Iran: ಇರಾನ್ ಪ್ರತಿಭಟನೆಗಳಿಗೆ ಇಸ್ರೇಲ್ ಮತ್ತು ಅಮೆರಿಕ ಕಾರಣ ಎಂದು ಆರೋಪಿಸಿದ ಖಮೇನಿ
ಇರಾನ್ ಮತ್ತು ಅಮೆರಿಕ ನಡುವೆ ಜಟಾಪಟಿ ಜೋರಾಗಿದೆ, ಇದರ ಜೊತೆಗೆ ಇಸ್ರೇಲ್ ವಿರುದ್ಧ ಕೂಡ ಇರಾನ್ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ಸಜ್ಜಾದಂತೆ ಕಾಣುತ್ತಿದೆ. ಇದರ ಮೊದಲ ಭಾಗ ಎನ್ನುವಂತೆ ಇರಾನ್ ನೆಲದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಇಸ್ರೇಲ್ & ಅಮೆರಿಕ ಕಾರಣ ಎಂದು ಇರಾನ್ ಸರ್ವಾಧಿಕಾರಿ ಖಮೇನಿ ಆರೋಪ ಮಾಡಿರುವುದು ಕಿಚ್ಚು ಹೊತ್ತಿಸಿದೆ. ಈಗಾಗಲೇ ಇರಾನ್‌ನ ಹಿಂಸಾಚಾರ ಸಾವಿರಾರು ಜನರನ್ನು ಬಲಿ ಪಡೆದಿದೆ. ಹೀಗಿದ್ದಾಗ ಹಲವು ಭಾಗಗಳಿಗೆ ಪ್ರತಿಭಟನೆ ಬಿಸಿ ಹಬ್ಬುತ್ತಿದ್ದು, ಇರಾನ್ ಜನರು ದೇಶ ಬಿಟ್ಟು ಅಕ್ಕಪಕ್ಕದ ರಾಷ್ಟ್ರಗಳಿಗೆ ಓಡಿ ಹೋಗುವ ವಾತಾವರಣ ನಿರ್ಮಾಣ ಆಗಿದೆ.
ಸರಿಯಾದ ಆಡಳಿತ ಇಲ್ಲ, ಆರ್ಥಿಕವಾಗಿ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಇರಾನ್ ಜನ ಭಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಶುರು ಮಾಡಿದ್ದರು. ಇದರ ಪರಿಣಾಮ ಹಿಂಸಾಚಾರ ಕೂಡ ಭುಗಿಲೆದ್ದು ದೊಡ್ಡ ಹಾನಿ ಆಗುತ್ತಿದ್ದು, ಇರಾನ್ ಧಗಧಗಿಸುತ್ತಿದೆ. ಆದರೆ ಈ ಎಲ್ಲಾ ಘಟನೆಗಳಿಗೆ ಅಮೆರಿಕ ಮತ್ತು ಇಸ್ರೇಲ್ ದೇಶಗಳನ್ನು ಹೊಣೆ ಮಾಡಲು ಇರಾನ್ ಸರ್ವಾಧಿಕಾರಿ ಖಮೇನಿ ಮುಂದಾದಂತೆ ಕಾಣುತ್ತಿದೆ. ಪ್ರಮುಖವಾಗಿ ಅಮೆರಿಕ ಈಗ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಬಗ್ಗೆ ಚಿಂತನೆ ನಡೆಸುತ್ತಿರುವ ಸಮಯದಲ್ಲೇ, ಖಮೇನಿ ಈ ರೀತಿ ಹೇಳಿಕೆ ನೀಡಿರುವುದು ತಿಕ್ಕಾಟ ಮತ್ತಷ್ಟು ಹೆಚ್ಚು ಮಾಡುತ್ತಿದೆ.

ಇಸ್ರೇಲ್ & ಅಮೆರಿಕ ವಿರುದ್ಧ ಖಮೇನಿ ಹೇಳಿಕೆ
ಇರಾನ್ ನೆಲದಲ್ಲಿ ಹಿಂಸಾಚಾರ ನಡೆಯಲು ಅಮೆರಿಕ & ಇಸ್ರೇಲ್ ಜೊತೆಗೆ ಸಂಬಂಧ ಹೊಂದಿದವರೇ ಕಾರಣ. ಎರಡು ವಾರಗಳಿಗೂ ಹೆಚ್ಚು ಸಮಯದಿಂದ ಇರಾನ್ ನಡುಗಿಸಿದ ಪ್ರತಿಭಟನೆಗಳಲ್ಲಿ, ಇಸ್ರೇಲ್ ಮತ್ತು ಅಮೆರಿಕದ ಜೊತೆಗೆ ಸಂಬಂಧ ಹೊಂದಿರುವವರು ಭಾರಿ ಹಾನಿ ಮಾಡಿದರು ಎಂದು ಇರಾನ್‌ನ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಆರೋಪ ಮಾಡಿರುವುದು ಕೆರಳಿಸಿದೆ. ಹಿಂಸಾಚಾರದಲ್ಲಿ ಎರಡೂ ರಾಷ್ಟ್ರಗಳು ನೇರವಾಗಿಯೇ ಭಾಗಿಯಾಗಿವೆ ಎಂದು ಖಮೇನಿ ಆರೋಪಿಸಿದ್ದು ಇತ್ತೀಚಿನ ಇರಾನ್ ವಿರೋಧಿ ದೇಶದ್ರೋಹವು ವಿಭಿನ್ನವಾಗಿತ್ತು, ಇದರಲ್ಲಿ ಅಮೆರಿಕ ಅಧ್ಯಕ್ಷರು ಕೂಡ ವೈಯಕ್ತಿಕವಾಗಿ ಭಾಗಿ ಆಗಿದ್ದಾರೆ ಎಂದು ಖಮೇನಿ ಆರೋಪಿಸಿದ್ದು ತಲ್ಲಣ ಸೃಷ್ಟಿಸಿದೆ.
ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡ
ಪ್ರತಿಭಟನೆ ಹಾಗೂ ಹಿಂಸಾಚಾರ ಹಿಡಿತಕ್ಕೆ ಬಂದಿದ್ದರೂ ಇರಾನ್ ನೆಲದಲ್ಲಿ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ. ಈಗಾಗಲೇ ಭಾರತೀಯರನ್ನು ಇರಾನ್ ನೆಲದಿಂದ ಕರೆದುಕೊಂಡು ಬರುವ ಕೆಲಸ ಸಾಗಿದ್ದು, ಇಂದು ಮೊದಲ ವಿಮಾನ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಇಳಿದಿದೆ. ಭಾರತದ ಪ್ರಜೆಗಳು ಇರಾನ್ ನೆಲದಲ್ಲಿ ನಡೆದ ಪ್ರತಿಭಟನೆಯ ಭಯಾನಕತೆ ಬಿಚ್ಚಿಟ್ಟಿದ್ದಾರೆ.
ಇದೇ ರೀತಿ ಹಲವು ದೇಶಗಳು ತಮ್ಮ ತಮ್ಮ ಪ್ರಜೆಗಳಿಗೆ ವಾಪಸ್ ಬರಲು ಸೂಚನೆ ನೀಡಿವೆ. ಮತ್ತೊಂದು ಕಡೆ ಅಮೆರಿಕ ಸರ್ಕಾರ ಇರಾನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಎಡವಟ್ಟು ಆಗಬಹುದು ಎಂಬ ಆತಂಕವೂ ಮನೆಮಾಡಿದೆ. ಹೀಗಿದ್ದಾಗ ಇರಾನ್ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಹಿಂಸೆ ನಡೆಸುತ್ತಿದೆ ಎಂಬ ಆರೋಪವನ್ನ ಮಾಡಲಾಗಿದೆ. ಈ ನಡುವೆ ಸಾವಿನ ಸಂಖ್ಯೆ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ, 4,000ಕ್ಕೂ ಹೆಚ್ಚು ಜನರು ಇರಾನ್ ಪ್ರತಿಭಟನೆಯಲ್ಲಿ ಬಲಿಯಾಗಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ.












Click it and Unblock the Notifications