ದಾಳಿ ಭೀತಿ: ಶ್ರೀಲಂಕಾದಲ್ಲಿ ಮುಸ್ಲಿಂ ನಿರಾಶ್ರಿತರಿಂದ ರಕ್ಷಣೆಗೆ ಮೊರೆ
ಕೊಲಂಬೋ, ಏಪ್ರಿಲ್ 25: ಈಸ್ಟರ್ ಹಬ್ಬದಂದು ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಬಳಿಕ ಬೆದರಿಕೆ ಎದುರಿಸುತ್ತಿರುವ ನೂರಾರು ಮುಸ್ಲಿಂ ನಿರಾಶ್ರಿತರು ಅಲ್ಲಿನ ಮಸೀದಿಗಳು ಮತ್ತು ಪೊಲೀಸ್ ಠಾಣೆಗಳನ್ನು ಆಶ್ರಯಕ್ಕಾಗಿ ಆಶ್ರಯಿಸಿದ್ದಾರೆ.
ಸರಣಿ ಬಾಂಬ್ ಸ್ಫೋಟದ ಹೇಯ ಕೃತ್ಯವನ್ನು ಶ್ರೀಲಂಕಾದಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮುಖಂಡರು ಖಂಡಿಸಿದ್ದಾರೆ. ಆದರೆ, ಈ ಸಮುದಾಯದ ಜನರು ತಮ್ಮ ಮೇಲೆ ಹಲ್ಲೆ ನಡೆಯಬಹುದಾದ ಆತಂಕಕ್ಕೆ ಸಿಲುಕಿದ್ದಾರೆ.
ನೆಗಾಂಬೋದಲ್ಲಿ ನೆಲೆಸಿರುವ ಅಹ್ಮದಿ ಮುಸ್ಲಿಮರು ಹಿಂದೊಮ್ಮೆ ನಿರಾಶ್ರಿತರಾಗಿ ಶ್ರೀಲಂಕಾಕ್ಕೆ ವಲಸೆ ಬಂದಿದ್ದವರು. ಈಗ ಭಯೋತ್ಪಾದನಾ ದಾಳಿಗಳು ಸಂಭವಿಸಿದ ನಂತರ ಸಮುದಾಯದ ವಿರುದ್ಧ ಆಕ್ರೋಶಗೊಂಡಿರುವ ಅಲ್ಲಿನ ಜಮೀನ್ದಾರರು ತಮ್ಮ ನೆಲೆಗಳಲ್ಲಿರುವ ಮುಸ್ಲಿಮರನ್ನು ತೆರವುಗೊಳಿಸಿದ್ದಾರೆ.

'ಇಂದು ಈ ನಿರಾಶ್ರಿತರು ಶ್ರೀಲಂಕಾದಲ್ಲಿ ಮತ್ತೆ ನಿರಾಶ್ರಿತರಾಗಿದ್ದಾರೆ. ಎರಡನೆಯ ಬಾರಿಗೆ ಅವರು ನೆಲೆ ಕಳೆದುಕೊಂಡಿದ್ದಾರೆ' ಎಂದು ಶ್ರೀಲಂಕಾದ ಮಾನವಹಕ್ಕುಗಳ ಸಂಘಟನೆಯ ಹೋರಾಟಗಾರ ರೂಕಿ ಫರ್ನಾಂಡೊ ಹೇಳಿದ್ದಾರೆ.
ಈ ನಿರಾಶ್ರಿತರು ಪಾಕಿಸ್ತಾನ, ಅಫ್ಘಾನಿಸ್ತಾನ, ಯೆಮನ್ ಮತ್ತು ಇರಾನ್‌ನಿಂದ ಬಂದವರಾಗಿದ್ದಾರೆ. ಈ ದೇಶಗಳಲ್ಲಿ ಅಹ್ಮದಿಗಳನ್ನು ಅಲ್ಲಿನ ಇಸ್ಲಾಮಿಕ್ ಸಂಘಟನೆಗಳು ಮುಸ್ಲಿಮರು ಎಂದು ಪರಿಗಣಿಸಿಲ್ಲ. ಅಲ್ಲಿ ನಿರಂತರವಾಗಿ ದಾಳಿಗೆ ತುತ್ತಾಗುತ್ತಿದ್ದ ಅವರು ಜೀವ ಉಳಿಸಿಕೊಳ್ಳಲು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೆ ವಲಸೆ ಹೋಗಿದ್ದರು.
ಈಗಾಗಲೇ ಕೆಲವಡೆ ಅಪರಿಚಿತ ವ್ಯಕ್ತಿಗಳು ಅವರ ಮನೆಗಳನ್ನು ಪುಡಿ ಮಾಡಿ ಥಳಿಸಿದ ಘಟನೆಗಳು ವರದಿಯಾಗಿವೆ. ಸುಮಾರು 700 ಮಂದಿ ನಿರಾಶ್ರಿತರು ನೆಗೊಂಬೋದ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ.












Click it and Unblock the Notifications