Manipur Video: ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಪ್ರಕರಣಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಅಮೆರಿಕ
ವಾಷಿಂಗ್ಟನ್, ಜುಲೈ 23: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೈರಲ್ ವಿಡಿಯೊಗಳಿಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಧ್ವನಿಗೂಡಿಸಿರುವ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಸುದ್ದಿಸಂಸ್ಥೆ 'ರಾಯಿಟರ್ಸ್' ವರದಿ ಮಾಡಿದೆ.
ಯುವಕರ ಗುಂಪೊಂದು ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದೆ. ಆ ನಂತರ ಅವರ ಮೇಲೆ ಅತ್ಯಾಚಾರ ಎಸಗಿದೆ. ಈ ಘಟನೆ ಮೇ 04 ರಂದು ನಡೆದಿದೆ ಎಂದು ವರದಿಯಾಗಿದೆ. ಎರಡು ತಿಂಗಳ ಹಿಂದೆ ನಡೆದ ವಿಡಿಯೊ ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ದೇಶದಲ್ಲಿ ಅಷ್ಟೇ ಅಲ್ಲದೇ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಎಂದು ಮಣಿಪುರ ಸರ್ಕಾರ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು, ಘಟನೆಯನ್ನು 'ಕ್ರೂರ' ಹಾಗೂ 'ಭಯಾನಕ' ಎಂದು ಕರೆದಿದ್ದಾರೆ. ಭೀಕರ ದಾಳಿಗೆ ತುತ್ತಾದ ಸಂತ್ರಸ್ತರ ಜೊತೆ ಅಮೆರಿಕ ಇರಲಿದೆ ಎಂದು ತಿಳಿಸಿದ್ದಾರೆ.
21 ಮತ್ತು 19 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಈ ಲೈಂಗಿಕ ದೌರ್ಜನ್ಯ ನಡೆದಿದೆ. ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲೆ ಬಹುಸಂಖ್ಯಾತ ಸಮುದಾಯದ ಮೈಟೆಯಿ ಯುವಕರು ದೌರ್ಜನ್ಯ ಎಸಗಿದ್ದಾರೆ. ತೀವ್ರವಾದ ಜನಾಂಗೀಯ ಘರ್ಷಣೆಯಲ್ಲಿ ಬಳಲುತ್ತಿರುವ ಮಣಿಪುರದಲ್ಲಿ ಇದೇ ರೀತಿಯ ಘಟಣೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಮೂವತ್ತು ಲಕ್ಷಕ್ಕೂ ಅಧಿಕ ಜನರಿರುವ ಮಣಿಪುರಕ್ಕೆ ಕೇಂದ್ರ ಸರ್ಕಾರವು ಅರೆಸೇನಾ ಮತ್ತು ಸೇನಾ ಪಡೆಗಳನ್ನು ಕಳುಹಿಸಿದೆ. ಆದರೆ, ಹಿಂಸಾಚಾರ ಕೊನೆಯಾಗದೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಹತ್ಯೆಗಳು ನಡೆಯುತ್ತಲೇ ಇವೆ. ಮೇ 03 ರಂದು ಶುರುವಾದ ಘರ್ಷಣೆಯು ಈ ವರೆಗೆ 160 ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದೆ.
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಸುಮಾರು 40,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಮಣಿಪುರ ಹಿಂಸಾಚಾರವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕೆಂದು ಯುನೈಟೆಡ್ ಸ್ಟೇಟ್ಸ್ ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಎಲ್ಲಾ ಗುಂಪುಗಳು, ಮನೆಗಳು ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಯುನೈಟೆಡ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಎಂದು ತಿಳಿಸಿದ್ದಾರೆ.

ಮಣಿಪುರ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರ ಮೇಲೆ ನಡೆದ ಅಮಾನವೀಯ ದಾಳಿಯು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ಮಣಿಪುರ ಹಿಂಸಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಜಂಟಿ ಪ್ರತಿಭಟನೆಯನ್ನು ಸೋಮವಾರ ಯೋಜಿಸಿವೆ.












Click it and Unblock the Notifications