ಈ ಬಾರಿ ಪಾಕಿಸ್ತಾನದಲ್ಲಿ ಹೊಸ ವರ್ಷಾಚರಣೆ ರದ್ದು: ಕಾರಣವೇನು..?
ಕರಾಚಿ, ಡಿಸೆಂಬರ್ 29: ಪಾಕಿಸ್ತಾನದಲ್ಲಿ 2024ರ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಬಾಂಬ್ ದಾಳಿಯಿಂದ ಸಾವಿರಾರು ನಾಗರಿಕರು ಸಾವಿನ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವುದು ಬೇಡ ಎಂದು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಆದೇಶ ನೀಡಿದ್ದಾರೆ.
ಯುದ್ಧ ಪೀಡಿತ ಗಾಜಾ ಪಟ್ಟಿಯ ಜನರೊಂದಿಗೆ ಇದ್ದೇವೆ ಎನ್ನುವ ಒಗ್ಗಟ್ಟಿನ ಸಂಕೇತವಾಗಿ ದೇಶದಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿರುವುದಾಗಿ ಅನ್ವಾರುಲ್ ಹಕ್ ಕಾಕರ್ ಘೋಷಿಸಿದ್ದಾರೆ. ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ ಎಂದರು.

ನಮ್ಮ ಮತ್ತು ಪ್ಯಾಲೆಸ್ಟೈನ್ ನಡುವಿನ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ ಎಂದು ತಿಳಿಸಿದ್ದಾರೆ.
ಗಾಜಾ ಮತ್ತು ಪ್ಯಾಲೆಸ್ಟೈನ್‌ನ ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳ ಹತ್ಯಾಕಾಂಡ ಮತ್ತು ಪ್ಯಾಲಿಸ್ಟೈನ್ನಿಯರ ನರಮೇಧದಿಂದ ಪಾಕಿಸ್ತಾನ ಹಾಗೂ ಮುಸ್ಲಿಂ ಜಗತ್ತು ಸಂಪೂರ್ಣ ದುಃಖದಲ್ಲಿದೆ. ಹಾಗಾಗಿ ದೇಶದಲ್ಲಿ ಹೊಸ ವರ್ಷಕ್ಕೆ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಯುವುದಿಲ್ಲ ಎಂದು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಆದೇಶ ನೀಡಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳ ಹತ್ಯಾಕಾಂಡ ಆಗಿರಬಹುದು. ಇಸ್ರೇಲ್ ಪಡೆಗಳು ಹಿಂಸಾಚಾರ ಮಿತಿಗಳನ್ನು ದಾಟಿದೆ ಎಂದು ಕಿಡಿಕಾರಿದ ಅವರು, ಪಾಕಿಸ್ತಾನವು ಪ್ಯಾಲೆಸ್ಟೈನ್‌ಗೆ ಎರಡು ಸಹಾಯ ಪ್ಯಾಕೇಜ್‌ಗಳನ್ನು ಕಳುಹಿಸಿದೆ. ಹಾಗೂ ಮೂರನೇಯ ಪ್ಯಾಕೇಜ್ ಕಳುಹಿಸುವ ತಯಾರಿಯಲ್ಲಿದೆ. ಜಾಗತಿಕ ವೇದಿಕೆಗಳಲ್ಲಿ ಪ್ಯಾಲೇಸ್ಟಿನಿಯನ್ ಜನರ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಪಾಕಿಸ್ತಾನ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿವರಿಸಿದರು.












Click it and Unblock the Notifications