿ ಉಪಗ್ರಹವನ್ನ ಉಡಾಯಿಸಲು ಉತ್ತರ ಕೊರಿಯಾ ಶಪಥ ಮಾಡಿದೆ. ಆದರೆ ತನ್ನ ದೇಶದ ಜನರು ಆಹಾರ ಅಭಾವದಿಂದ ನರಳುತ್ತಿರುವುದು ಕಿಮ್ ಕಣ್ಣಿಗೆ ಕಾಣಲ್ವಾ? ಎಂಬ ಪ್ರಶ್ನೆಯೂ ಮೂಡಿದೆ.












Click it and Unblock the Notifications