ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ: ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಟ್ಟವಾಗಿದ್ದು, ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ವಿರುದ್ಧ "ಮುನ್ನೆಚ್ಚರಿಕಾ ದಾಳಿ" ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇರಾನ್ ತನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಇಸ್ರೇಲ್ ಈ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಸದ್ಯ ಇಸ್ರೇಲ್ ಸರ್ಕಾರವು ದೇಶಾದ್ಯಂತ 'ಸ್ಟೇಟ್ ಆಫ್ ಎಮರ್ಜೆನ್ಸಿ' (ತುರ್ತು ಪರಿಸ್ಥಿತಿ) ಘೋಷಿಸಿದೆ. ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಇರಾನ್‌ನ ಸಂಭವನೀಯ ಪ್ರತಿದಾಳಿಯನ್ನು ಎದುರಿಸಲು ಇಸ್ರೇಲ್‌ನ 'ಐರನ್ ಡೋಮ್' ಸೇರಿದಂತೆ ಎಲ್ಲ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಗರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸರಣಿ ಸ್ಫೋಟ
ಇರಾನ್‌ನ ರಾಜಧಾನಿ ಟೆಹ್ರಾನ್‌ನ ಹೃದಯಭಾಗದಲ್ಲಿ ಇಂದು ಮುಂಜಾನೆ ಮೂರು ಭೀಕರ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸ್ಫೋಟಗಳ ಬೆನ್ನಲ್ಲೇ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಇರಾನ್ ಮೇಲೆ 'ಮುನ್ನೆಚ್ಚರಿಕಾ ದಾಳಿ' ನಡೆಸಿರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
ಇರಾನ್ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಇರಾನ್‌ನಿಂದ ಬರಬಹುದಾದ ಕ್ಷಿಪಣಿಗಳನ್ನು ಎದುರಿಸಲು ಸಜ್ಜಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಇರಾನ್ ಈವರೆಗೆ ಇಸ್ರೇಲ್ ಮೇಲೆ ಯಾವುದೇ ದಾಳಿಯ ಬೆದರಿಕೆ ಹಾಕಿಲ್ಲ. ರಾಜತಾಂತ್ರಿಕತೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಇರಾನ್ ಪದೇ ಪದೇ ಹೇಳುತ್ತಾ ಬಂದಿದೆ. ಹೀಗಿದ್ದರೂ ಇಸ್ರೇಲ್ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇರಾನ್ ಯಾವುದೇ ಉದ್ರೇಕಕಾರಿ ಹೇಳಿಕೆ ನೀಡದಿದ್ದರೂ, ಇಸ್ರೇಲ್ ರಕ್ಷಣಾತ್ಮಕವಾಗಿ ಈ ದಾಳಿ ನಡೆಸಿದೆ ಎಂದು ಹೇಳುತ್ತಿರುವುದು ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ರಾಜತಾಂತ್ರಿಕ ಹಾದಿಯನ್ನು ಹಿಡಿಯುವಂತೆ ಇರಾನ್ ಹೇಳುತ್ತಿದ್ದರೂ, ಇಸ್ರೇಲ್‌ನ ಈ ದಾಳಿಯು ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಟೆಹ್ರಾನ್‌ನಲ್ಲಿ ಸಂಭವಿಸಿದ ಸ್ಫೋಟಗಳಿಂದ ಆಗಿರುವ ಹಾನಿಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications