ಮನೆಗಳು ಛಿದ್ರ ಛಿದ್ರ.. ಬದುಕನ್ನು ಬೀದಿಗೆ ತಳ್ಳಿದ ಮೋಚಾ!
ಮ್ಯಾನ್ಮಾರ್: ಚೆಲ್ಲಾಪಿಲ್ಲಿಯಾಗಿ ಬಿದ್ದ ಗುಡಿಸಲುಗಳು.. ಮನೆ ಕಳೆದುಕೊಂಡು ಅಳುತ್ತಿರುವ ಮಕ್ಕಳು & ಮಹಿಳೆಯರು. ಅಷ್ಟಕ್ಕೂ ಇದು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ಮೋಚಾ ಚಂಡಮಾರುತ ಸೃಷ್ಟಿಸಿದ ಅವಾಂತರದ ಪ್ರತಿಬಿಂಬ. ನೂರಾರು ಕಿಲೋ ಮೀಟರ್ ವೇಗದಲ್ಲಿ ಬಂದು ಅಪ್ಪಳಿಸಿದ ಮೋಚಾ ಬಿರುಗಾಳಿ ಜನರ ಬದುಕನ್ನೂ ಕೊಚ್ಚಿಕೊಂಡು ಹೋಗಿದೆ.
ಹೌದು, ಮೋಚಾ ಚಂಡಮಾರುತದ ಅಬ್ಬರಕ್ಕೆ ಎಲ್ಲಾ ಅಲ್ಲೋಲ ಕಲ್ಲೋಲವಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಜನ ಮೋಚಾ ಆರ್ಭಟಕ್ಕೆ ಜೀವ ಕಳೆದುಕೊಂಡಿದ್ದರೆ, ಕಾಣೆಯಾದವರ ಲೆಕ್ಕ ಇನ್ನೂ ಸಿಗುತ್ತಿಲ್ಲ. ಮ್ಯಾನ್ಮಾರ್ ಕರಾವಳಿ ಹಳ್ಳಿಗಳು ಛಿದ್ರ ಛಿದ್ರವಾಗಿವೆ. ಸಮುದ್ರದ ನೀರು ಹತ್ತಾರು ಕಿಲೋಮೀಟರ್ ದೂರದ ತನಕ ಒಳಗೆ ನುಗ್ಗಿರುವ ಕಾರಣ ಕೃಷಿ ಭೂಮಿ ಕೂಡ ನಾಶವಾಗಿ ಹೋಗಿದೆ. ಇದನ್ನ ಬಿಡಿ ಮೋಚಾ ಬಿರುಗಾಳಿ ಅದೆಷ್ಟು ಬಲವಾಗಿ ಮ್ಯಾನ್ಮಾರ್ ಕರಾವಳಿಗೆ ಅಪ್ಪಳಿಸಿತ್ತು ಎಂದರೆ, ದಟ್ಟ ಅರಣ್ಯ ಕೂಡ ಛಿದ್ರವಾಗಿದೆ.

ನರಕವಾಯ್ತು ಜೀವನ, ಜನರ ಹಿಡಿಶಾಪ
ಈಗಾಗಲೇ ಮೋಚಾ ಚಂಡಮಾರುತ ಬಹುತೇಕ ಸೈಲೆಂಟ್ ಆಗಿದೆ, ಆದ್ರೆ ಅದು ಸೃಷ್ಟಿಸಿರುವ ಅವಾಂತರಗಳು ಸರಿಯಾಗಲು ವರ್ಷಗಳೇ ಬೇಕು. ಸ್ಥಳೀಯ ಸರ್ಕಾರ ಕೂಡ ಸಂತ್ರಸ್ತರ ನೆರವಿಗೆ ಬರುತ್ತಿಲ್ಲ ಎಂಬ ಆರೋಪದ ಮಧ್ಯೆ ಜನರ ಬದುಕು ನರಕವಾಗಿದೆ. ಉಪ್ಪು ತುಂಬಿದ ನೀರು ಮನೆ ಮೇಲೆ, ರಸ್ತೆಗಳ ಮೇಲೆ ಬಿದ್ದಿರುವುದು ಮಾತ್ರವಲ್ಲ ಕುಡಿಯುವ ನೀರಿನ ಮೂಲಗಳು ಕೂಡ ಉಪ್ಪಾಗಿವೆ. ಛಿದ್ರ ಛಿದ್ರವಾದ ಗುಡಿಸಲುಗಳ ಎದುರಲ್ಲೇ ಜನರು ನರಳಾಡುತ್ತಿದ್ದಾರೆ. ಅದರಲ್ಲೂ ರೊಹಿಂಗ್ಯಾ ನಿರಾಶ್ರಿತರ ಪಾಡು ಅಕ್ಷರಶಃ ನರಕವಾಗಿದೆ.
ಸುರಕ್ಷಿತ ಜಾಗಗಳಿಗೆ ಜನರು ಎಸ್ಕೇಪ್
ಮ್ಯಾನ್ಮಾರ್‌ನ ರಾಖಿನೆ ರಾಜ್ಯದ ಕಡೆಗೆ ಸೈಕ್ಲೋನ್ ನುಗ್ಗುತ್ತಿದ್ದ ಹಿನ್ನೆಲೆಯಲ್ಲಿ 2 ದಿನದ ಹಿಂದೆಯೇ ಸಿಟ್ವೆ ಸಿಟಿಯ ಜನರಿಗೆ ಅಲರ್ಟ್ ನೀಡಲಾಗಿತ್ತು. 3 ಲಕ್ಷ ಜನಸಂಖ್ಯೆಯಿರುವ ಸಿಟ್ವೆ ನಗರದಲ್ಲಿನ 4 ಸಾವಿರಕ್ಕೂ ಅಧಿಕ ಜನರನ್ನು ನಗರಗಳಿಗೆ ಸ್ಥಳಾಂತರಿಸಿಲಾಗಿತ್ತು. 20,000ಕ್ಕೂ ಹೆಚ್ಚು ಜನ ಎತ್ತರದ ಸ್ಥಳದಲ್ಲಿರುವ ಜಾಗಗಳಲ್ಲಿ ಆಶ್ರಯ ಪಡೆದ ಪರಿಣಾಮ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಚಂಡಮಾರುತ ಅಪ್ಪಳಿಸುವ ಮೊದಲೇ ನಗರದಲ್ಲಿ ಗಂಟೆಗೆ 48 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಚಂಡಮಾರುತ ಅಪ್ಪಳಿಸಿದಾಗ ಗಾಳಿಯ ವೇಗ ನೂರಾರು ಕಿಮೀ ಆಗಿತ್ತು.

ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ನರಕ
ರೊಹಿಂಗ್ಯಾ ನಿರಾಶ್ರಿತರ ಸ್ವಂತ ದೇಶ ಮ್ಯಾನ್ಮಾರ್ ಕೂಡ 'ಮೋಚಾ' ದಾಳಿಗೆ ಸಿಲುಕಿ ನಲುಗಿದೆ. ಇದೇ ಹೊತ್ತಲ್ಲಿ ತಮ್ಮ ದೇಶದ ಹಿಂಸಾಚಾರದಿಂದ ಓಡಿ ಬಂದು, ಬಾಂಗ್ಲಾದಲ್ಲಿ ಆಶ್ರಯ ಪಡೆದ 10 ಲಕ್ಷ ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ನರಕವಾಗಿ ಬದಲಾಗಿದೆ. ಗುಡಿಸಲು ಕಟ್ಟಿಕೊಂಡು, ಸಮುದ್ರದ ಪ್ರದೇಶದ ಸಮೀಪವೇ ಬದುಕುತ್ತಿರುವ ರೊಹಿಂಗ್ಯಾ ನಿರಾಶ್ರಿತರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಟ್ರಕ್ ಮತ್ತಿತರ ವಾಹನಗಳ ಮೂಲಕ ಸಮುದಾಯ ಕೇಂದ್ರಗಳಿಗೆ ಸ್ಥಳಾಂತರವಾಗಿದ್ದ ರೊಹಿಂಗ್ಯಾ ನಿರಾಶ್ರಿತರು ಮರಳಿ ತಮ್ಮ ಜಾಗಕ್ಕೆ ಬರುತ್ತಿದ್ದಾರೆ. ಆದರೆ ಎಲ್ಲಾ ಕೊಚ್ಚಿಕೊಂಡು ಹೋಗಿದೆ.
ದೊಡ್ಡಣ್ಣನಿಗೂ ಕಾಡುವ ಸೈಕ್ಲೋನ್!
ಮನುಷ್ಯನ ಭವಿಷ್ಯಕ್ಕೆ ಕಂಟಕವಾಗಿ ಒಂದೊಂದೇ ಪ್ರಾಕೃತಿಕ ವಿಕೋಪಗಳು ಅಪ್ಪಳಿಸುತ್ತಿವೆ. ಈ ಪೈಕಿ ಆಧುನಿಕ ಕಾಲದಲ್ಲಿ ಸೈಕ್ಲೋನ್ ಸೃಷ್ಟಿಸುತ್ತಿರುವ ವಿನಾಶ ಅಶ್ಟಿಷ್ಟಲ್ಲ. ಹೀಗಾಗಿ ವಿಜ್ಞಾನಿಗಳು ಕೂಡ ಚಂಡಮಾರುತಗಳನ್ನ ನಿಭಾಯಿಸುವ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಯಾವುದೂ ಸಕ್ಸಸ್ ಕಾಣುವ ಲಕ್ಷವೇ ತೋರುತ್ತಿಲ್ಲ. ಈ ಕಾರಣ ಮನುಷ್ಯ ಎಷ್ಟೇ ಬೆಳೆದರೂ ಪ್ರಕೃತಿ ಎದುರು ದೊಡ್ಡವನಲ್ಲ ಎಂಬುದು ಈ ಮೂಲಕ ಸಾಬೀತಾಗುತ್ತಿದೆ. ಅದ್ರಲ್ಲೂ ಅಮೆರಿಕ ಇಡೀ ಜಗತ್ತಿನಲ್ಲೇ ಹೆಚ್ಚು ನಷ್ಟವನ್ನು ಇತ್ತೀಚೆಗೆ ಸೈಕ್ಲೋನ್ ಕಾರಣಕ್ಕೆ ಅನುಭವಿಸುತ್ತಿದೆ.

ಒಟ್ನಲ್ಲಿ ಮೋಚಾ ಚಂಡಮಾರುತದ ಕಾರಣಕ್ಕೆ ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಧಾವಿಸಿವೆ. ಆದರೂ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಸಾವಿರಾರು ಜನರಿಗೆ ದಿಢೀರ್ ವಸತಿ ವ್ಯವಸ್ಥೆ ಕಲ್ಪಿಸುವ ಸವಾಲು ಸಣ್ಣದಲ್ಲ ಹೀಗಾಗಿ ಸ್ಥಳೀಯ ಸರ್ಕಾರಗಳು ಕೂಡ ಅಂತಾರಾಷ್ಟ್ರೀಯ ನೆರವಿಗೆ ಕಾದು ಕುಳಿತಿವೆ.












Click it and Unblock the Notifications