ಅಕ್ಟೋಬರ್ 14ಕ್ಕೆ ಅತಿ ದೊಡ್ಡ ಅಂಬೇಡ್ಕರ್ ಪ್ರತಿಮೆ ಅನಾವರಣ, ವಿವರ
ಬೆಂಗಳೂರು, ಅಕ್ಟೋಬರ್ 03: ಭಾರತದ ಹೊರಗೆ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆಯನ್ನು ಅಕ್ಟೋಬರ್ 14 ರಂದು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಅನಾವರಣಗೊಳಿಸಲು ಸಿದ್ಧವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
19 ಅಡಿ ಎತ್ತರದ ಈ ಪ್ರತಿಮೆಯನ್ನು ಸಮಾನತೆಯ ಪ್ರತಿಮೆ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಹೆಸರಾಂತ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದಾರೆ, ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ಥಾಪಿಸಲಾದ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಸಹ ನಿರ್ಮಿಸಿದವರಾಗಿದ್ದಾರೆ.

ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಯು ಮೇರಿಲ್ಯಾಂಡ್‌ನ ಅಕೋಕೀಕ್ ನಗರದಲ್ಲಿ 13 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ (ಎಐಸಿ) ಭಾಗವಾಗಿದೆ. "ಇದು ಭಾರತದ ಹೊರಗೆ ನಿರ್ಮಾಣವಾಗಿರುವ ಬಾಬಾಸಾಹೇಬರ ಅತಿದೊಡ್ಡ ಪ್ರತಿಮೆಯಾಗಿದೆ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಸ್ಮಾರಕದ ಭಾಗವಾಗಿ ಸ್ಥಾಪಿಸಲಾಗಿದೆ" ಎಂದು ಎಐಸಿ ಹೇಳಿದೆ.
"ಅಮೆರಿಕ ಮತ್ತು ಪ್ರಪಂಚದ ಇತರ ಭಾಗಗಳಿಂದ ಅಂಬೇಡ್ಕರ್ ಚಳವಳಿಯ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಮತ್ತು ಅವರ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ" ಎಂದು ಎಐಸಿ ಹೇಳಿದೆ. ಈ ಪ್ರತಿಮೆಯು ಬಾಬಾಸಾಹೇಬರ ಸಂದೇಶಗಳು ಮತ್ತು ಬೋಧನೆಗಳನ್ನು ಹರಡಲು ಮತ್ತು ಸಮಾನತೆ ಮತ್ತು ಮಾನವ ಹಕ್ಕುಗಳ ಸಂಕೇತವನ್ನು ಪ್ರದರ್ಶಿಸುವ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
ಏಪ್ರಿಲ್ 14, 1891 ರಂದು ಜನಿಸಿದ ಡಾ ಭೀಮ್ ರಾವ್ ಅಂಬೇಡ್ಕರ್ ಅವರು ಅನುಯಾಯಿಗಳಲ್ಲಿ ಬಾಬಾಸಾಹೇಬ್ ಎಂದು ಜನಪ್ರಿಯರಾಗಿದ್ದರು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅವರು, ಅಖಂಡ ಭಾರತಕ್ಕೆ ಸರ್ವರಿಗೂ ಸಮಬಾಳು ಒದಗಿಸುವ ಮೂಲಕ ಸಮಸಮಾಜಕ್ಕೆ ಕಾರಣರಾಗಿದ್ದರು. ಹೀಗಾಗಿ ಅವರನ್ನು ಆಧುನಿಕ ಭಾರತದ ಪಿತಾಮಹ ಎಂದೂ ಕರೆಯಲಾಗುತ್ತದೆ.
ಸ್ವಾತಂತ್ರ್ಯದ ನಂತರ ಅವರು ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊದಲ ಕ್ಯಾಬಿನೆಟ್‌ನಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ದಲಿತರು ಮತ್ತು ಅಸ್ಪೃಶ್ಯರ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಚಳವಳಿಗಳಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು. ಅಕ್ಟೋಬರ್ 14 ಅನ್ನು ಅಂಬೇಡ್ಕರ್ ವಾದಿಗಳು ಧಮ್ಮ ಚಕ್ರ ಪರಿವರ್ತನ ದಿನವನ್ನಾಗಿ ಆಚರಿಸುತ್ತಾರೆ.












Click it and Unblock the Notifications