ಜೇನುನೊಣಗಳಿಗೆ ಹೆದರುತ್ತಿದ್ದ ಅದೇ ಹುಳುಗಳ ರಕ್ಷಣೆಗಿಳಿದು ಕೋಟಿ ಉದ್ಯಮದ ಸಾಮ್ರಾಜ್ಯ ಕಟ್ಟಿದ ಬಾಲಕಿ
ಇದು ಸ್ಪರ್ಧಾತ್ಮಕ ಕಾಲವಾಗಿದ್ದು, ಈ ನಡುವೆಯೂ ಸಣ್ಣ ಉದ್ಯವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಯಶಸ್ಸು ಕಂಡು ಮಾದರಿಯಾದವರ ಬಗ್ಗೆ ಕೇಳಿಯೇ ಇರುತ್ತೇವೆ. ಅದೇ ರೀತಿ ಇದೀಗ ಕೇವಲ ನಾಲ್ಕನೇ ವಯಸ್ಸಿಗೆ ಜೇನುನೊಣದ ಕಚ್ಚುವಿಕೆಗೆ ಹೆದರಿ ಓಡುತ್ತಿದ್ದ ಬಾಲಕಿಯೊಬ್ಬಳು, ಮುಂದೆ ಅದೇ ಕೀಟದ ರಕ್ಷಣೆಗೆ ನಿಂತು ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಿದ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ಕೇವಲ ನಾಲ್ಕನೇ ವಯಸ್ಸಿಗೆ ಜೇನುನೊಣಕ್ಕೆ ಹೆದರಿ ಓಡುತ್ತಿದ್ದ ಬಾಲಕಿಯೊಬ್ಬಳು ಮುಂದೆ ಅದೇ ಕೀಟದ ರಕ್ಷಣೆಗೆ ನಿಂತು ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟುತ್ತಾಳೆ ಎಂದರೆ ನಂಬಲು ಸಾಧ್ಯವೇ?.. ಹೌದು ಇದು ಸತ್ಯ.. 2009ರಲ್ಲಿ ಎದುರಾದ ಸಣ್ಣ ಆಘಾತವನ್ನು ತನ್ನ ಜೀವನದ ಅತಿ ದೊಡ್ಡ ಅವಕಾಶವನ್ನಾಗಿ ಮಾರ್ಪಡಿಸಿಕೊಂಡ ಅಮೆರಿಕದ ಮಿಕೈಲಾ ಉಲ್ಮರ್ ಪಯಣ, ಇಂದು ಜಗತ್ತಿನಾದ್ಯಂತ ಲಕ್ಷಾಂತರ ಯುವ ಉದ್ಯಮಿಗಳಿಗೆ ದಾರಿದೀಪವಾಗಿದೆ.

ವಾರದಲ್ಲಿ ಎರಡು ಬಾರಿ ಕಚ್ಚಿದ ಜೇನುನೊಣಗಳು
2009ರಲ್ಲಿ ಮಿಕೈಲಾ ಉಲ್ಮರ್‌ಗೆ ಕೇವಲ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಒಂದೇ ವಾರದಲ್ಲಿ ಎರಡು ಬಾರಿ ಜೇನುನೊಣಗಳು ಕಚ್ಚಿದ್ದವು. ಆಗಿನಿಂದ ಆಕೆ ಜೇನುನೊಣಗಳನ್ನು ಕಂಡರೆ ಸಾಕು ಭಯಪಡುತ್ತಿದ್ದಳು. ಆದರೆ, ಆಕೆಯ ಪೋಷಕರು ಭಯಪಡುವುದನ್ನು ಬಿಟ್ಟು, ಆ ಹುಳುಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರೋತ್ಸಾಹಿಸಿದರು.
ಜೇನುನೊಣಗಳ ಮಹತ್ವದ ತಿಳಿದ ಮಿಕೈಲಾ
ಸಂಶೋಧನೆ ಮತ್ತು ಓದಿನ ಮೂಲಕ ಮಿಕೈಲಾ ಜೇನುನೊಣಗಳು ಪರಿಸರಕ್ಕೆ ಎಷ್ಟು ಅಗತ್ಯ ಎಂಬುದನ್ನು ತಿಳಿದುಕೊಂಡಳು. ಮಾನವನ ಆಹಾರ ಉತ್ಪಾದನೆ ಮತ್ತು ಬೆಳೆಗಳ ಪರಾಗಸ್ಪರ್ಶದಲ್ಲಿ ಜೇನುನೊಣಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ರೋಗಗಳು, ಕೀಟನಾಶಕಗಳ ಬಳಕೆಯಿಂದಾಗಿ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂಬ ಸತ್ಯ ಆಕೆಗೆ ಅರಿವಾಯಿತು. ಇದು ಆಕೆಯ ಭಯವನ್ನು ಜೇನುನೊಣಗಳನ್ನು ರಕ್ಷಿಸುವ ಕಾಳಜಿಯಾಗಿ ಮಾರ್ಪಡಿಸಿತು.
ಉದ್ಯಮದ ಆರಂಭವಾಗಿದ್ದು ಯಾವಾಗ?
ಮಿಕೈಲಾಳ ಮುತ್ತಜ್ಜಿ ಹೆಲೆನ್ 1940ರ ದಶಕದ ಪ್ರಸಿದ್ಧ ನಿಂಬೆ ಪಾನಕದ ರೆಸಿಪಿಯೊಂದನ್ನು ಆಕೆಗೆ ನೀಡಿದ್ದರು. ಮಿಕೈಲಾ ಈ ರೆಸಿಪಿಗೆ ಸ್ವಲ್ಪಮಟ್ಟಿಗೆ ಹೊಸ ರೂಪ ನೀಡಲು ನಿರ್ಧರಿಸಿದಳು. ಸಾಮಾನ್ಯ ಸಕ್ಕರೆಯ ಬದಲಿಗೆ ಸ್ಥಳೀಯ ಜೇನುತುಪ್ಪವನ್ನು ಬಳಸಿ ನಿಂಬೆ ಪಾನಕವನ್ನು ತಯಾರಿಸಲು ಪ್ರಾರಂಭಿಸಿದಳು. ಆರಂಭದಲ್ಲಿ 'ಬೀಸ್ವೀಟ್ ಲೆಮನೇಡ್' ಎಂದು ಹೆಸರಿಡಲಾದ ಈ ಉದ್ಯಮ, ನಂತರ 'ಮೀ ಆಂಡ್ ದಿ ಬೀಸ್ ಲೆಮನೇಡ್' ಎಂದು ಮರುನಾಮಕರಣಗೊಂಡಿತು.
ಕೈಹಿಡಿದ ನಿಂಬೆ ಪಾನಕ
ಈ ಉದ್ಯಮದ ಲಾಭದ ಶೇಕಡಾ 10ರಷ್ಟು ಭಾಗವನ್ನು ಅಪಾಯದಲ್ಲಿರುವ ಜೇನುನೊಣಗಳನ್ನು ರಕ್ಷಿಸುವ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲು ಆಕೆ ನಿರ್ಧರಿಸಿದಳು. ಬಳಿಕ ಸಣ್ಣ ಪ್ರಮಾಣದ ಮಕ್ಕಳ ಬ್ಯುಸಿನೆಸ್ ಮೇಳಗಳು ಹಾಗೂ ಸ್ಥಳೀಯ ಪ್ರದರ್ಶನಗಳಲ್ಲಿ ನಿಂಬೆ ಪಾನಕ ಮಾರಾಟ ಮಾಡಲು ಪ್ರಾರಂಭಿಸಿದ ಮಿಕೈಲಾಗೆ ಉತ್ತಮ ಸ್ಪಂದನೆ ಸಿಕ್ಕಿತು.
ದೊಡ್ಡ ಮಟ್ಟದ ಹೂಡಿಕೆ
2015ರಲ್ಲಿ ಆಕೆಯ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿತು. ಅಮೆರಿಕದ ಪ್ರಸಿದ್ಧ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್'ನಲ್ಲಿ ಭಾಗವಹಿಸಿದ ಆಕೆಗೆ, ಉದ್ಯಮಿ ಡೇಮಂಡ್ ಜಾನ್ ಅವರಿಂದ $60,000 ಡಾಲರ್ ಹೂಡಿಕೆ ಸಿಕ್ಕಿತು (ಶೇಕಡ 25ರಷ್ಟು ಶೇರು ವಿನಿಮಯದೊಂದಿಗೆ). ಈ ಹೂಡಿಕೆಯು ಆಕೆಯ ಉದ್ಯಮವನ್ನು ಬೆಳೆಸಲು ಮತ್ತು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸಂಪರ್ಕ ಸಾಧಿಸಲು ಸಹಕಾರಿಯಾಯಿತು.
ಪ್ರಸ್ತುತ ಉದ್ಯಮದ ಸ್ಥಿತಿ ಹೇಗಿದೆ?
ಇಂದು 'ಮೀ ಆಂಡ್ ದಿ ಬೀಸ್ ಲೆಮನೇಡ್' ಕೇವಲ ರೋಡ್‌ಸೈಡ್ ಸ್ಟಾಲ್ ಆಗಿ ಉಳಿದಿಲ್ಲ. ಇದು ಅಮೆರಿಕದ ಪ್ರಸಿದ್ಧ 'ಹೋಲ್ ಫುಡ್ಸ್ ಮಾರ್ಕೆಟ್' ಸೇರಿದಂತೆ ಹಲವು ಪ್ರಮುಖ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ಪ್ರಸಿದ್ಧ ಬ್ರ್ಯಾಂಡ್ ಆಗಿ ಬೆಳೆದಿದೆ. ಒಟ್ಟಿನಲ್ಲಿ ಹೇಳುವುದಾದರೆ ಸಾಮಾನ್ಯ ಭಯದಿಂದ ಪ್ರಾರಂಭವಾದ ಮಿಕೈಲಾ ಅವರ ಪಯಣ, ಇಂದು ಪರಿಸರ ಸಂರಕ್ಷಣೆ ಮತ್ತು ಯಶಸ್ವಿ ಉದ್ಯಮಶೀಲತೆಯ ಅತ್ಯುತ್ತಮ ಉದಾಹರಣೆಯಾಗಿದೆ ಹಾಗೂ ಯುವ ಉದ್ಯಮಗಳಿಗೆ ಮಾದರಿಯಾಗಿದ್ದಾರೆ.


Click it and Unblock the Notifications
