Earthquake: ಮ್ಯಾನ್ಮಾರ್ ಭೂಕಂಪ ದುರಂತ; 2000 ದಾಟಿದ ಮೃತರ ಸಂಖ್ಯೆ
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,056 ಕ್ಕೇರಿದೆ ಎಂದು ಸೋಮವಾರ ಜುಂಟಾ ಮಾಹಿತಿ ನೀಡಿದೆ. ದುರಂತದಲ್ಲಿ 3,900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಂಟಾ ವಕ್ತಾರರ ನೀಡಿರುವ ಮಾಹಿತಿ ಪ್ರಕಾರ, ಇನ್ನೂ 270 ಮಂದಿ ಕಾಣೆಯಾಗಿದ್ದಾರೆ.
ಮಹಾ ದುರಂತದಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಒಂದು ವಾರ ರಾಷ್ಟ್ರೀಯ ಶೋಕಾರಣೆ ನಡೆಸಲು ಘೋಷಣೆ ಮಾಡಲಾಗಿದೆ. ಜೀವ ನಷ್ಟ ಮತ್ತು ಹಾನಿಗಳಿಗೆ ಸಂತಾಪ ಸೂಚಿಸಿ ಏಪ್ರಿಲ್ 6 ರವರೆಗೆ ರಾಷ್ಟ್ರೀಯ ಧ್ವಜಗಳನ್ನು ಅರ್ಧಕ್ಕೆ ಹಾರಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.

17 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮತ್ತು ಭೂಕಂಪದಿಂದ ಹೆಚ್ಚು ಹಾನಿಯಾಗಿರುವ ನಗರಗಳಲ್ಲಿ ಒಂದಾಗಿರುವ ದೇಶದ ಎರಡನೇ ಅತಿದೊಡ್ಡ ಮಂಡಾಲೆ ನಗರದಲ್ಲಿ ರಕ್ಷಣಾ ಪ್ರಯತ್ನಗಳ ವೇಗವನ್ನು ಕಡಿಮೆ ಮಾಡಲಾಗಿದ್ದು ಸದ್ಯ ಪರಿಸ್ಥಿತಿ ಒಂದು ಹಂತಕ್ಕೆ ಸುಧಾರಿಸಿದ್ದು ಈ ಘೋಷಣೆಯನ್ನು ಮಾಡಲಾಗಿದೆ.
ಪರಿಸ್ಥಿತಿ ತುಂಬಾ ಭೀಕರವಾಗಿದ್ದು, ಏನಾಗುತ್ತಿದೆ ಎಂಬುದನ್ನು ಮಾತಿನಲ್ಲಿ ಹೇಳುವುದು ಕಷ್ಟ ಎಂದು ಮಂಡಾಲೆಯ ಸಜ್ಜಾ ಉತ್ತರ ಮಸೀದಿಯ ಮುಖ್ಯ ಆಡಳಿತಾಧಿಕಾರಿ ಆಂಗ್ ಮೈಂಟ್ ಹುಸೇನ್ ಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಮನೆ ಕಳೆದುಕೊಂಡಿರುವ ಸಾವಿರಾರು ಜನ ಸದ್ಯ ರಸ್ತೆಗಳಲ್ಲಿ ಜೀವನ ಮಾಡುವಂತಾಗಿದೆ.
ಆತಂಕ ಹೆಚ್ಚಿಸಿದ ಭೂಕಂಪ
ಭೂಕಂಪದಿಂದ ಮನೆಗಳಿಗೆ ಹಾನಿಯಾಗಿದ್ದರೂ ಮನೆಗಳಿಗೆ ವಾಪಸ್ ತೆರಳಲು ಜನ ಭಯಭೀತರಾಗಿದ್ದಾರೆ. ವಾರಾಂತ್ಯದಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದ್ದು ಜನರನ್ನು ಮನೆಗಳಿಗೆ ತೆರಳಲು ಭಯಪಡುವಂತೆ ಮಾಡಿದೆ. ಸತತ ಮೂರನೇ ದಿನ ಕೂಡ ಮಂಡಾಲೆ ನಗರದಲ್ಲಿ ಜನ ಬೀದಿಗಳಲ್ಲಿ ಕಾಲ ಕಳೆಯುವಂತಾಗಿದೆ.
ಜನ ಡೇರೆಗಳನ್ನು ಹಾಕಿಕೊಂಡಿದ್ದು ಚಿಕ್ಕ ಮಕ್ಕಳು ಮತ್ತು ಅನೇಕರನ್ನು ರಸ್ತೆಗಳ ಮಧ್ಯದಲ್ಲಿ ಮಲಗಿಸಲಾಗಿದೆ. ಕಟ್ಟಡಗಳಿಂದ ಜನ ದೂರ ಉಳಿದಿದ್ದು ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಬೀಡು ಬಿಟ್ಟಿದ್ದಾರೆ.
ಭೂಕಂಪದಲ್ಲಿ ಸಾವನ್ನಪ್ಪಿದವರಲ್ಲಿ ಮೂವರು ಚೀನೀ ಪ್ರಜೆಗಳು ಮತ್ತು ಇಬ್ಬರು ಫ್ರೆಂಚ್ ಜನರು ಸೇರಿದ್ದಾರೆ ಎಂದು ಚೀನಾದ ರಾಜ್ಯ ಮಾಧ್ಯಮ ಮತ್ತು ಪ್ಯಾರಿಸ್‌ನಲ್ಲಿರುವ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮ್ಯಾನ್ಮಾರ್ ನ ಹೆಚ್ಚಿನ ಭಾಗಗಳಲ್ಲಿ ರಸ್ತೆ ಸಂಪರ್ಕ, ಮೊಬೈಲ್ ಸಂಪರ್ಕ ಸಂವಹನ ಕಡಿಮೆಯಾಗಿದೆ. ಇದರಿಂದ ನಿಜವಾದ ಹಾನಿಯ ಪ್ರಣಾಮ ಇನ್ನೂ ತಿಳಿಯಬೇಕಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
7.7 ತೀವ್ರತೆಯ ಭೂಕಂಪದಿಂದಾಗಿ ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವ್ಯಾಪಕ ಬಿರುಕುಗಳನ್ನು ಉಂಟುಮಾಡಿತು, ಕಟ್ಟಡಗಳು ನೆಲಸಮವಾಗಿದೆ. ಚೀನಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಭಾರತದ ಕೆಲವು ಭಾಗಗಳು ಸೇರಿದಂತೆ ನೆರೆಯ ದೇಶಗಳಲ್ಲಿ ಕೂಡ ಭೂಕಂಪನದ ಅನುಭವವಾಗಿದೆ.












Click it and Unblock the Notifications