Israel-Palestine War: ಹಮಾಸ್ ನೆಲೆಸಿರುವ ಪ್ರತಿಯೊಂದು ಸ್ಥಳವು ಅವಶೇಷಗಳಾಗಿ ಬದಲಾಗಲಿವೆ- ಇಸ್ರೇಲ್ ಪ್ರಧಾನಿ ಪ್ರತಿಜ್ಞೆ
ಹಮಾಸ್ ಉಗ್ರರ ದಾಳಿಗೆ ಸಿಲುಕಿ ಇಸ್ರೇಲ್ ಅಕ್ಷರಶಃ ನಲುಗುತ್ತಿದೆ. ಭಯಾನಕ ದಾಳಿ ಬಳಿಕ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಸರ್ಕಾರ ಯುದ್ಧ ಘೋಷಿಸಿದೆ. ಮೃಗೀಯ ಜನರಿಗೆ ತಕ್ಕ ಪಾಠ ಕಲಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಂದು ನೇರಪ್ರಸಾರದಲ್ಲಿ ಮಾತನಾಡಿದ ಅವರು, 'ಹಮಾಸ್ ಯುದ್ಧವನ್ನು ಬಯಸಿದೆ. ಅದು ಯುದ್ಧವನ್ನು ಎದುರಿಸಲಿದೆ' ಎಂದು ತಿಳಿಸಿದ್ದಾರೆ.

ಹಮಾಸ್ ಐಸಿಸ್‌ನಂತೆ ವರ್ತಿಸುತ್ತಿದೆ. ಪ್ರಬುದ್ಧ ಜಗತ್ತು ಐಸಿಸ್ ಅನ್ನು ನಿರ್ಮೂಲನೆ ಮಾಡಿದ ರೀತಿಯಲ್ಲಿಯೇ ನಾವು ಹಮಾಸ್ ಅನ್ನು ತೊಡೆದುಹಾಕುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಹಲವಾರು ಉಗ್ರಗಾಮಿಗಳು ಇನ್ನೂ ನಮ್ಮ ದೇಶದಲ್ಲಿದ್ದಾರೆ. ನಮ್ಮ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಅವರನ್ನು ನಿರ್ಮೂಲನೆ ಮಾಡಲು ನಾವು ಕಾರ್ಯಸನ್ನದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಲೆಬನಾನ್ ಮತ್ತು ಪಶ್ಚಿಮ ದೇಶಗಳೊಂದಿಗೆ ನಮ್ಮ ಗಡಿಗಳನ್ನು ಬಲಪಡಿಸಲು ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾವು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಬಯಸುತ್ತೇವೆ. ಮಾನವೀಯತೆ ಪರ ಇರುವವರು ಬೆಂಬಲಿಸಲಿ. ನಾವು ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತೇವೆ. ನಮಗೆ ಅಂತರರಾಷ್ಟ್ರೀಯ ಸಮುದಾಯ ಬೆಂಬಲ ನೀಡಲಿ ಎಂದು ತಿಳಿಸಿದ್ದಾರೆ.
'ಹಮಾಸ್ ವಿರುದ್ಧದ ಹೋರಾಟವು ಕೇವಲ ಇಸ್ರೇಲ್ ಜನರನ್ನು ಉಳಿಸಿಕೊಳ್ಳುವುದಕ್ಕಲ್ಲ. ಇದು ಅನಾಗರಿಕತೆಯ ವಿರುದ್ಧ ನಿಂತಿರುವ ಪ್ರತಿಯೊಂದು ದೇಶಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಇಸ್ರೇಲ್ ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ' ಎಂದು ನೆತನ್ಯಾಹು ಹೇಳಿದ್ದಾರೆ.

ನಾನು ಅಮೆರಿಕ ಅಧ್ಯಕ್ಷ ಬಿಡೆನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಸ್ರೇಲ್ ಬೆನ್ನಿಗೆ ಅವರು ನಿಂತಿದ್ದಾರೆ. ಭದ್ರತೆಯ ಭರವಸೆಗಳನ್ನು ನೀಡಿದ್ದಾರೆ. ನಮ್ಮ ಕಾರ್ಯಚರಣೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ನನ್ನ ದೇಶದ ನಾಗರಿಕರ ಪರವಾಗಿ ನಾನು ಬೈಡನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ತುರ್ತು ಏಕತೆ ಬೇಕಿದೆ. ನಮಗೀಗ ಇಸ್ರೇಲ್ ಮುಖ್ಯವಾಗಿದೆ. ವಾದ-ಪ್ರತಿವಾದಗಳು ಏನೇ ಇರಲಿ. ನಾವು ಒಂದಾಗಿ ಕೆಲಸ ಮಾಡಬೇಕಿದೆ. ವಿರೋಧ ಪಕ್ಷದ ನಾಯಕರು ಈಗ ನಮ್ಮೊಂದಿಗೆ ಇರಬೇಕಿದೆ. ಇಸ್ರೇಲ್‌ನಲ್ಲಿನ ಆಂತರಿಕ ವಿಭಜನೆಯು ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿ ಎಂದು ಅವರು ಕರೆ ನೀಡಿದ್ದಾರೆ.
ಹಮಾಸ್ ಕಾರ್ಯನಿರ್ವಹಿಸುವ ಪ್ರತಿಯೊಂದು ಸ್ಥಳವು ಅವಶೇಷಗಳಾಗಿ ಬದಲಾಗುತ್ತವೆ. ಗಾಜಾ ಪಟ್ಟಿಯ ಸುತ್ತಲಿನ ಪಟ್ಟಣಗಳನ್ನು ಉಗ್ರಗಾಮಿಗಳ ಹಿಡಿತದಿಂದ ತೆರವುಗೊಳಿಸುವುದು ನಮ್ಮ ಮೊದಲ ಹೆಜ್ಜೆಯಾಗಿದೆ. ಅದನ್ನು ನಾವು ಯಶಸ್ವಿಯಾಗಿ ಮುಗಿಸುತ್ತೇವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್‌ಗೆ ಅಭೂತಪೂರ್ವ ಅಂತರರಾಷ್ಟ್ರೀಯ ಬೆಂಬಲ ದೊರೆಯುತ್ತಿದೆ. ನಾವು ಇದಕ್ಕೆ ಧನ್ಯವಾದ ಅರ್ಪಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್‌ನಲ್ಲಿ ಇನ್ನೂ ಹಲವಾರು ಪ್ಯಾಲೆಸ್ತೀನ್ ಉಗ್ರಗಾಮಿಗಳು ಇದ್ದಾರೆ. ನಮ್ಮ ಶತ್ರುಗಳಿಗೆ ನಾವು ಏನು ಮಾಡುತ್ತೇವೆ ಎಂಬುದು ತಲೆಮಾರುಗಳವರೆಗೆ ನೆನಪಿನಲ್ಲಿರಬೇಕು ಎಂದು ಹೇಳಿದ್ದಾರೆ.
ಅಪಹರಿಸಿದ ಮತ್ತು ಕಾಣೆಯಾದವರಿಗೆ ನಾವು ಎಲ್ಲ ಸಹಾಯವನ್ನೂ ಮಾಡುತ್ತೇವೆ. ನಮ್ಮ ಮುಂದೆ ಕಠಿಣ ದಿನಗಳಿವೆ. ಕಠಿಣ ಸವಾಲುಗಳಿವೆ. ಕಠಿಣ ಸಂಕಷ್ಟಗಳಿವೆ. ಆದರೆ, ನಾವು ಇದರಲ್ಲಿ ಗೆಲುವು ಸಾಧಿಸಲು ನಿರ್ಧರಿಸುತ್ತೇವೆ. ಗೆಲುವು ಸಾಧಿಸಲಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications