ನೇಪಾಳದ ಹೊಸ ಸಂವಿಧಾನಕ್ಕೆ ಭಾರತದಿಂದ ಕಹಿ ಪ್ರತಿಕ್ರಿಯೆ
ಕಠ್ಮಂಡು, ಸೆ. 21: ಸುಮಾರು 7 ವರ್ಷಗಳ ಪ್ರಯತ್ನದ ನಂತರ ನೇಪಾಳ ಸಂಸತ್ತು ಭಾನುವಾರ ನೂತನ ಪೂರ್ಣ ಪ್ರಮಾಣದ ಜಾತ್ಯಾತೀತ ಮತ್ತು ಪ್ರಜಾತಾಂತ್ರಿಕ ಸಂವಿಧಾನವನ್ನು ಅಂಗೀಕರಿಸಿದೆ. ಹೊಸ ಸಂವಿಧಾನ ಜಾರಿಗೆ ಬರುತ್ತಿದೆ ಎಂದು ನೇಪಾಳ ಅಧ್ಯಕ್ಷ ರಾಮ್ ಬರನ್ ಯಾದವ್ ಘೊಷಿಸಿದ್ದಾರೆ. ಅದರೆ, ಸಂಸತ್ತು ರಚನೆ ಬಿಕ್ಕಟ್ಟಿನಿಂದ ಉಂಟಾಗಿರುವ ಗಲಭೆ, ಘರ್ಷಣೆ ಬಗ್ಗೆ ಭಾರತ ಸರ್ಕಾರ ಕಿಡಿಕಾರಿದೆ.
2008ರಲ್ಲಿ 240 ವರ್ಷಗಳ ಅರಸೊತ್ತಿಗೆ ಆಡಳಿತ ಕೊನೆಗೊಂಡಿತ್ತು. ಆ ಬಳಿಕ ಮಾವೋವಾದಿಗಳು ಅಧಿಕಾರಿ ಹಿಡಿದಿದ್ದರು. ಆದರೆ ಒಳಜಗಳಗಳಿಂದಾಗಿ ಹೊಸ ಸಂವಿಧಾನ ಜಾರಿಗೆ ಬರಲು ವಿಳಂಬವಾಗಿತ್ತು.
ನೇಪಾಳ ಸಂಸತ್ತು ಐತಿಹಾಸಿಕ ಸಂವಿಧಾನವನ್ನು ಅಂಗೀಕರಿಸಿ ಜಾರಿಗೆ ಬಂದಿತ್ತು. 601 ಸದಸ್ಯ ಬಲದ ನೇಪಾಳ ಸಂಸತ್ತಿನಲ್ಲಿ ಶೇ 85ರಷ್ಟು ಸದಸ್ಯರು ಹೊಸ ಸಂವಿಧಾನವನ್ನು ಅನುಮೋದಿಸಿದ್ದರು. ಕೆಳಮನೆ ಅಥವಾ ಪ್ರತಿನಿಧಿ ಸಭೆಯು 375 ಸದಸ್ಯರನ್ನು ಮತ್ತು ಮೇಲ್ಮನೆ 60 ಸದಸ್ಯರನ್ನು ಹೊಂದಿರಲಿವೆ.ಹೊಸ ಸಂವಿಧಾನಕ್ಕೆ ಚೀನಾ ಸ್ವಾಗತಿಸಿದೆ.
ಸಂವಿಧಾನವು 37 ವಿಭಾಗಗಳು ಮತ್ತು 304 ವಿಧಿಗಳ ಜೊತೆ ಏಳು ಉಪ ಆಖ್ಯಾಯಿಕೆಗಳನ್ನು ಹೊಂದಿದೆ. ಉನ್ನತ ಮಟ್ಟದ ಆಯೋಗವೊಂದು ಏಳು ರಾಜ್ಯಗಳನ್ನು ಇನ್ನೊಂದು ವರ್ಷದೊಳಗೆ ಅಂತಿಮಗೊಳಿಸಲಿದೆ.
ರಾಷ್ಟ್ರಕ್ಕೆ ಒಕ್ಕೂಟ ಸ್ವರೂಪವನ್ನು ನೀಡುವ ಬಗ್ಗೆ ಮಾಧೇಶಿ ಗುಂಪುಗಳ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ನೂತನ ಸಂವಿಧಾನ ಜಾರಿಯ ಐತಿಹಾಸಿಕ ಗಳಿಗೆಗೆ ನೇಪಾಳವು ಸಾಕ್ಷಿಯಾಯಿತು. ಶ್ರೀರಾಮಚಂದ್ರನ ಪತ್ನಿ ಸೀತೆಯ ಕುಲದವರಿಗೆ ಮಾನ್ಯತೆ ಸಿಗದಿರುವುದು ಭಾರತಕ್ಕೆ ನೋವು ತಂದಿದೆ.

ಹಿಂಸಾಚಾರ, ಭಾರತದಿಂದ ಎಚ್ಚರಿಕೆ
ದೇಶವನ್ನು ಏಳು ರಾಜ್ಯಗಳನ್ನಾಗಿ ವಿಭಜಿಸುವ ಒಕ್ಕೂಟ ಸ್ವರೂಪವನ್ನು ವಿರೋಧಿಸಿ ಹಿಮಾಲಯದ ಮಡಿಲಿನಲ್ಲಿರುವ ಈ ಪುಟ ರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಓರ್ವ ಸೇರಿದಂತೆ ಈವರೆಗೆ ಕನಿಷ್ಠ 40 ಜನರು ಬಲಿಯಾದ್ದಾರೆ. ಈ ಬಗ್ಗೆ ಗಮನಹರಿಸದ ನೇಪಾಳ ಸರ್ಕಾರಕ್ಕೆ ಭಾರತ ತಿರುಗೇಟು ನೀಡಿದೆ.

ಹಿಂದೂ ರಾಷ್ಟ್ರವಾಗಬೇಕು ಎಂಬ ಕೂಗು ಇನ್ನೂ ಇದೆ
ಸಂವಿಧಾನ ರಚನೆಗೂ ಮುನ್ನ ಕೆಲ ಪ್ರಮುಖ ಸಮುದಾಯ ಹಾಗೂ ವರ್ಗಗಳ ಪ್ರತಿಕ್ರಿಯೆಯನ್ನು ಪಡೆಯದ ಕಾರಣ ಹಿಂದೂ ರಾಷ್ಟ್ರವಾಗಬೇಕು ಎಂಬ ಕೂಗು ಇನ್ನೂ ಇದೆ.ಅದರೆ, ರಾಜಕೀಯವಾಗಿ ನೇಪಾಳಿ ಕಾಂಗ್ರೆಸ್, ಮಾವೋವಾದಿ, ಯುಎಂಎಲ್ ಪಕ್ಷಗಳು ಜಾತ್ಯತೀತ ಸಂವಿಧಾನಕ್ಕೆ ಸಮ್ಮತಿಸಿವೆ.

ನೇಪಾಳದ ಸಂವಿಧಾನದ ಬಗ್ಗೆ ಭಾರತದ ನಿಲುವೇನು
ನೇಪಾಳದ ಸಂವಿಧಾನದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ. ನೇಪಾಳದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ಹಿಂಸಾಚಾರ, ಮಧೇಶಿ ಸಮುದಾಯದ ಪ್ರತಿಭಟನೆ ಭಾರತದ ರಾಜ್ಯಗಳಾದ ಬಿಹಾರ ಹಾಗೂ ಉತ್ತರಪ್ರದೇಶಕ್ಕೂ ಹಬ್ಬುವ ಭೀತಿ ಎದುರಾಗಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.

ಭಾರತೀಯ ಮೂಲದ ಮಾಧೇಶಿಗಳ ರಕ್ಷಣೆ
ಭಾರತೀಯ ಮೂಲದ ಮಾಧೇಶಿಗಳ ರಕ್ಷಣೆ ಹಾಗೂ ಅವರಿಗೆ ಹಕ್ಕು ಕೊಡಿಸುವುದು ಭಾರತದ ಜವಾಬ್ದಾರಿ ಎಂದು ಅಲ್ಲಿನ ಜನ ನಂಬಿದ್ದಾರೆ. ಭಾರತ ಸರ್ಕಾರ ಕೂಡಾ ಈ ಬಗ್ಗೆ ನೇಪಾಳಕ್ಕೆ ಸೂಚಿಸಿದೆ. ನೇಪಾಳದ ಬಯಲು ಸೀಮೆಯಲ್ಲಿನ ಈ ಜನರು ಭಾರತದ ಬಿಹಾರ, ಅವಧ್ ಪ್ರಾಂತ್ಯದ ಮೂಲದವರು ಎನ್ನಲಾಗಿದೆ. ಸಂವಿಧಾನ ರಚನೆಯಲ್ಲಿ ಮಾಧೇಶಿಗಳ ಬಗ್ಗೆ ಗಮನ ಹರಿಸಿಲ್ಲ ಎಂಬುದು ಈಗ ಸಮಸ್ಯೆಗೆ ಕಾರಣವಾಗಿದೆ.

ಶ್ರೀರಾಮಚಂದ್ರನ ಪತ್ನಿ ಸೀತೆಯ ಕುಲದವರು
ಮಾಧೇಶಿಗಳು(ಮಧ್ಯದೇಶಿಗಳು) ಶ್ರೀರಾಮಚಂದ್ರನ ಪತ್ನಿ ಸೀತೆಯ ಕುಲದವರು ಎನ್ನಲಾಗಿದೆ. ಜನಕರಾಜನ ಮಗಳು ಸೀತೆ ಮಿಥಿಲಾ ನಗರದ ನಿವಾಸಿಯಾಗಿದ್ದು, ಆಕೆಯ ಭಾಷೆಯನ್ನೇ (ಮೈಥಿಲಿ) ಈ ಜನರು ಮಾತನಾಡುತ್ತಿದ್ದಾರೆ. ನೇಪಾಳಿ ಭಾಷೆ ಬಿಟ್ಟರೆ ಮೈಥಿಲಿ ಭಾಷೆಯೇ ಅತಿ ಹೆಚ್ಚು ಜನ ಮಾತನಾಡುವ ಭಾಷೆಯಾಗಿದೆ. ವಿಜ್ಞಾನಿ ಸಿಕೆ ರೌತ್, ಗಾಯಕ ಉದಿತ್ ನಾರಾಯಣ್ ಈ ಜನಾಂಗದ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ.












Click it and Unblock the Notifications