Israel War: ಕದನ ವಿರಾಮ ಸಾಧ್ಯವಿಲ್ಲ; ಗುಡುಗಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಗಾಜಾ ಯುದ್ಧದಲ್ಲಿ ಕದನ ವಿರಾಮ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್‌ಗೆ ಶಾಕ್ ಕೊಟ್ಟಿದ್ದಾರೆ. ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿರುವವರ ಪಟ್ಟಿಯನ್ನು ಕೊಡುವವರೆಗೆ ಕದನ ವಿರಾಮ ನೀತಿಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಪ್ಪಿಕೊಂಡಂತೆ ಬಿಡುಗಡೆ ಮಾಡಲಾಗುವ ಒತ್ತೆಯಾಳುಗಳ ಪಟ್ಟಿಯನ್ನು ಸ್ವೀಕರಿಸವವರೆಗೆ ನಾವು ಕದನ ವಿರಾಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಪ್ಪಂದದ ಉಲ್ಲಂಘನೆ ಮಾಡುವುದನ್ನು ಇಸ್ರೇಲ್ ಎಂದಿಗೂ ಸಹಿಸುವುದಿಲ್ಲ, ಇದಕ್ಕೆ ಹಮಾಸ್ ಮಾತ್ರ ಜವಾಬ್ದಾರವಾಗಿದೆ ಎಂದು ನೆತನ್ಯಾಹು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಾನುವಾರದಿಂದ ಕದನ ವಿರಾಮ
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಭಾನುವಾರದಿಂದ ಆರಂಭವಾಗಲಿದೆ ಎಂದು ಇಸ್ರೇಲ್‌ನ ಸಚಿವ ಸಂಪುಟವು ಕದನ ವಿರಾಮ ಮತ್ತು ಒತ್ತೆಯಾಳು-ಕೈದಿಗಳ ಬಿಡುಗಡೆ ಒಪ್ಪಂದಕ್ಕೆ ಒಪ್ಪಿಗೆ ನೀಡಿ ಮತ ಚಲಾಯಿಸಿದ ಬಳಿಕ ಮಧ್ಯವರ್ತಿಯಾಗಿದ್ದ ಕತಾರ್ ತಿಳಿಸಿದೆ.
ಈಜಿಪ್ಟ್ ಜೊತೆ ಒಪ್ಪಂದದ ಮಧ್ಯಸ್ಥಿಕೆ ವಹಿಸಿದ್ದ ಕತಾರ್ ಮತ್ತು ಯುಎಸ್ ಬುಧವಾರ ಒಪ್ಪಂದ ಘೋಷಣೆ ಮಾಡಿದ ಬಳಿಕವೂ ಗಾಜಾದ ಮೇಲೆ ಇಸ್ರೇಲ್ ಸೈನ್ಯದ ದಾಳಿ ಮುಂದುವರೆದಿದೆ.
ಶನಿವಾರ ದಕ್ಷಿಣ ಗಾಜಾದಲ್ಲಿರುವ ಖಾನ್ ಯೂನಿಸ್‌ನಲ್ಲಿರುವ ಗುಡಾರದ ಮೇಲೆ ಬಾಂಬ್ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಜೆರುಸಲೆಮ್ ಮೇಲೆ ವಾಯುದಾಳಿ ಸೈರನ್‌ಗಳು ಮೊಳಗಿದ ಬಳಿಕ ಇರಾನ್ ಬೆಂಬಲಿತ ಹುತಿ ಬಂಡುಕೋರರು ಪ್ಯಾಲೆಸ್ತಿನಿಯನ್ನರನ್ನು ಬೆಂಬಲಿಸುವುದಾಗಿ ಹೇಳುವ ಯೆಮೆನ್‌ನಿಂದ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ.
15 ತಿಂಗಳಿನಿಂದ ಯುದ್ಧ
ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ 15 ತಿಂಗಳಾಗಿದೆ ಇದರಲ್ಲಿ ನವೆಂಬರ್ 2023ರಲ್ಲಿ ಒಂದು ವಾರ ಮಾತ್ರ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಪ್ಯಾಲೆಸ್ಟೀನಿಯನ್ ಕೈದಿಗಳ ಬದಲಾಗಿ ಹಮಾಸ್ ಉಗ್ರಗಾಮಿಗಳು ಹಿಡಿದಿಟ್ಟುಕೊಂಡಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು.
ಒಪ್ಪಂದದ ಮೊದಲ ಹಂತದಲ್ಲಿ 737 ಪ್ಯಾಲೆಸ್ಟೀನಿಯನ್ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಲಾಗುವುದು ಎಂದು ಇಸ್ರೇಲ್ ನ್ಯಾಯ ಸಚಿವಾಲಯ ಈ ಹಿಂದೆ ಹೇಳಿತ್ತು ಆದರೆ ಯಾರನ್ನೂ ಕೂಡ ಈವರೆಗೂ ಬಿಡುಗಡೆ ಮಾಡಿಲ್ಲ ಎಂದು ವರದಿಯಾಗಿದೆ.
ಈ ಒಪ್ಪಂದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಳ್ಳುವ ಒಂದು ದಿನ ಮೊದಲ ಕದನ ವಿರಾಮ ಘೋಷಣೆಯಾಗಿರುವುದು ವಿಶೇಷವಾಗಿದೆ.












Click it and Unblock the Notifications