3 ತಿಂಗಳು ಯಶಸ್ವಿಯಾಗಿ ಪೂರೈಸಿದ ಇಸ್ರೇಲ್ VS ಹಮಾಸ್ ಯುದ್ಧಕ್ಕೆ ಇನ್ನೆಷ್ಟು ಜನರ ರಕ್ತ ಬೇಕು?
ಅದು ಅಕ್ಟೋಬರ್ 7, 2023. ಯಾರೂ ಊಹೆ ಮಾಡದ ಘಟನೆ ನಡೆದೇ ಹೋಗಿತ್ತು. ಆ ಎರಡು ದೇಶಗಳ ನಡುವೆ ದಿಢೀರ್ ಯುದ್ಧದ ಬೆಂಕಿ ಹೊತ್ತಿಕೊಂಡು, ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 3 ತಿಂಗಳು ಕಳೆದು ಹೋಗಿದೆ. ಇದೇ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದ ಆರೋಪ ಕೇಳಿಬಂದಿದೆ.
ಇಸ್ರೇಲ್ ಸೇನೆ VS ಹಮಾಸ್ ಬಂಡುಕೋರರ ಯುದ್ಧ ಗಾಜಾದ ಕೇಂದ್ರ ಭಾಗದ ಪ್ರಮುಖ ಆಸ್ಪತ್ರೆ ಸಮೀಪಕ್ಕೆ ಬಂದಿದೆ. ಅಲ್ ಅಖ್ಸಾ ಮಾರ್ಟಿಯರ್ಸ್ ಆಸ್ಪತ್ರೆಯ ಸಮೀಪವೇ ಇದೀಗ ಭೀಕರ ಕಾಳಗ ಶುರುವಾಗಿದೆ. ಇದರಿಂದ ವೈದ್ಯರು, ರೋಗಿಗಳು & ಆಶ್ರಯ ಪಡೆದ ಜನರಿಗೆ ದೊಡ್ಡ ಗಂಡಾಂತರ ಎದುರಾಗಿದೆ. ಮತ್ತೊಂದು ಕಡೆ ದೇರ್ ಅಲ್-ಬಾಲಾಹ್ ಆಸ್ಪತ್ರೆ ಪ್ರದೇಶದಿಂದ ಏಜೆನ್ಸಿಗಳು ಮತ್ತು ವೈದ್ಯರು ಎಸ್ಕೇಪ್ ಆಗಿದ್ದು, ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದೇ ರೋಗಿಗಳು ನರಳುತ್ತಿರುವ ಆರೋಪ ಕೇಳಿಬಂದಿದೆ.

24 ಗಂಟೆಯಲ್ಲಿ 73 ಶವ
ಇಸ್ರೇಲ್ ಸೇನೆ ತನ್ನ ದಾಳಿ ದಿನದಿಂದ ದಿನಕ್ಕೆ ಭೀಕರಗೊಳಿಸುತ್ತಿದ್ದು ವೈಮಾನಿಕ ದಾಳಿಯ ಜೊತೆ ಜೊತೆಗೆ ಇಸ್ರೇಲಿ ಪಡೆಗಳು ಕೇಂದ್ರ ಗಾಜಾದಲ್ಲಿ ಮುನ್ನುಗ್ಗುತ್ತಿವೆ. ಹೀಗಾಗಿ ಪ್ರತಿ ದಿನವು ಸಾವು & ನೋವಿನ ಪ್ರಮಾಣ ಏರಿಕೆ ಕಾಣುತ್ತಿದೆ. ಹಾಗೇ ಕಳೆದ 24 ಗಂಟೆ ಸಮಯದಲ್ಲಿ 99 ಗಾಯಾಳುಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 73 ಶವ ಆಸ್ಪತ್ರೆಗೆ ಬಂದಿವೆ ಎಂದು ಗಾಜಾ ಆರೋಗ್ಯ ಸಚಿವಾಲಯ ಸ್ಫೋಟಕ ಮಾಹಿತಿ ನೀಡಿದೆ.
ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?
ಹೀಗಿದ್ದಾಗಲೇ ಇಸ್ರೇಲ್ ಸೇನೆ ಯುದ್ಧ ನಿಲ್ಲಿಸುತ್ತಾ? ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿವೆ. ಆದರೆ ಅದೆಲ್ಲಾ ಸಾಧ್ಯವಿಲ್ಲ ಅನ್ನೋದು ಕೂಡ ಅಷ್ಟೇ ಕನ್ಫರ್ಮ್ ಆಗಿದೆ. ಈಗ ಇಸ್ರೇಲಿನ ಸೈನಿಕರು ಗಾಜಾದ ಕೇಂದ್ರ ಭಾಗ & ದಕ್ಷಿಣದ ಖಾನ್ ಯೂನಿಸ್ ನಗರದ ಮೇಲೆ ಗಮನ ನೆಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಹಮಾಸ್ ಉಗ್ರರ ನಾಶಕ್ಕೆ ಇಸ್ರೇಲ್‌ನ ಸೇನೆ ಪಣತೊಟ್ಟು ನಿಂತಿರುವ ಕಾರಣ ಯುದ್ಧ ಸದ್ಯಕ್ಕೆ ನಿಲ್ಲೋದು ಅನುಮಾನ.

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದ ರೀತಿಯೇ ಹಮಾಸ್ & ಇಸ್ರೇಲ್ ವಾರ್ ಕೂಡ ಈಗ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಾಲದು ಅಂತಾ, ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ & ಇರಾನ್ ಬೆಂಬಲಿತ ಉಗ್ರರ ಗುಂಪುಗಳು ಹಮಾಸ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಫೈಟಿಂಗ್ ಮತ್ತಷ್ಟು ಜೋರಾಗುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇನ್ನಷ್ಟು ಭೀಕರವಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯ ಇದೆ. ಈವರೆಗೆ ಗಾಜಾದ ಸುಮಾರು, 23 ಸಾವಿರ ನಾಗರಿಕರು ಈ ಯುದ್ಧದಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೇ ಗಾಜಾದ ಸುಮಾರು 23 ಲಕ್ಷ ಜನಸಂಖ್ಯೆಯಲ್ಲಿ ಶೇ 85ರಷ್ಟು ಜನ ಊರು ಬಿಟ್ಟಿದ್ದಾರೆಂದು ಆರೋಪವನ್ನ ಮಾಡಲಾಗಿದೆ.












Click it and Unblock the Notifications