ಹೆರಿಗೆ ರಜೆ ಘೋಷಿಸಿದ ಜಪಾನ್ ಮೇಯರ್: ಅಧಿಕಾರಕ್ಕೆ ಬರೋ ಮೊದಲೇ ಮಗು ಮಾಡಿಕೊಳ್ಳಬೇಕಿತ್ತೆಂದ ಜನ
ಪಶ್ಚಿಮ ಜಪಾನ್ನ ಪುಟ್ಟ ಪಟ್ಟಣವೊಂದರ ಮೇಯರ್ ತಾನು ಹೆರಿಗೆ ರಜೆ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದಾಗ, ಕೆಲವರು ಹುಬ್ಬೇರಿಸಬಹುದು ಎಂದು ಆಕೆಗೆ ಗೊತ್ತಿತ್ತು. ಆದರೆ ಆಕೆ ನಿರೀಕ್ಷಿಸಿದ್ದಕ್ಕಿಂತಲೂ ಪ್ರತಿಕ್ರಿಯೆ ತೀವ್ರವಾಗಿತ್ತು, ಮತ್ತು ಜನಾಭಿಪ್ರಾಯ ಎರಡು ಹೋಳಾಗಿ ಒಡೆದುಹೋಗಿತ್ತು.
35 ವರ್ಷದ ಶೋಕೊ ಕವಾತಾ ಈಗ ಇಡೀ ದೇಶದ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ - ಚುನಾಯಿತ ಪ್ರತಿನಿಧಿಗಳು ಮಗು ಜನಿಸಿದಾಗ ರಜೆ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಈಗ ಜನನ ಪ್ರಮಾಣ ಕುಸಿತದಿಂದ ಒದ್ದಾಡುತ್ತಿರುವ ಜಪಾನ್ನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

"ಪ್ರತಿಕ್ರಿಯೆ ಇಷ್ಟು ದೊಡ್ಡದಾಗುತ್ತದೆ ಎಂದು ನಾನು ಎಣಿಸಿರಲಿಲ್ಲ, ನನಗೆ ನಿಜಕ್ಕೂ ಆಶ್ಚರ್ಯವಾಯಿತು," ಎಂದು ಕವಾತಾ ಬಿಬಿಸಿಗೆ ತಿಳಿಸಿದ್ದಾರೆ.
ಕ್ಯೋಟೋ ದಕ್ಷಿಣದಲ್ಲಿರುವ, ದೇಗುಲಗಳು ಮತ್ತು ಚೆರ್ರಿ ಮರಗಳಿಗೆ ಹೆಸರಾದ ಯವಾಟಾ ಪಟ್ಟಣದ ಸಿಟಿ ಹಾಲ್ನ ಐದನೇ ಮಹಡಿಯ ಸಭಾಂಗಣದಲ್ಲಿ, ದಪ್ಪ ಕುಶನ್ ಇರುವ ಕುರ್ಚಿಯಲ್ಲಿ ಕುಳಿತಿರುವ ಕವಾತಾ, ತಮ್ಮ ಇಬ್ಬರು ಹಿರಿಯ ಡೆಪ್ಯುಟಿಗಳ ನಡುವೆ ಕುಳಿತಿದ್ದಾರೆ.
ಕಾನೂನಿನಲ್ಲಿ ಇಲ್ಲದ ಅವಕಾಶ
ಸ್ಥಳೀಯ ಚುನಾಯಿತ ಅಧಿಕಾರಿಗಳಿಗೆ ಮಗು ಜನಿಸಿದಾಗ ರಜೆ ಪಡೆಯಲು ಈಗ ಯಾವುದೇ ಕಾನೂನು ಚೌಕಟ್ಟು ಇಲ್ಲದಿರುವುದರಿಂದ, ಕವಾತಾ ಅಧಿಕೃತವಾಗಿ ಹೆರಿಗೆ ರಜೆ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ, ತಮ್ಮ ಪಕ್ಕದಲ್ಲಿ ಕುಳಿತಿರುವ ಶಿಗೆಟೊ ನೋಸೆ ಅವರಿಗೆ ತಾತ್ಕಾಲಿಕವಾಗಿ ತಮ್ಮ ಜವಾಬ್ದಾರಿ ವಹಿಸಿಕೊಡುತ್ತಿದ್ದಾರೆ.
ಮೇ ತಿಂಗಳಿನ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಯೋಜನೆಯನ್ನು ಪ್ರಕಟಿಸಿದ ಕವಾತಾ, ಸೆಪ್ಟೆಂಬರ್ ಮಧ್ಯಭಾಗದ ಹೆರಿಗೆ ದಿನಾಂಕದ ಎರಡು ತಿಂಗಳ ಮೊದಲಿನಿಂದ ಮತ್ತು ಎರಡು ತಿಂಗಳ ನಂತರದವರೆಗೆ ರಜೆಯಲ್ಲಿರುವುದಾಗಿ ತಿಳಿಸಿದ್ದಾರೆ. ಹೆರಿಗೆ ರಜೆ ಪಡೆಯುತ್ತಿರುವ ಜಪಾನ್ನ ಮೊದಲ ಮೇಯರ್ ಎಂಬ ಇತಿಹಾಸವನ್ನು ಆಕೆ ಬರೆಯಲಿದ್ದಾರೆ.
ಕಚೇರಿಯಲ್ಲಿ ಬೆಂಬಲ, ಹೊರಗೆ ಭಿನ್ನಾಭಿಪ್ರಾಯ
ಸರಾಸರಿ 39 ವರ್ಷ ವಯಸ್ಸಿನ ಸಿಬ್ಬಂದಿ ಇರುವ ತಮ್ಮ ಕಚೇರಿಯಲ್ಲಿ ಎಲ್ಲರೂ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಕವಾತಾ ಹೇಳುತ್ತಾರೆ. ಆದರೆ ಸಾರ್ವಜನಿಕರ ನಡುವೆ ಪರಿಸ್ಥಿತಿ ಬೇರೆಯೇ ಇತ್ತು. ಸಾವಿರಾರು ಎಕ್ಸ್ (ಟ್ವಿಟರ್) ಪೋಸ್ಟ್ಗಳಲ್ಲಿ ಮತ್ತು ಹಲವು ಯೂಟ್ಯೂಬ್ ವಿಡಿಯೋಗಳಲ್ಲಿ ಜನ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗರ್ಭಧಾರಣೆ ಕಷ್ಟಕರ ಪ್ರಕ್ರಿಯೆ, ಕವಾತಾ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ಗರ್ಭಧಾರಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ರೂಪಿಸುವಲ್ಲಿ ಜಪಾನಿ ಸಮಾಜ ವಿಫಲವಾಗಿದೆ ಎಂದು ಇನ್ನೊಬ್ಬರು ಆರೋಪಿಸಿದ್ದಾರೆ.
ಕುಟುಂಬಕ್ಕೆ ಆದ್ಯತೆ ನೀಡುವ ಮೂಲಕ ಮತ್ತು ಇತರ ಮಹಿಳೆಯರಿಗೆ ರಾಜಕೀಯ ಪ್ರವೇಶ ಸುಲಭಗೊಳಿಸುವ ಮೂಲಕ ಕವಾತಾ ಅದ್ಭುತ ಮಾದರಿ ಸ್ಥಾಪಿಸುತ್ತಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಟೀಕಾಕಾರರ ವಾದವೇನು?
ಸಾರ್ವಜನಿಕ ಜವಾಬ್ದಾರಿಯಿಂದ ದೂರ ಸರಿಯುವುದು "ಬೇಜವಾಬ್ದಾರಿತನ" ಎಂದು ಟೀಕಾಕಾರರು ವಾದಿಸುತ್ತಾರೆ. ಗರ್ಭಿಣಿಯಾಗಬೇಕೆಂದಿದ್ದರೆ ಅಧಿಕಾರ ವಹಿಸಿಕೊಳ್ಳುವ ಮೊದಲೇ ಆ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದೀರ್ಘ ರಜೆ ಬಯಸುವ ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಕೆಲವರು ಹೇಳಿದರೆ, ಹೆರಿಗೆ ರಜೆಯ ಅವಧಿಯಲ್ಲಿ ವೇತನ ಕಡಿತಗೊಳಿಸಬೇಕು ಎಂದು ಇನ್ನೂ ಕೆಲವರು ಪಟ್ಟು ಹಿಡಿದಿದ್ದಾರೆ.
ಕವಾತಾ ಪ್ರತಿಕ್ರಿಯೆ ಏನು?
ಈ ಟೀಕೆಗಳನ್ನು ಕವಾತಾ ಸುಲಭವಾಗಿ ಬದಿಗೊತ್ತಿದ್ದಾರೆ. ತಾವು ತಮ್ಮ ಕೆಲಸವನ್ನು ಆನಂದಿಸುತ್ತೇನೆ ಎಂದೂ, ಈಗ ತಾವು ಮಗುವನ್ನು ಪಡೆದು ಕುಟುಂಬ ಆರಂಭಿಸಲು ಸೂಕ್ತ ಸಮಯ ಎಂದೂ ಹೆಮ್ಮೆಯಿಂದ ಹೇಳುತ್ತಾರೆ.
"ಹೆರಿಗೆ ರಜೆ ತೆಗೆದುಕೊಳ್ಳುವ ರಾಜಕಾರಣಿಗಳನ್ನು ನಾವು ಟೀಕಿಸಿದರೆ, ಅದರರ್ಥ 20ರಿಂದ 40ರ ವಯಸ್ಸಿನ, ಗರ್ಭ ಧರಿಸುವ ಸಾಮರ್ಥ್ಯವಿರುವ ಎಲ್ಲಾ ಮಹಿಳೆಯರನ್ನೂ ಸಾರ್ವಜನಿಕ ಹುದ್ದೆಗಳಿಂದ ಹೊರಗಿಡುತ್ತಿದ್ದೇವೆ ಎಂದೇ ಅರ್ಥ," ಎಂದು ಕವಾತಾ ಹೇಳುತ್ತಾರೆ.














Click it and Unblock the Notifications