Muammar Gaddafi: ಮುಅಮ್ಮರ್ ಗಡಾಫಿ ಪುತ್ರನ ಕಥೆ ಮುಗಿಸಿದ ಅನಾಮಿಕರು, ಲಿಬಿಯಾ ನೆಲದಲ್ಲಿ ಮತ್ತೆ ಗದ್ದಲ
ಲಿಬಿಯಾ ಇಷ್ಟುದಿನ ನೆಮ್ಮದಿಯಾಗಿ ಇತ್ತು, ಆದರೆ ಇದೀಗ ಮತ್ತೊಮ್ಮೆ ಲಿಬಿಯಾ ನಿವಾಸಿಗಳು ಚಿಂತೆ ಮಾಡುವ ಪರಿಸ್ಥಿತಿ ಎದುರಾಗಿದೆ. ಅಂದಹಾಗೆ ಹಿಂಸೆಯ ಕೂಪದಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿರುವ ಲಿಬಿಯಾಗೆ ಕೆಲ ವರ್ಷಗಳಿಂದ ಒಂದಷ್ಟು ಚೇತರಿಕೆ ಸಿಕ್ಕಿತ್ತು. ಲಿಬಿಯಾದ ಮಾಜಿ ಸರ್ವಾಧಿಕಾರಿ ಆಗಿದ್ದ ಮುಅಮ್ಮರ್ ಗಡಾಫಿ ಹತ್ಯೆ ನಂತರ ಲಿಬಿಯಾ ಒಂದಷ್ಟು ತಣ್ಣಗಾಗಿತ್ತು. 2011 ಅಕ್ಟೋಬರ್ ತಿಂಗಳಲ್ಲಿ ಮುಅಮ್ಮರ್ ಗಡಾಫಿ ಕಥೆ ಮುಗಿದಿತ್ತು. ಹೀಗಿದ್ದಾಗ ಇಂದು ಮಾಜಿ ಸರ್ವಾಧಿಕಾರಿಯ ಮಗನನ್ನೇ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮುಅಮ್ಮರ್ ಗಡಾಫಿಯ 2ನೇ ಮಗ ಸೈಫ್ ಅಲ್-ಇಸ್ಲಾಂ ಗಡಾಫಿಯ ಭೀಕರ ಕೊಲೆಯಾಗಿದೆ. ಆದ್ರೆ ಈ ಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಹತ್ಯೆ ಬಗ್ಗೆ ಈಗಾಗಲೇ ಲಿಬಿಯಾದ ಅಧಿಕಾರಿಗಳು ಮತ್ತು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇನ್ನು ಮುಅಮ್ಮರ್ ಗಡಾಫಿಯ 2ನೇ ಮಗನಿಗೆ 53 ವರ್ಷ ವಯಸ್ಸಾಗಿತ್ತು. ಸೈಫ್ ಅಲ್-ಇಸ್ಲಾಂ ಗಡಾಫಿ ಹತ್ಯೆಗಾಗಿ ಮೊದಲೇ ಎಲ್ಲಾ ರೀತಿ ಪ್ಲಾನ್ ಮಾಡಿಕೊಂಡು ನುಗ್ಗಿದ ನಾಲ್ವರು ಬಂದೂಕುಧಾರಿಗಳು ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಹೀಗೆ ನಡೆದ ಗುಂಡಿನ ದಾಳಿಯಲ್ಲಿ ಸೈಫ್ ಅಲ್-ಇಸ್ಲಾಂ ಗಡಾಫಿ ಜೀವ ಬಿಟ್ಟಿರುವುದು ಕನ್ಫರ್ಮ್ ಆಗಿದೆ. ಮತ್ತೊಂದು ಕಡೆ ಈ ಹತ್ಯೆ ನಂತರ ಇನ್ನೊಮ್ಮೆ ಲಿಬಿಯಾ ನಲುಗಿ ಹೋಗಿದೆ.

40 ವರ್ಷ ಲಿಬಿಯಾ ಆಳಿದ್ದ ಗಡಾಫಿ
ಕೇವಲ 15 ವರ್ಷಗಳ ಹಿಂದೆ ಲಿಬಿಯಾ ಅಂದ್ರೆ ಮುಅಮ್ಮರ್ ಗಡಾಫಿ & ಮುಅಮ್ಮರ್ ಗಡಾಫಿ ಅಂದ್ರೆ ಲಿಬಿಯಾ ಎಂಬಂತಹ ವಾತಾವರಣ ಇತ್ತು. ಲಿಬಿಯಾ ನೆಲವನ್ನು 40 ವರ್ಷಕ್ಕೂ ಹೆಚ್ಚು ಕಾಲ ಆಳಿದ್ದ ಮುಅಮ್ಮರ್ ಗಡಾಫಿ, ಪಾಶ್ಚಿಮಾತ್ಯ ದೇಶಗಳ ವಿರೋಧ ಕಟ್ಟಿಕೊಂಡು ಕೊನೆಗೆ ತನ್ನ ಅಧಿಕಾರ ಬಿಡುವಂತಹ ಪರಿಸ್ಥಿತಿ ಬಂದಿತ್ತು. ಲಿಬಿಯಾ ದೇಶದಲ್ಲಿ ಅಷ್ಟೊತ್ತಿಗಾಗಲೇ ಜನ ಕೂಡ ದಂಗೆ ಎದ್ದು, ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಶುರು ಮಾಡಿದ್ದರು. ಇದೇ ಸಮಯಕ್ಕೆ ಸರಿಯಾಗಿ ಸೆರೆಯಾದ ಮುಅಮ್ಮರ್ ಗಡಾಫಿ ಜೀವ ಬಿಟ್ಟಿದ್ದು ಈಗ ಇತಿಹಾಸ. ಹೀಗಿದ್ದಾಗ ದಿಢೀರ್ ಮುಅಮ್ಮರ್ ಗಡಾಫಿ 2ನೇ ಮಗನ ಕಥೆ ಕೂಡ ಮುಗಿಸಲಾಗಿದೆ.
ಉತ್ತರಾಧಿಕಾರಿ ಸ್ಥಾನಕ್ಕೆ ಚರ್ಚೆ ನಡೆದಿತ್ತು
ಸೈಫ್ ಅಲ್-ಇಸ್ಲಾಂ ಗಡಾಫಿ ತನ್ನ ತಂದೆ ಮುಅಮ್ಮರ್ ಗಡಾಫಿ ನಂತರ ಲಿಬಿಯಾ ಆಳುವ ಸಾಧ್ಯತೆ ದಟ್ಟವಾಗಿತ್ತು. ಮುಅಮ್ಮರ್ ಗಡಾಫಿಗೆ ಉತ್ತರಾಧಿಕಾರಿ ಸೈಫ್ ಅಲ್-ಇಸ್ಲಾಂ ಗಡಾಫಿ ಎಂದೇ ಅಲ್ಲಿನ ಜನರು ಮಾತನಾಡುತ್ತಿದ್ದರು, ಕೆಲ ಸಮಯದ ಹಿಂದೆ ಮುಅಮ್ಮರ್ ಗಡಾಫಿ ಕುರಿತು ಸಂದರ್ಶನ ನೀಡಿದ್ದ ಸೈಫ್ ಅಲ್-ಇಸ್ಲಾಂ ಗಡಾಫಿ, ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದು ಸದ್ದು ಕೂಡ ಮಾಡಿತ್ತು.
ಆದರೆ ಈಗ ಸೈಫ್ ಅಲ್-ಇಸ್ಲಾಂ ಗಡಾಫಿಯ ಹತ್ಯೆಯಾಗಿದ್ದು, ವಾಯುವ್ಯ ಲಿಬಿಯಾದ ಜಿಂಟಾನ್ ಪಟ್ಟಣದ ಮನೆಗೆ ನುಗ್ಗಿದ ಬಂದೂಕು ಹಿಡಿದ ಮುಸುಕುಧಾರಿಗಳು ಮನಸ್ಸಿಗೆ ಬಂದ ರೀತಿ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಸೈಫ್ ಅಲ್-ಇಸ್ಲಾಂ ಗಡಾಫಿ ಜೀವ ಬಿಟ್ಟಿರುವುದು ಕನ್ಫರ್ಮ್ ಆಗಿದ್ದು, ಮತ್ತೆ ಲಿಬಿಯಾ ಕೊತ ಕೊತ ಕುದಿಯುತ್ತಿದೆ. ಹಾಗೇ ಹಿಂಸಾಚಾರ ಭುಗಿಲೇಳುವ ಆತಂಕ ಕೂಡ ಇದೀಗ ಲಿಬಿಯಾ ದೇಶದಲ್ಲಿ ಮನೆಮಾಡಿದೆ.












Click it and Unblock the Notifications