ಭಯೋತ್ಪಾದನೆ ವಿರುದ್ಧ ಹೋರಾಡಲು ಪಣತೊಟ್ಟ ಜಿ-20 ನಾಯಕರು
ಹ್ಯಾಂಬರ್ಗ್, ಜುಲೈ 7: ಭಯೋತ್ಪಾದನೆಗೆ ಆರ್ಥಿಕ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಮತ್ತು ಬೆಂಬಲ, ಪ್ರಾಯೋಜಕತ್ವ ನೀಡುವುದಕ್ಕೂ ಬ್ರೇಕ್ ಹಾಕಬೇಕು ಎಂದು ಜಿ-20 ದೇಶಗಳ ನಾಯಕರು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಜಿ -20 ಸಮಾವೇಶದಲ್ಲಿ ಎಲ್ಲಾ 20 ದೇಶಗಳ ನಾಯಕರು ವಿಶ್ವದಾದ್ಯಂತ ಎಲ್ಲಾ ಭಯೋತ್ಪಾದಕ ದಾಳಿಯನ್ನು ಖಂಡಿಸಿದರಲ್ಲದೆ, ಭಯೋತ್ಪಾದನೆ ಮತ್ತು ಅದರ ಹಣಕಾಸಿನ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಪ್ರಪಂಚದ ಪ್ರತಿಯೊಂದು ಭಾಗದಲ್ಲಿಯೂ ಭಯೋತ್ಪಾದನೆ ವಿರುದ್ಧ ಹೋರಾಡಬೇಕಾಗಿದೆ.ಮತ್ತು ಭಯೋತ್ಪಾದಕ ಸುರಕ್ಷಿತ ಅಡಗುತಾಣಗಳನ್ನು ತೆಗೆದುಹಾಕಬೇಕಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ನಾಯಕರು ಹೇಳಿದರು.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಮತ್ತು ವಿಶ್ವಸಂಸ್ಥೆಯ ಚಾರ್ಟರ್ ನಂತೆ ಭಯೋತ್ಪಾದನೆಯನ್ನು ಎದುರಿಸುವ ಎಲ್ಲ ಕ್ರಮಗಳನ್ನು ಜವಾಬ್ದಾರಿಯುತವಾಗಿ ಜಾರಿಗೊಳಿಸಬೇಕು ಎಂದು ಅವರು ಪುನರುಚ್ಚರಿಸಿದರು.
ಮೋದಿ ಭಾಷಣ
ಜಿ-20 ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ 'ಮುಕ್ತ ಆಡಳಿತ'ವನ್ನು ಬೆಂಬಲಿಸುವ ಮತ್ತು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಜಾಗತೀಕರಣದಿಂದ ಲಾಭಗಳನ್ನು ಪಡೆದುಕೊಳ್ಳಲು ರಕ್ಷಣಾ ನೀತಿಯ ಖರ್ಚುಗಳಲ್ಲಾದ ಹೆಚ್ಚಳಗಳು ಅಡ್ಡಿಯಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ಮಾತನಾಡಿದ ಪ್ರಧಾನಿಗಳು, "ಅಪನಗದೀಕರಣದಿಂದ ಭ್ರಷ್ಟಾಚಾರ ಕಡಿಮೆಯಾಗಿದೆ, ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ ಮತ್ತು ಸಂಘಟಿತ ಆರ್ಥಿಕ ವಲಯ ವಿಸ್ತಾರವಾಗಿದೆ," ಎಂದು ಪ್ರತಿಪಾದಿಸಿದರು.
2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು 50 ಕೋಟಿ ಯುವಕರ ಕೈಗೆ ಉತ್ಪಾದಕ ಕೌಶಲ್ಯ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದಿ ಹೇಳಿದರು.

ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ನಮ್ಮ ಸರಕಾರ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದ ಮೋದಿ, ಪ್ರಮುಖ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸಲು ಜಿ-20 ನಾಯಕತ್ವ ವಹಿಸಲಿದೆ ಎಂದು ನಂಬಿರುವುದಾಗಿ ತಿಳಿಸಿದರು.
ಹಣಕಾಸು ಖಾತೆಯ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ವಿನಿಮಯ ಮಾಡುವುದರಿಂದ ಕಪ್ಪು ಹಣ ಮತ್ತು ಅಕ್ರಮ ಹಣದ ವರ್ಗಾವಣೆಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿಗಳು ಇದೇ ಸಂದರ್ಭದಲ್ಲಿ ಹೇಳಿದರು.
"ತಳ ಮಟ್ಟದಲ್ಲಿ ಭ್ರಷ್ಟಾಚಾರ ನಿಗ್ರಹಿಸಿರುವುದರಿಂದ ಹಾಗೂ ಲಾಭದ ಹಂಚಿಕೆಯ ವಿಧಾನ ಅಳವಡಿಸಿದ್ದುದರಿಂದ, ನಾವು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.
ನುರಿತ ಕಾರ್ಮಿಕರ ಪ್ರವೇಶವನ್ನು ನಿರ್ಬಂಧಿಸುವ ವಿವಿಧ ರಾಷ್ಟ್ರಗಳ ರಕ್ಷಣಾತ್ಮಕ ಕ್ರಮಗಳನ್ನು ಉಲ್ಲೇಖಿಸಿದ ಮೋದಿ ಇಂಥಹ ನಡೆವಳಿಕೆಗಳು ಜಾಗತೀಕರಣದಿಂದ ಲಾಭವನ್ನು ಕಿತ್ತುಕೊಳ್ಳಬಹುದು ಎಂದು ಎಚ್ಚರಿಸಿದರು.
"ಜಾಗತೀಕರಣದಿಂದ ಉಂಟಾಗುವ ಪ್ರಯೋಜನವು ರಕ್ಷಣಾ ನೀತಿಗೇ ಖರ್ಚಾಗುತ್ತಿದೆ" ಎಂದು ಹೇಳಿದ ಮೋದಿ 'ಮುಕ್ತ ಆಡಳಿತ'ವನ್ನು ಉಳಿಸಿಕೊಳ್ಳುವ ಮತ್ತು ಬೆಂಬಲಿಸುವ ನಿಟ್ಟಿನಲ್ಲಿ G20 ಒಂದೇ ಧ್ವನಿಯನ್ನು ಹೊಂದಿರಬೇಕು ಎಂದು ಹೇಳಿದರು.
ಜಾಗತಿಕ ಬೆಳವಣಿಗೆ ಮತ್ತು ವ್ಯಾಪಾರದ ಬಗ್ಗೆ ಮಾತನಾಡಿದ ಪ್ರಧಾನಿ, 'ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 1.3 ಶತಕೋಟಿ ಜನರ ಏಕೀಕೃತ ಮಾರುಕಟ್ಟೆ ರಚಿಸಲಿದೆ,' ಎಂದು ಹೇಳಿದರು.
ಎಲ್ಲಾ ಭಾರತೀಯರಿಗೆ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ದಾಟಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿಗಳು ಹೇಳಿದರು.
11 ಅಂಶಗಳ ಆಕ್ಷನ್ ಅಜೆಂಡಾ
ಈ ವೇಳೆ 11 ಅಂಶಗಳಿರುವ ಕಾರ್ಯಸೂಚಿಯನ್ನು (ಆಕ್ಷನ್ ಅಜೆಂಡಾ) ಮೋದಿ ಪ್ರಸ್ತುತ ಪಡಿಸಿದರು. ಇದರಲ್ಲಿ ಮೋದಿ"ಭಯೋತ್ಪಾದನೆಯ ವಿರುದ್ದ ಹೋರಾಡಲು ಜಾಗತಿಕ ನಾಯಕರು ಒಗ್ಗಟ್ಟಾಗಿ ನಿಲ್ಲಬೇಕು. ಇವತ್ತು ಕೆಲವು ರಾಷ್ಟ್ರಗಳು ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಭಯೋತ್ಪಾದನೆಯನ್ನು ಬಳಸುತ್ತಿವೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
"ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರೆ-ಎ-ತೈಯಬಾ ಮತ್ತು ಜೈಷೆ-ಎ-ಮೊಹಮ್ಮದ್‌ನಿಂದ ಹಿಡಿದು ಐಸಿಸ್, ಅಲ್ ಖೈದಾ ಸಂಘಟನೆಗಳೆಲ್ಲವೂ ವಿಭಿನ್ನವಾಗಿರಬಹುದು. ಆದರೆ, ಅವುಗಳ ವಿಚಾರಧಾರೆ ಒಂದೇ ಆಗಿದೆ," ಎಂದರಲ್ಲದೆ ಭಯೋತ್ಪಾದನೆ ನಿಗ್ರಹ ಹೋರಾಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಬಲ ಬೆಂಬಲ ಸಿಗಬೇಕು ಎಂದರು.












Click it and Unblock the Notifications