Israel Attacks Iran: ಇರಾನ್‌ಗೆ ಕ್ಷಿಪಣಿ ದಾಳಿ ಮೂಲಕ ಶಾಕ್ ಕೊಟ್ಟ ಇಸ್ರೇಲ್
ಶನಿವಾರ ಇಸ್ರೇಲ್ ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ನಡೆಸಿರುವುದಾಗಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಇಸ್ರೇಲ್ ರಾಜ್ಯದ ಮೇಲೆ ಇರುವ ಭೀತಿಗಳನ್ನು ನಿವಾರಿಸುವ ಉದ್ದೇಶದಿಂದ ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ಆರಂಭಿಸಲಾಗಿದೆ. ಈ ಹಿನ್ನೆಲೆ ದೇಶಾದ್ಯಂತ ತಕ್ಷಣದಿಂದಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಅಣು ಒಪ್ಪಂದದ ವಿಚಾರವಾಗಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಶನಿವಾರ ಇಸ್ರೇಲ್ ಇರಾನ್ ಮೇಲೆ ಭೀಕರ ಮುಂಜಾಗ್ರತಾ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಸರಣಿ ಸ್ಫೋಟಗಳು ಸಂಭವಿಸಿದ್ದು, ಇದರಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ.

ಮಾಹಿತಿ ಪ್ರಕಾರ, ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಿಗೆ ಇಸ್ರೇಲ್‌ನ ಹಲವು ಕ್ಷಿಪಣಿಗಳು ಅಪ್ಪಳಿಸಿವೆ. ಜೊತೆಗೆ ನಗರದ ಹೃದಯಭಾಗದಲ್ಲಿರುವ ಪಾಸ್ಟರ್ ಸ್ಟ್ರೀಟ್ ಪರಿಸರದಲ್ಲಿ ಸ್ಫೋಟದ ನಂತರ ದಟ್ಟವಾದ ಹೊಗೆ ಕಂಡುಬಂದಿದೆ. ದಾಳಿಯ ಬೆನ್ನಲ್ಲೇ ಇರಾನ್‌ನಿಂದ ಪ್ರತಿ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡಿರುವ ಇಸ್ರೇಲ್ ಸೇನೆ, ತನ್ನ ದೇಶದಾದ್ಯಂತ 'ಏರ್ ರೈಡ್ ಸೈರನ್'ಗಳನ್ನು ಮೊಳಗಿಸಿದೆ. "ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಬರುವ ಸಾಧ್ಯತೆಯಿದೆ, ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು," ಎಂದು ಇಸ್ರೇಲ್ ರಕ್ಷಣಾ ಪಡೆ ಎಚ್ಚರಿಕೆ ನೀಡಿದೆ.
ಇಸ್ರೇಲ್ ಇರಾನ್ ಅಧ್ಯಕ್ಷರ ಭವನ, ಗುಪ್ತಚರ ಸಂಸ್ಥೆ, ವಿಮಾನ ನಿಲ್ದಾಣ, ಕೋಮ್ ನಗರ ಸೇರಿದಂತೆ ಸುಮಾರು 30 ಗುರಿಗಳನ್ನ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ಮಾಡಲಾಗಿದೆ. ಈ ಬೆನ್ನಲ್ಲೇ ಅಮೆರಿಕ ಕೂಡ ಇರಾನ್‌ನಲ್ಲಿ ತನ್ನ ದಾಳಿಗಳು ಮುಂದುವರೆದಿವೆ ಎಂದು ಎಚ್ಚರಿಕೆ ನೀಡಿದೆ. ಮಿಸೈಲ್‌ಗಳು ಇರಾನ್‌ಗೆ ಅಪ್ಪಳಿಸುತ್ತಿದ್ದಂತೆ ಸರ್ವೋಚ್ಛ ನಾಯಕ ಖಮೇನಿಯನ್ನ ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಮಿಸೈಲ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನ ಹಾರಿಸುವ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರನ್ನ ಎಚ್ಚರಿಸುತ್ತಿದೆ. ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಕುರಿತ ಸೈರನ್‌ಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.












Click it and Unblock the Notifications