ಅಂಬಿ ಚೇತರಿಕೆ, ವೆಂಟಿಲೇಟರ್ ತೆಗೆಯುತ್ತಾರಂತೆ
ಬೆಂಗಳೂರು, ಮಾ.2: ವಸತಿ ಸಚಿವ, ನಟ ಅಂಬರೀಷ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಮೌಂಟ್ ಎಲಿಜಬೆತ್ ಆಸ್ಪತ್ರೆ ವೈದ್ಯ ಡಾ. ಶೆಟ್ಟಿ ಹೇಳಿದ್ದಾರೆ. ಸಿಂಗಪುರ ಆಸ್ಪತ್ರೆಯಿಂದ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಂಬರೀಷ್ ಅವರ ಪತ್ನಿ ಸುಮಲತಾ ಅವರು, ವದಂತಿಗೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 'ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರಿಗೆ 12 ರಿಂದ 15 ದಿನಗಳವರೆಗೆ ವಿಶ್ರಾಂತಿ ಅಗತ್ಯವಿದೆ. ಆ ಬಳಿಕ ಅವರು ಬೆಂಗಳೂರಿಗೆ ಬರುತ್ತಾರೆ' ಎಂದು ಹೇಳಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಲಹೆ ಮೇರೆಗೆ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿರುವ ಕನ್ನಡಿಗ ಡಾ.ಶೆಟ್ಟಿ ಹಾಗೂ ಅವರ ತಂಡ ಅಂಬರೀಷ್ ಅವರಿಗೆ ಚಿಕಿತ್ಸೆ ಒದಗಿಸುತ್ತಿದ್ದಾರೆ. ಹಿರಿಯ ನಟ ಅಂಬರೀಷ್ (61) ಅವರ ಜತೆಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ವಿಕ್ರಂ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಶನಿವಾರ ಬೆಳಗಿನ ಜಾವ ಅಭಿಮಾನಿಗಳ ಶುಭ ಹಾರೈಕೆಯೊಂದಿಗೆ ವಿಶೇಷ ವಿಮಾನದಲ್ಲಿ ಸಿಂಗಪುರಕ್ಕೆ ಹೊರಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಮಾರು ಐದು ಗಂಟೆಗಳ ಕಾಲ ಅಂಬರೀಷ್ ಅವರ ಸಮಗ್ರ ಚಿಕಿತ್ಸೆ ನಡೆಸಿದ ತಂಡ ಶೀಘ್ರದಲ್ಲೇ ವೆಂಟಿಲೇಟರ್ ಹಾಗೂ ಇನ್ನಿತರ ಕೃತಕ ಚಿಕಿತ್ಸಾ ಸಾಧಕಗಳಿಂದ ಅಂಬರೀಷ್ ಅವರಿಗೆ ಮುಕ್ತಿ ನೀಡಲಾಗುವುದು. ಅಂಬರೀಷ್ ಅವರು ಎಂದಿನಂತೆ ಉಸಿರಾಟ ಆರಂಭಿಸುತ್ತಿದ್ದಂತೆ ಸುಮಾರು 12-15 ದಿನಗಳ ಕಾಲ ಅಬ್ಸರ್ವೇಷನ್ ನಲ್ಲಿರಿಸಿಕೊಂಡು ನಂತರ ಬೆಂಗಳೂರಿಗೆ ಕಳಿಸಿಕೊಡಲಾವುದು ಎಂದು ವೈದ್ಯರು ಹೇಳಿದ್ದಾರೆ.[ಅಂಬರೀಶ್ ಅಭಿಮಾನಿಗಳ ಆಕ್ರೋಶ]
ಸಿಂಗಪುರ ಆಸ್ಪತ್ರೆಯಿಂದ ಬಂದಿರುವ ಹೇಳಿಕೆಯನ್ನು ದೃಢಪಡಿಸಿರುವ ವಿಕ್ರಂ ಆಸ್ಪತ್ರೆ ವೈದ್ಯರು, ಅಲ್ಲಿನ ವೈದ್ಯರ ಜತೆ ನಮ್ಮ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು ಸೂಕ್ತ ಮಾಹಿತಿ ಒದಗಿಸುತ್ತಿದ್ದಾರೆ ಎಂದಿದ್ದಾರೆ. ವೆಂಟಿಲೇಟರ್ ತೆಗೆಯುವ ಬಗ್ಗೆ ಹೇಳಿಕೆ ಸಿಕ್ಕಿರುವುದು ಸಂತಸದ ಸಂಗತಿ ಹೀಗಾಗಿ ಅಭಿಮಾನಿಗಳು ಇನ್ನೂ ಕೆಲಕಾಲ ತಾಳ್ಮೆಯಿಂದ ಕಾಯ್ದು ಅಂಬರೀಷ್ ಅವರು ಸಂಪೂರ್ಣ ಗುಣಮುಖರಾಗುವಂತೆ ಪ್ರಾರ್ಥಿಸಲಿ ಎಂದು ಚಿತ್ರರಂಗದ ಗಣ್ಯರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications