Lok Sabha Election 2024, Telangana: Opinion Poll - ಆಡಳಿತ ಬಿಆರ್‌ಎಸ್ ಪಕ್ಷಕ್ಕೆ ಬಿಜೆಪಿಯದ್ದೇ ಚಿಂತೆ!
ಮುಂದಿನ ವರ್ಷ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಗೆ ಮುನ್ನ, ಸೆಮಿಫೈನಲ್ ಎಂದೇ ಕರೆಯಲಾಗುತ್ತಿರುವ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಛತ್ತೀಸಗಡ, ಮಧ್ಯ ಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ವರ್ಷಾಂತ್ಯದೊಳಗೆ ಅಸೆಂಬ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿ ಚುನಾವಣೆ ನಡೆಯುವ ಕೆಲವು ರಾಜ್ಯಗಳ, ಹಲವು ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಯನ್ನು ಪ್ರಕಟಿಸಿತ್ತು. ಈಗ, ತೆಲಂಗಾಣದಲ್ಲೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಬಿಆರ್‌ಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಆ ಮೂಲಕ, ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ.

ತೆಲಂಗಾಣದಲ್ಲಿ ಬಿಜೆಪಿಯ ಅಸ್ತಿತ್ವ ಅಷ್ಟೇನೂ ಇರಲಿಲ್ಲ, ಆದರೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಒಡ್ಡಿದ ಸವಾಲಿನ ನಂತರ, ರಾಜ್ಯದ ಹಲವು ಪ್ರದೇಶಗಳಲ್ಲಿ ಆಡಳಿತ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗುವ ಸಾಧ್ಯತೆಯಿದೆ.
ಕರ್ನಾಟಕದ ನಂತರ ಇನ್ನೊಂದು ರಾಜ್ಯದಲ್ಲಿ ತಳವೂರಲು ಹಲವು ಹೆಜ್ಜೆಗಳನ್ನು ಇಡುತ್ತಿರುವ ಬಿಜೆಪಿ, ಇತ್ತೀಚೆಗೆ ತೆಲಂಗಾಣದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿತ್ತು. ಬಂಡಿ ಸಂಜಯ್ ಕುಮಾರ್ ಜಾಗಕ್ಕೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿಯವರನ್ನು ನೇಮಿಸಿತ್ತು. ಇಂಡಿಯಾ ಟಿವಿ ಜಂಟಿಯಾಗಿ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ, ಬಿಆರ್‌ಎಸ್ ಪಕ್ಷಕ್ಕೆ ಕಳೆದ ಬಾರಿ ಗೆದ್ದಷ್ಟು ಸೀಟನ್ನು ಉಳಿಸಿಕೊಳ್ಳಬೇಕಾದರೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ.
ಮುಂಬರುವ ಲೋಕಸಭಾ ಚುನಾವಣೆ
ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ತೆಲಂಗಾಣದ ಫಲಿತಾಂಶ ಬಿಜೆಪಿಗೆ ಪ್ರಮುಖವಾಗುತ್ತದೆ. ಕಾರಣವೇನಂದರೆ, ಉತ್ತರದ ರಾಜ್ಯಗಳಲ್ಲಿ ಕಳೆದ ಬಾರಿ ಪಡೆದಷ್ಟು ಸೀಟನ್ನು ಈ ಬಾರಿ ಪಡೆಯುವ ಸಾಧ್ಯತೆ ಕಮ್ಮಿ. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ, ಆರು ಲೋಕಸಭಾ ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನುವ ಸಮೀಕ್ಷಾ ವರದಿ ಹೊರಬಿದ್ದಿದೆ.
ಇಂಡಿಯಾ ಟಿವಿ- ಸಿಎನ್ಎಕ್ಸ್ ಒಪಿನಿಯನ್ ಪೋಲ್
ಇಂಡಿಯಾ ಟಿವಿ- ಸಿಎನ್ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ, ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕೆಸಿಆರ್ ಪಕ್ಷ, ಕಳೆದ ಬಾರಿ ಗೆದ್ದಷ್ಟು ಸೀಟನ್ನು ಉಳಿಸಿಕೊಳ್ಳುವುದು ಕಷ್ಟ. ಒಟ್ಟು ಹದಿನೇಳು ಲೋಕಸಭಾ ಸ್ಥಾನವನ್ನು ಹೊಂದಿರುವ ತೆಲಂಗಾಣದಲ್ಲಿ ಕಳೆದ ಬಾರಿ ಬಿಆರ್‌ಎಸ್ 9, ಬಿಜೆಪಿ 4, ಕಾಂಗ್ರೆಸ್ 3 ಮತ್ತು ಎಐಎಂಐಎಂ 1ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.
ಹೈದರಾಬಾದ್ ಕ್ಷೇತ್ರವನ್ನು ಓವೈಸಿ ಪಕ್ಷ ಉಳಿಸಿಕೊಳ್ಳಲಿದೆ
ಇಂಡಿಯಾ ಟಿವಿ- ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಸಿಆರ್ ಪಕ್ಷ ಎಂಟು, ಬಿಜೆಪಿ ಆರು, ಕಾಂಗ್ರೆಸ್ ಎರಡು ಮತ್ತು ಎಐಎಂಐಎಂ 1ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಅದರ ಪ್ರಕಾರ ಬಿಜೆಪಿಗೆ ಎರಡು ಸೀಟು ಹೆಚ್ಚು ಸಿಕ್ಕರೆ, ಬಿಆರ್‌ಎಸ್ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನವನ್ನು ಕಳೆದುಕೊಳ್ಳಲಿದೆ. ಹೈದರಾಬಾದ್ ಕ್ಷೇತ್ರವನ್ನು ಓವೈಸಿ ಪಕ್ಷ ಉಳಿಸಿಕೊಳ್ಳಲಿದೆ ಎನ್ನುತ್ತದೆ ಸಮೀಕ್ಷೆ.
ಕೆಸಿಆರ್ ಮತ್ತು ಓವೈಸಿ ಪಕ್ಷ I.N.D.I.A ಒಕ್ಕೂಟದಲ್ಲಿ ಗುರುತಿಸಿಕೊಂಡಿಲ್ಲ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದೆಯೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಲಿದೆಯೋ ಎನ್ನುವುದರ ಬಗ್ಗೆ ಸದ್ಯಕ್ಕೆ ಸ್ಪಷ್ಟತೆಯಿಲ್ಲ.












Click it and Unblock the Notifications