ಇಸ್ರೇಲ್ ಒಳಗೆ ಶುರುವಾಯ್ತು ಕಿಚ್ಚು: ಯಾರನ್ನು ಸುಡಲಿದೆ ಈ ಬೆಂಕಿ?
ಇಸ್ರೇಲ್ ಇದೀಗ ತನ್ನ ಸ್ವಂತ ನೆಲದಲ್ಲೇ ಭಾರಿ ವಿರೋಧ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವಾಗ ಗಾಜಾ ವಿರುದ್ಧ ಯುದ್ಧ ಶುರುವಾಯ್ತೋ ಅದೇ ದಿನದಿಂದ ಜಗತ್ತಿನಾದ್ಯಂತ ಇಸ್ರೇಲ್ ವಿರೋಧಿ ನಿಲುವು ಹೆಚ್ಚಾಗುತ್ತಿದೆ. ಆದರೆ ಭಾರತ ಮಾತ್ರ ಇಸ್ರೇಲ್ ಪರವಾಗಿ ಇದೆ. ಹೀಗಿದ್ದಾಗ ತನ್ನ ಸ್ವಂತ ದೇಶದಲ್ಲೇ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ, ದಿಢೀರ್ ಇಸ್ರೇಲ್ ನಾಗರಿಕರು ಪ್ರತಿಭಟನೆ ಶುರು ಮಾಡಿದ್ದು ಯಾವ ಕಾರಣಕ್ಕೆ? ಬನ್ನಿ ತಿಳಿಯೋಣ.
ಕಳೆದ ವರ್ಷ ಅಂದ್ರೆ 2023ರ ಅಕ್ಟೋಬರ್ ತಿಂಗಳಲ್ಲಿ ಈ ರೀತಿ ಇಸ್ರೇಲ್ & ಗಾಜಾ ಪಟ್ಟಿಯ ನಡುವೆ ಯುದ್ಧ ಶುರುವಾಗಿತ್ತು. ಹೀಗೆ ಇಬ್ಬರ ನಡುವೆ ಯುದ್ಧ ಶುರುವಾದ ನಂತರ ಇದೇ ಇಸ್ರೇಲ್ ದೇಶದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದು ಆಕ್ರೋಶ ಹೊರಗೆ ಹಾಕುತ್ತಿದ್ದಾರೆ. ಅದರಲ್ಲೂ, ಇಸ್ರೇಲ್ ಪ್ರಜೆಗಳನ್ನು ಹಮಾಸ್ ಬಂಡುಕೋರರು ಅಪಹರಣ ಮಾಡಿ ಹತ್ಯೆ ಮಾಡಿರುವ ಆರೋಪ ಇದೆ. ಈ ಮಧ್ಯೆ ಇನ್ನೂ ಹಲವು ಒತ್ತೆಯಾಳುಗಳು ಈ ರೀತಿ, ಹಮಾಸ್ ಕಪಿ ಮುಷ್ಠಿಗೆ ಸಿಲುಕಿ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ವಾಪಸ್ ಕರೆದು ಕೊಂಡು ಬರಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ. ಹೀಗಿದ್ದಾಗಲೇ ದಿಢೀರ್ ಪ್ರತಿಭಟನೆ ಶುರುವಾಗಿದೆ.

ಇಸ್ರೇಲ್ ಬಂದ್ ಮಾಡಿ ಆಕ್ರೋಶ!
ಅಷ್ಟಕ್ಕೂ, ಗಾಜಾ ಪಟ್ಟಿಯಿಂದ ಇಸ್ರೇಲ್ ಒತ್ತೆಯಾಳುಗಳನ್ನು ಮರಳಿ ಕರೆತರಲು ಇಸ್ರೇಲ್ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿದ ಇಸ್ರೇಲ್ ಪ್ರಜೆಗಳು, ಸರ್ಕಾರದ ವಿರುದ್ಧ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಪರಿಣಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಪ್ರದೇಶಗಳು ಬಂದ್ ಆಗಿದ್ದವು. ಅಲ್ಲದೆ ಮತ್ತೊಂದು ಕಡೆ ಬ್ಯಾಂಕ್, ಆರೋಗ್ಯ ಸೇವೆ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳು ಬಂದ್ ಆಗಿದ್ದವು. ಹೀಗಾಗಿ ಬಹುತೇಕ ಇಸ್ರೇಲ್ ಸ್ತಬ್ಧವಾಗಿತ್ತು, ಅಲ್ಲದೆ ಮತ್ತೊಂದು ಕಡೆ ಆರ್ಥಿಕ ವಲಯದಲ್ಲಿ ಸಂಚಲನ ಮೂಡಿತ್ತು.
ಲಸಿಕೆ ಹಾಕಲು ಯುದ್ಧ ಸ್ಟಾಪ್!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಯಾಕಂದ್ರೆ ಇಸ್ರೇಲ್‌ಗೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದ್ದು, ಯುದ್ಧದ ನಡುವೆಯೂ ಇದನ್ನ ಎದುರಿಸುವುದು ಕಷ್ಟವಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಗಾಜಾ ಪಟ್ಟಿ ಭಾಗದಲ್ಲಿ ಯುದ್ಧಕ್ಕೆ ಬ್ರೇಕ್ ಹಾಕಿ, ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಗಾಜಾ ಪಟ್ಟಿ ಭಾಗದಲ್ಲಿರುವ ಮಕ್ಕಳಿಗೆ ವ್ಯಾಕ್ಸಿನ್ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ & ವಿಶ್ವಸಂಸ್ಥೆ ಏಜೆನ್ಸಿಗಳು ಈ ಕಾರ್ಯ ಕೈಗೊಂಡಿವೆ. ಹಾಗೇ ಈ ಮೂಲಕ ಗಾಜಾ ಪಟ್ಟಿ ಭಾಗದ 6.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲು ಯೋಜನೆ ಕೈಗೊಳ್ಳಲಾಗಿದೆ.












Click it and Unblock the Notifications