ಇರಾನ್ ವಿರುದ್ಧ ಸಿಂಹ ಘರ್ಜನೆ ಕಾರ್ಯಾಚರಣೆ, ರಷ್ಯಾ ಮತ್ತು ಚೀನಾ ನಡೆ ಬಗ್ಗೆ ಕುತೂಹಲ | Israel Military
ಇಸ್ರೇಲ್ ಮತ್ತು ಅಮೆರಿಕ ತಮ್ಮ ಪಾಲಿನ ದೊಡ್ಡ ಶತ್ರು, ಮಧ್ಯಪ್ರಾಚ್ಯ ಭಾಗದ ವಿರೋಧಿ ಇರಾನ್ ವಿರುದ್ಧ ಬೃಹತ್ ಸೇನಾ ಕಾರ್ಯಾಚರಣೆಯನ್ನು ಶುರು ಮಾಡಿವೆ. ಇರಾನ್ ವಿರುದ್ಧ ಸಿಂಹ ಘರ್ಜನೆ ಕಾರ್ಯಾಚರಣೆ ಶುರುವಾದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಜಾಗತಿಕ ಮಾರುಕಟ್ಟೆಗಳು ಕುಸಿದು ಬೀಳುತ್ತಿವೆ. ಹಾಗೇ ಪರಮಾಣು ದಾಳಿ ಹಾಗೂ ಯುದ್ಧದ ಭೀತಿ ಕೂಡ ಆವರಿಸಿದ್ದು, ಇದು ಎಲ್ಲೆಲ್ಲೂ ಭಯ ಹುಟ್ಟಿಸಿದೆ. ಇಂತಹ ಸಮಯದಲ್ಲಿ ಇರಾನ್ ತನ್ನ ಮಿತ್ರ ದೇಶಗಳಿಂದ ಸಹಾಯವನ್ನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ರಷ್ಯಾ ಮತ್ತು ಚೀನಾ ನಡೆ ಬಗ್ಗೆ ಕುತೂಹಲ ಇದೀಗ ಕೆರಳಿದೆ. ಕಾರಣ ಜಗತ್ತಿನಲ್ಲಿ ಇರಾನ್ ಜೊತೆಗೆ ನಿಂತಿರುವ ಬೃಹತ್ ಹಾಗೂ ಶಕ್ತಿಶಾಲಿ ದೇಶಗಳು ಎಂದರೆ ರಷ್ಯಾ & ಚೀನಾ ಮಾತ್ರ.
ಇಸ್ರೇಲ್ ಸೇನೆ ಇಂದು ಬೆಳಗ್ಗೆಯಿಂದಲೇ ದಿಢೀರ್ ಕ್ಷಿಪಣಿಗಳ ಮೂಲಕ ಕಾರ್ಯಾಚರಣೆ ಆರಂಭಿಸಿದೆ. ಹೀಗೆ ಇಸ್ರೇಲ್ ದಾಳಿ ನಂತರ, ದಿಢೀರ್ ಸೇನಾ ಕಾರ್ಯಾಚರಣೆ ಶುರು ಮಾಡಿರುವ ಅಮೆರಿಕ ಕೂಡ ಭರ್ಜರಿ ಹೊಡೆತ ನೀಡಿ ಇರಾನ್ ನಡುಗುವಂತೆ ಮಾಡಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಭೀಕರ ಕದನ ಶುರುವಾಗಿ ಇಡೀ ಜಗತ್ತು ಈಗ ಚಿಂತೆ ಮಾಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಈ ಕಾರ್ಯಾಚರಣೆಗೆ ವಿಶೇಷ ಹೆಸರು ಕೊಟ್ಟಿದೆ ಇಸ್ರೇಲ್ ಮತ್ತು ಅಮೆರಿಕ. ಆಪರೇಷನ್ ಸಿಂಹ ಘರ್ಜನೆ ಎಂದು ಕರೆಯಲಾದ ಈ ಹೊಸ ಸೇನಾ ಕಾರ್ಯಾಚರಣೆ ಮತ್ತೊಂದು ಮಹಾಯುದ್ಧದ ರೂಪ ಪಡೆಯುತ್ತಿದೆ. ಹೀಗಾಗಿಯೇ ರಷ್ಯಾ & ಚೀನಾ ನಡೆ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಅಕಸ್ಮಾತ್ ರಷ್ಯಾ ಮತ್ತು ಚೀನಾ ದಿಢೀರ್ ಇರಾನ್ ಜೊತೆ ಸೇರಿ ಸೇನಾ ಬೆಂಬಲ ನೀಡಿದರೆ ಅದು 3ನೇ ಮಹಾಯುದ್ಧವಾಗುವಲ್ಲಿ ಯಾವುದೇ ಅನುಮಾನ ಬೇಡ.

ರಷ್ಯಾ & ಚೀನಾ ದಿಢೀರ್ ಬೆಂಬಲ?
ಇರಾನ್‌ಗೆ ಈ ಪರಿಸ್ಥಿತಿಯಲ್ಲಿ ದಿಢೀರ್ ರಷ್ಯಾ & ಚೀನಾ ಬೆಂಬಲ ಸಿಗಬಹುದು. ಇರಾನ್ ಬೆನ್ನಿಗೆ ರಷ್ಯಾ & ಚೀನಾ ನಾಯಕರು ನಿಂತ ನಂತರ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಈ ವಿಚಾರದಲ್ಲಿ ಅಮೆರಿಕ & ಇಸ್ರೇಲ್ ಒಗ್ಗಟ್ಟಿನಿಂದ ನಿಂತು, ಇರಾನ್ ಮೇಲೆ ಬೃಹತ್ ಸೇನಾ ಕಾರ್ಯಾಚರಣೆ ನಡೆಸಲು ಮುಂದೆ ನುಗ್ಗಿವೆ. ಅದೇ ರೀತಿ ಇನ್ನೊಂದು ಕಡೆ ರಷ್ಯಾ & ಚೀನಾ ದಿಢೀರ್ ಇರಾನ್‌ಗೆ ಬೆಂಬಲ ಘೋಷಿಸಿ, ಯುದ್ಧಕ್ಕೆ ಧುಮುಕಿದರೆ ಅದು ಯಾವುದೇ ಮುಲಾಜು ಇಲ್ಲದೆ ದೊಡ್ಡ ಯುದ್ಧವಾಗಲಿದೆ. ಪ್ರಮುಖವಾಗಿ ಈ ಯುದ್ಧ 3ನೇ ಮಹಾಯುದ್ಧದ ರೂಪ ಪಡೆಯಲಿದೆ ಎಂಬುದು ಗಮನಾರ್ಹ ಸಂಗತಿ. ಇರಾನ್‌ನ ಬಳಿ ಪರಮಾಣು ಅಸ್ತ್ರಗಳು ಕೂಡ ಇದೆ ಎಂಬ ಆರೋಪ ಇದ್ದು, ಅಕಸ್ಮಾತ್ ಈ ಯುದ್ಧದಲ್ಲಿ ಅದು ಬಳಕೆಯಾದರೆ? ಎಂಬ ಚಿಂತೆ ಕೂಡ ಈಗ ಶುರುವಾಗಿದೆ ಇಡೀ ಪ್ರಪಂಚಕ್ಕೆ.
ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ
ಇರಾನ್‌ನ ಮೇಲೆ ದಿಢೀರ್ ದಾಳಿ ಆರಂಭವಾದ ನಂತರ, ಚೀನಾ ಹಾಗೂ ರಷ್ಯಾ ನಾಯಕರು ತಮ್ಮ ತಮ್ಮ ದೇಶಗಳಲ್ಲಿ ಪ್ರತ್ಯೇಕವಾಗಿ ಉನ್ನತ ಮಟ್ಟದ ಸಭೆ ನಡೆಸಿರುವುದು ಗಮನ ಸೆಳೆದಿದೆ. ಮಹಾಯುದ್ಧ ನಡೆದರೂ ಚಿಂತೆ ಇಲ್ಲ ಎಂಬಂತೆ ದೊಡ್ಡ ದೊಡ್ಡ ದೇಶಗಳು ಹಿಂಗೆ ಬಡಿದಾಟಕ್ಕೆ ನಿಂತು, ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡುತ್ತಿರುವುದು ವಿಶ್ವಸಂಸ್ಥೆಗೂ ನಿದ್ದೆಗೆಡಿಸಿದೆ. ಹಾಗೇ ಯುರೋಪ್ ದೇಶಗಳು ಮತ್ತು ಪ್ರಮುಖವಾಗಿ ನ್ಯಾಟೋ ಒಕ್ಕೂಟ ಈ ವಿಚಾರದಲ್ಲಿ ಯಾವ ನಿಲುವು ಹೊಂದಲಿದೆ? ಎಂಬುದು ಕೂಡ ಬಹುಮುಖ್ಯ. ಎಲ್ಲವನ್ನೂ ನೋಡುತ್ತಿದ್ದರೆ ಜಗತ್ತು ಮತ್ತೊಮ್ಮೆ ಭಾರಿ ದೊಡ್ಡ ವಿನಾಶದ ಕಡೆಗೆ ಹೋಗುತ್ತಿದೆ ಎಂದು ಅಂತಾರಾಷ್ಟ್ರೀಯ ರಾಜಕೀಯ ತಜ್ಞರು ಬೇಸರ ಹೊರ ಹಾಕುತ್ತಿದ್ದಾರೆ.












Click it and Unblock the Notifications