ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಪ್ಪು ಒಪ್ಪಿಕೊಂಡರಾ?
ಇಸ್ರೇಲ್ ಮಾಡಿರುವ ಅದೊಂದು ಎಡವಟ್ಟು ಈಗ ಕುತ್ತಿಗೆಗೆ ತಂದಿದೆ. ಹಾಗೇ ಇಸ್ರೇಲ್ ಬಗ್ಗೆ ಈಗ ಇಡೀ ಜಗತ್ತು ಆಕ್ರೋಶ ಹೊರಹಾಕುತ್ತಿದೆ. ಇಂತಹ ಸಮಯದಲ್ಲೇ ಇಸ್ರೇಲ್ ಪ್ರಧಾನಿ ಇದೇ ಮೊದಲ ಬಾರಿಗೆ ರಫಾ ಪ್ರದೇಶದ ನಿರಾಶ್ರಿತರ ಟೆಂಟ್‌ಗಳ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಅಮೆರಿಕ ಸೇರಿ ಇಸ್ರೇಲ್ ದೇಶದ ಮಿತ್ರ ರಾಷ್ಟ್ರಗಳ ಸಿಟ್ಟು ತಣಿಸಲು ಮುಂದಾಗಿದ್ದಾರೆ.
ರಫಾ ಪ್ರದೇಶದಲ್ಲಿ ಯುದ್ಧ ನಿಲ್ಲಿಸಿ ಎಂದು ಇಸ್ರೇಲ್ ಸೇನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ 2 ದಿನದಲ್ಲಿ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಸೇನೆ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿದ ನಂತರ ಸುಮಾರು 45 ಜನರು ಜೀವ ಬಿಟ್ಟಿದ್ದಾರೆ. ಈ ಘಟನೆ ಈಗ ಇಡೀ ಜಗತ್ತನ್ನೇ ಕೆರಳಿಸಿದೆ. ಅಲ್ಲದೆ ಸ್ವತಃ ಇಸ್ರೇಲ್ ಮಿತ್ರ ದೇಶಗಳೇ ಈ ಕುರಿತು ಆಕ್ರೋಶ ಕೂಡ ಹೊರಹಾಕುತ್ತಿವೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಬಗ್ಗೆ ಅರಿತ ಇಸ್ರೇಲ್ ಪ್ರಧಾನಿ ಈಗ, ರಫಾ ದಾಳಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಅಲ್ಲದೆ ಇನ್ನೂ ಒಂದು ಗಂಭೀರ ವಿಚಾರ ಹಂಚಿಕೊಂಡಿದ್ದಾರೆ.

ಇಸ್ರೇಲ್ ವಿರುದ್ಧ ಭಾರಿ ಆಕ್ರೋಶ
ಹೌದು, ಮೊನ್ನೆಯಷ್ಟೇ ಗಾಜಾದ ದಕ್ಷಿಣ ಭಾಗದ ನಗರವಾದ ರಫಾ ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವಾಯು ದಾಳಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಈ ದಾಳಿಯಿಂದಾಗಿ ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಹಾಗೇ ನಿರಾಶ್ರಿತರ ಶಿಬಿರದಲ್ಲಿ ಸಾಮಾನ್ಯ ಜನರು ಮೃತಪಟ್ಟಿರುವುದು ಕೂಡ ಈಗ ಇಸ್ರೇಲ್ ಆಪ್ತ ದೇಶಗಳಿಂದಲೇ ಟೀಕೆ ಎದುರಿಸುವಂತೆ ಮಾಡಿದೆ ಎಂದು ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ.
ಯುದ್ಧ ನಿಲ್ಲಿಸಲು ಹೇಳಿತ್ತು ಕೋರ್ಟ್
ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ 3 ವಾರದಿಂದ ತಿಕ್ಕಾಟ ತೀವ್ರವಾಗಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವು ವ್ಯಕ್ತವಾಗಿದೆ. ಹಾಗೆಯೇ, ಯುದ್ಧ ತಕ್ಷಣ ನಿಲ್ಲಿಸಿ ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ ಹೀಗಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇಂಟರ್‌ನ್ಯಾಷನಲ್ ಕೋರ್ಟ್ ಇಸ್ರೇಲ್‌ಗೆ ಆಘಾತ ನೀಡಿ, ರಫಾ ಕಾರ್ಯಾಚರಣೆ ತಕ್ಷಣ ನಿಲ್ಲಿಸಿ ಎಂದಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ. ಇಷ್ಟೆಲ್ಲಾ ಗೊಂದಲದ ನಡುವೆಯೂ ಇಸ್ರೇಲ್ ಮಾತ್ರ ತನ್ನ ದಾಳಿ ಮುಂದುವರಿಸಿ ಟೀಕೆಗೆ ಗುರಿಯಾಗಿದೆ. ಈಗಲಾದರೂ ಇಸ್ರೇಲ್ ಸೈಲೆಂಟ್ ಆಗುತ್ತಾ? ಅನ್ನೋ ಕುತೂಹಲ ಮೂಡಿದೆ.












Click it and Unblock the Notifications