ಖಲಿಸ್ತಾನಿ ನಾಯಕನ ಹತ್ಯೆ; ಭಾರತದ ಅಧಿಕಾರಿ ಉಚ್ಛಾಟಿಸಿದ ಕೆನಡಾ
ನವದೆಹಲಿ, ಸೆಪ್ಟೆಂಬರ್ 19; ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಾತ್ರದ ಕುರಿತು ಕೆನಡಾ ಆರೋಪ ಮಾಡಿದೆ. ಪ್ರಧಾನಿ ಜಸ್ಟಿನ್ ಟ್ರೂಡೊ ಭಾಷಣದ ಬಳಿಕ ಒಟ್ಟಾವದಲ್ಲಿದ್ದ ನವದೆಹಲಿಯ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟನೆ ಮಾಡಲಾಗಿದೆ.
ಸೋಮವಾರ ಕೆನಾಡ ಪ್ರಧಾನಿ ಜಸ್ಟಿನ್ ಟ್ರೂಡೊ ಸಂಸತ್‌ನ ವಿರೋಧ ಪಕ್ಷಗಳ ತುರ್ತು ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಭಾರತದ ಏಜೆಂಟ್‌ಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿವೆ ಎಂದು ಆರೋಪ ಮಾಡಿದರು. ಈ ಹೇಳಿಕೆ ಬಳಿಕ ಒಟ್ಟಾವದಲ್ಲಿದ್ದ ನವದೆಹಲಿಯ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವರು ಘೋಷಣೆ ಮಾಡಿದ್ದಾರೆ.

ಭಾರತದ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಈ ವರ್ಷದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ನಿಜ್ಜರ್ ಮೇಲಿತ್ತು. ಈ ಹತ್ಯೆ ವಿಚಾರದಲ್ಲಿ ಕೆನಡಾ ಭಾರತವನ್ನು ದೋಷಿಸುತ್ತಿದೆ.
ಜಸ್ಟಿನ್ ಟ್ರೂಡೊ ಹೇಳಿಕೆ; ಕೆನಾಡ ಪ್ರಧಾನಿ ಜಸ್ಟಿನ್ ಟ್ರೂಡೊ ಮಾತನಾಡಿ, ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಏಜೆಂಟ್‌ಗಳ ಪಾತ್ರ ಇರುವ ಕುರಿತು ನಮ್ಮ ಸರ್ಕಾರದ ಬಳಿ ಹಲವು ಖಚಿತ ಮಾಹಿತಿ ಇದೆ. ಈ ವಿಚಾರವನ್ನು ಇತ್ಯರ್ಥಪಡಿಸಲು ಭಾರತದ ಸಹಕಾರ ಬೇಕಿದೆ ಎಂದರು.
ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿಕೆಯ ಬಳಿಕ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಮಾತನಾಡಿ ಜಸ್ಟಿನ್ ಟ್ರೂಡೊ ತಕ್ಷಣದ ಕ್ರಮವನ್ನು ಕೈಗೊಂಡಿದೆ. ನಾವು ಇಂದು ಭಾರತದ ಹಿರಿಯ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟನೆ ಮಾಡಿದ್ದೇವೆ ಎಂದರು. ಆದರೆ ಅಧಿಕಾರಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.
ಉಚ್ಛಾಟನೆಗೊಂಡಿರುವ ಅಧಿಕಾರಿ ಭಾರತದ ವಿದೇಶಾಂಗ ಏಜೆನ್ಸಿಯ ಕೆನಡಾ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ಮೆಲಾನಿ ಜೋಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಮೊದಲಿನಿಂದಲೂ ಖಲಿಸ್ತಾನಿ ಉಗ್ರರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡುತ್ತಲೇ ಇದೆ.
ನವದೆಹಲಿಯ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟನೆ ಮಾಡಲಾದ ಕುರಿತು ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಖಲಿಸ್ತಾನಿ ವಿಚಾರದಲ್ಲಿ ಭಾರತ ಮತ್ತು ಕೆನಡಾ ನಡುವಿನ ಅಸಮಾಧಾನ ಭಿನ್ನಾಭಿಪ್ರಾಯಗಳನ್ನು ಈ ಉಚ್ಛಾಟನೆ ಮತ್ತಷ್ಟು ಹೆಚ್ಚಿಸಿದೆ.
ಕಳೆದ ವಾರ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆಗಮಿಸಿದ್ದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಕುರಿತು ಕೆನಡಾ ಪ್ರಧಾನಿ ಭೇಟಿಯಾದಾಗ ಅಸಮಾಧಾನ ವ್ಯಕ್ತಪಡಿಸಿದ್ದರು.
ಜೂನ್ ತಿಂಗಳಿನಲ್ಲಿ ಸರ್ರೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಲಾಗಿತ್ತು. ಗುರುದ್ವಾರದಿಂದ ಹೊರಬರುವಾಗ ಆತನ ಮೇಲೆ ಗುಂಡಿ ದಾಳಿ ನಡೆದಿತ್ತು. ಇತ್ತೀಚಿಗೆ ಭಾರತ ಸರ್ಕಾರ ಬಿಡುಗಡೆ ಮಾಡಿದ್ದ ಮೋಸ್ಟ್ ವಾಟೆಂಡ್ ಭಯೋತ್ಪಾದಕರ ಪಟ್ಟಿಯಲ್ಲಿ ನಿಜ್ಜರ್ ಹೆಸರು ಇತ್ತು. ನಿಜ್ಜರ್ ಪಂಜಾಬ್‌ನ ಭರ್ಸಿಂಗ್‌ಪುರ ಗ್ರಾಮದ ನಿವಾಸಿ.
ಹತ್ಯೆಯಾದ ಸ್ಥಳದಿಂದ ನಿಜ್ಜರ್ ಶವ ಸಾಗಿಸುವಾಗ ಖಲಿಸ್ತಾನಿಗಳ ಗುಂಪು ಭಾರತ ವಿರೋಧಿ ಘೋಷಣೆಗಳನ್ನು ಕೂಗಿತ್ತು. ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ ಪ್ರಕರಣದಲ್ಲಿ ನಿಜ್ಜರ್ ಆರೋಪಿಯಾಗಿದ್ದು, ಪಂಜಾಬ್ ಆತನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.












Click it and Unblock the Notifications