ಜಾಧವ್ ಕೇಸ್: ಪಾಕ್ ಹೈಕೋರ್ಟ್‌ನಿಂದ ಮಹತ್ವದ ಆದೇಶ!
ಇಸ್ಲಾಮಾಬಾದ್, ಆ.4: ಕುಲಭೂಷಣ್ ಜಾಧವ್ ಕೇಸ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಭಾರತೀಯ ನೌಕಾಸೇನೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಾದಿಸಲು ಮೂವರು ವಕೀಲರನ್ನ ಇಸ್ಲಾಮಾಬಾದ್ ಹೈಕೋರ್ಟ್ ನೇಮಿಸಿದೆ. ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನಿ ಮಿಲಿಟರಿ ಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಜಾಧವ್ ಅವರು, ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದಾರೆ.
Recommended Video
ಪಾಕ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಈ ದ್ವಿಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಅಖ್ತರ್ ಮಿನಾಲ್ಹಾ, ನ್ಯಾಯಮೂರ್ತಿ ಮಿಯಾಗುಲ್ ಹಸನ್ ಔರಂಗಜೇಬ್ ಇದ್ದರು.
ಜಾಧವ್ ಪ್ರಕರಣದಲ್ಲಿ ವಾದ ಮಾಡಲು ಪಾಕ್ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಬಿದ್ ಹಸನ್ ಮಾಂಟೊ, ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಹಮೀದ್ ಖಾನ್ ಮತ್ತು ಪಾಕಿಸ್ತಾನದ ಮಾಜಿ ಅಟಾರ್ನಿ ಜನರಲ್ ಮಖ್ದೂಮ್ ಅಲಿ ಖಾನ್ ನೇಮಕಗೊಂಡಿದ್ದಾರೆ. ಈ ಮೂವರು ಹಿರಿಯ ವಕೀಲರು ಆ್ಯಮಿಕಸ್ ಕ್ಯೂರಿಯಾಗಿ ನೇಮಕವಾಗಿರೋದು, ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ.

ಮುಕ್ತ ರಾಜತಾಂತ್ರಿಕ ಭೇಟಿಗೆ ಸಮ್ಮತಿ..!
ಕಳೆದ ಬಾರಿ ಭಾರತದ ಅಧಿಕಾರಿಗಳು ಜಾಧವ್ ಭೇಟಿಗಾಗಿ ಪಾಕ್ ಜೈಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾಕ್ ಜೈಲಿನ ಅಧಿಕಾರಿಗಳು ಕಿರಿಕಿರಿ ಉಂಟುಮಾಡಿದ್ದರು. ಜಾಧವ್ ಜೊತೆ ಭಾರತದ ಅಧಿಕಾರಿಗಳಿಗೆ ಮುಕ್ತವಾಗಿ ಮಾತನಾಡಲು ಬಿಟ್ಟಿರಲಿಲ್ಲ. ಇದರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದ ಭಾರತೀಯ ಅಧಿಕಾರಿಗಳು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣ ಬಯಲುಮಾಡಿದ್ದರು. ಆದರೆ ಘಟನೆ ನಂತರ ಪಾಕ್ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಜಾಗತಿಕಮಟ್ಟದಲ್ಲಿ ಮಾನ ಉಳಿಸಿಕೊಳ್ಳಲು ಪಾಕ್ ಮುಂದಾಗಿದ್ದು, ಈ ಮೂಲಕ ಭಾರತದ ಅಧಿಕಾರಿಗಳು ಹಾಗೂ ಮೋದಿ ಸರ್ಕಾರದ ಶ್ರಮಕ್ಕೆ ಫಲ ಸಿಕ್ಕಿದೆ. ಪಾಕ್ ಹೈಕೋರ್ಟ್ ಈಗ ನೀಡಿರುವ ಆದೇಶದಲ್ಲಿ ಜಾಧವ್‌ರ ಭೇಟಿಗೆ ಮುಕ್ತ ರಾಜತಾಂತ್ರಿಕ ಅವಕಾಶ ಕಲ್ಪಿಸಲಾಗಿದೆ.

ಸತತ 3 ವರ್ಷಗಳ ಹೋರಾಟ
ಜಾಧವ್ ವಿರುದ್ಧ ಭಾರತದ ಪರ ಗೂಢಚಾರಿಕೆ ಹಾಗೂ ಪಾಕ್‌ನಲ್ಲಿ ಭಯೋತ್ಪಾದನೆ ಸಂಚು ನಡೆಸಿದ ಆರೋಪ ಹೊರಿಸಿದ್ದ ಪಾಪಿ ಪಾಕಿಸ್ತಾನ, ಜಾಧವ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಮಿಲಿಟರಿ ಕೋರ್ಟ್ 2017ರ ಏಪ್ರಿಲ್‌ನಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಅಂದಿನಿಂದಲೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಸತತ 3 ವರ್ಷಗಳಿಂದಲೂ ಈ ಹೋರಾಟ ನಡೆಯುತ್ತಿದೆ.

ಐಸಿಜೆಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ
ದಿಢೀರ್ ಶಿಕ್ಷೆ ವಿಧಿಸಿ ಭಾರತದ ವಿರುದ್ಧ ಪರೋಕ್ಷವಾಗಿ ದ್ವೇಷ ಹೊರಹಾಕಿದ್ದ ಪಾಕ್‌ಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಖಭಂಗವಾಗಿತ್ತು. ಜಾಧವ್ ವಿರುದ್ಧ ಪಾಕಿಸ್ತಾನಿ ಮಿಲಿಟರಿ ಕೋರ್ಟ್ ವಿಧಿಸಿದ್ದ ಮರಣದಂಡನೆ ತೀರ್ಪಿಗೆ ಐಸಿಜೆ ಆದೇಶ ತಾತ್ಕಾಲಿಕ ಬ್ರೇಕ್ ಹಾಕಿತ್ತು.

ಮುಕ್ತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ
ಆದರೆ ಮತ್ತೆ ತನ್ನ ನರಿಬುದ್ಧಿ ತೋರಿಸುತ್ತಿರುವ ಪಾಕಿಸ್ತಾನ, ಜಾಧವ್ ಪ್ರಕರಣದಲ್ಲಿ ಮುಕ್ತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ. ಪಾಕ್ ಹೈಕೋರ್ಟ್ ಇದೀಗ ಪರೋಕ್ಷವಾಗಿ ಪಾಕ್ ಸರ್ಕಾರಕ್ಕೆ ತನ್ನ ಆದೇಶದ ಮೂಲಕ ಚಾಟಿ ಬೀಸಿದೆ. ಇನ್ನು ಈ ಪ್ರಕರಣದಲ್ಲಿ ಜಾಧವ್ ಗೆದ್ದು ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂಬುದು ಕೋಟ್ಯಂತರ ಭಾರತೀಯರ ಆಶಯವಾಗಿದೆ.












Click it and Unblock the Notifications