2024ರ ಲೋಕಸಭಾ ಚುನಾವಣೆಯ ಫಲಿತಾಂಶ ಜನರನ್ನು ಅಚ್ಚರಿಗೊಳಿಸಲಿದೆ: ರಾಹುಲ್ ಗಾಂಧಿ
ವಾಷಿಂಗ್ಟನ್, ಜೂನ್. 02: ದೇಶದಲ್ಲಿ ಪ್ರತಿಪಕ್ಷಗಳು ಉತ್ತಮವಾಗಿ ಒಗ್ಗೂಡಿವೆ ಮತ್ತು ದೇಶದಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಇದು ಮುಂದಿನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಜನರನ್ನು ಅಚ್ಚರಿಗೊಳಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೂರು ನಗರಗಳ ಅಮೆರಿಕ ಪ್ರವಾಸಕ್ಕಾಗಿ ಅಮೆರಿಕದಲ್ಲಿರುವ ರಾಹುಲ್ ಗಾಂಧಿ, ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮದವರೊಂದಿಗೆ ನಡೆಸಿದ ಸಂವಾದದ ವೇಳೆ ಪ್ರಶ್ನೆಗಳ ಸರಣಿಗೆ ಉತ್ತರವಾಗಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಜನರನ್ನು ಅಚ್ಚರಿಗೊಳಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

"ಮುಂದಿನ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಆಗಿಯೇ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ವಿರೋಧ ಪಕ್ಷಗಳು ಒಂದಾಗಿದ್ದು, ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಮುಂದಿನ ಚುನಾವಣಾ ಫಲಿತಾಂಶ ಜನರನ್ನು ಆಶ್ಚರ್ಯಗೊಳಿಸುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು, ಕಾಂಗ್ರೆಸ್‌ಗೆ ಬಹುಮತ ದೊರೆತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಉದಾಹರಣೆಯಾಗಿ ನೀಡಿರುವ ಅವರು, "ಮುಂದಿನ ಮೂರ್ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಕಾದು ನೋಡಿ. ಏನಾಗಲಿದೆ ಎಂಬುದರ ಉತ್ತಮ ಸೂಚನೆ ಕಾಣುತ್ತಿದೆ" ಎಂದು ಪತ್ರಕರ್ತರಿಗೆ ಉತ್ತರಿಸಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತದಲ್ಲಿ ಪ್ರತಿಪಕ್ಷಗಳು ಉತ್ತಮವಾಗಿ ಒಗ್ಗೂಡಿವೆ. ಹೆಚ್ಚು ಹೆಚ್ಚು ಒಗ್ಗೂಡುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸಾಕಷ್ಟು ಒಳ್ಳೆಯ ಕೆಲಸ ನಡೆಯುತ್ತಿದೆ. ಇದು ಸಂಕೀರ್ಣವಾದ ಚರ್ಚೆ ಕೂಡ ಹೌದು. ಏಕೆಂದರೆ ನಾವು ಇತರ ವಿರೋಧ ಪಕ್ಷಗಳೊಂದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಸ್ಪರ್ಧಿಸುತ್ತೇವೆ. ಆದ್ದರಿಂದ, ಇದು ಸ್ವಲ್ಪ ಕೊಡು ಮತ್ತು ತೆಗೆದುಕೊಳ್ಳುವುದೆ ನಡುವೆಯಿದೆ. ಆದರೂ ಓ ಒಗ್ಗಟ್ಟು ನಡೆಯಲಿದೆ ಎಂದು ನನಗೆ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಪತ್ರಿಕಾ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಿದ್ದಾರೆ. "ದೇಶದ ತನಿಖಾ ಸಂಸ್ಥೆಗಳನ್ನು ಆಡಳಿತ ಪಕ್ಷ ಹಿಡಿದಿಟ್ಟುಕೊಂಡಿದೆ. ದೇಶದಲ್ಲಿ ಪತ್ರಿಕಾ ಮಾಧ್ಯಮವನ್ನು ತಮ್ಮಗೆ ತಕ್ಕಂತೆ ಬಳಸಿಕೊಳ್ಳಲಾಗಿದೆ" ಎಂದಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತಾಡಿರುವ ಅವರು, "ಭಾರತವು ಈಗಾಗಲೇ ಅತ್ಯಂತ ದೃಢವಾದ ವ್ಯವಸ್ಥೆಯನ್ನು ಹೊಂದಿದೆ, ಆದರೆ ಆ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ ಎಂದಿದ್ದಾರೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತಿರುವ ಬಗ್ಗೆ ಮಾತಾಡಿ, "ಇದು ಕೇವಲ ಪತ್ರಿಕಾ ಸ್ವಾತಂತ್ರ್ಯವಲ್ಲ. ಇದು ಸಾಂಸ್ಥಿಕ ಚೌಕಟ್ಟಿನ ಮೇಲಿನ ಹಿಡಿತ" ಎಂದು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications