ಇಸ್ರೇಲ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದೆಯಾ?
ಇಸ್ರೇಲ್ ತನ್ನ ಕೋಪ & ಸೇಡಿನಿಂದಲೇ ಇದೀಗ ದೊಡ್ಡ ಕಂಟಕದ ಕಂದಕಕ್ಕೆ ಸಿಲುಕಿದಂತೆ ಕಾಣ್ತಿದೆ. ಮೊದಲಿಗೆ ಹಮಾಸ್ ಬಂಡುಕೋರರ ವಿರುದ್ಧ ಯುದ್ಧ ಶುರು ಮಾಡಿದ್ದ ಇಸ್ರೇಲ್ ಮಿಲಿಟರಿ, ಆ ನಂತರ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಕೂಡ ಯುದ್ಧ ಶುರು ಮಾಡಿದೆ ಇಸ್ರೇಲ್ ಸೇನೆ. ಇದೆಲ್ಲಾ ಸರಿ ಆದರೆ ಈಗ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಿಂದ ಬಂದ ಸೈನಿಕರು ಇರುವ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಕೂಡ ದಾಳಿಯನ್ನ ಮಾಡಿ ದೊಡ್ಡ ಸಮಸ್ಯೆಗೆ ಸಿಲುಕಿದೆ. ಭಾರತ ಕೂಡ ಈಗ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದಿದೆ!
ಇಸ್ರೇಲ್ ಮಾಡಿಕೊಳ್ಳುತ್ತಿರುವ ಸಮಸ್ಯೆ ಈಗ ಅಮೆರಿಕ ದೇಶವನ್ನು ಕೂಡ ಸಮಸ್ಯೆ ಸುಳಿಗೆ ಸಿಲುಕಿಸುತ್ತಿದ್ದು, ಅದರಲ್ಲೂ ವಿಶ್ವಸಂಸ್ಥೆ ವಿರುದ್ಧವೇ ಇಸ್ರೇಲ್ ಪ್ರಧಾನಿ ರೊಚ್ಚಿಗೆದ್ದಿದ್ದಾರೆ. ಇದು ಮತ್ತೊಂದು ರೀತಿ ಸಮಸ್ಯೆ ತಂದೊಡ್ಡಿದ್ದು, ಮುಂದಿನ ದಿನಗಳಲ್ಲಿ ಇಸ್ರೇಲ್ ಜಗತ್ತಿನ ಎದುರು ವಿಲನ್ ಆಗುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಹೀಗಿದ್ದಾಗಲೇ ಶಾಂತಿ ಪಾಲನ ಪಡೆಗಳನ್ನ ಲೆಬನಾನ್ ಗಡಿಯಿಂದ ವಾಪಸ್ ಕರೆಸಿಕೊಳ್ಳಿ ಎಂದು ಆವಾಜ್ ಹಾಕಿದ್ದ ಇದೇ ಇಸ್ರೇಲ್‌ಗೆ ಯಾವ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ ಗೊತ್ತಾ? ಬನ್ನಿ ತಿಳಿಯೋಣ.

ರೊಚ್ಚಿಗೆದ್ದ ಸ್ಪೇನ್ & ಫ್ರಾನ್ಸ್!
ಹೌದು, ಲೆಬನಾನ್ ದೇಶದ ಗಡಿಯಲ್ಲಿ ಇರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಿ ಎಂಬ ಆಗ್ರಹವನ್ನು ಇಸ್ರೇಲ್ ಮಾಡಿತ್ತು. ಇದೀಗ ಇಸ್ರೇಲ್‌ನ ಈ ಕಿರಿಕ್ ವಿರುದ್ಧ ಪ್ರತಿಕ್ರಿಯೆ ನೀಡಿರುವ ಸ್ಪೇನ್ ಹಾಗೂ ಫ್ರಾನ್ಸ್ ದೇಶಗಳು, ನೀವು ಸೈಲೆಂಟ್ ಆಗಿರಿ. ನೀವು ಹೇಳಿದ ರೀತಿಯೆಲ್ಲಾ ನಾವು ಕೇಳುವುದಕ್ಕೆ ಆಗುವುದಿಲ್ಲ ಎಂದು ಎಚ್ಚರಿಕೆ ರೀತಿಯಲ್ಲೇ ಇಸ್ರೇಲ್‌ಗೆ ಪ್ರತಿಕ್ರಿಯೆ ನೀಡಿವೆ.
ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಸ್ ಈ ವಿಚಾರದಲ್ಲಿ ಖಡಕ್ ಆಗಿ ರಿಯಾಕ್ಷನ್ ಕೊಟ್ಟಿದ್ದು, ದಕ್ಷಿಣ ಲೆಬನಾನ್‌ನಲ್ಲಿ ಇರುವ ಶಾಂತಿಪಾಲನಾ ಪಡೆಗಳನ್ನು ನಾವು ಯಾವುದೇ ಕಾರಣಕ್ಕೆ ವಾಪಸ್ ಕರೆಸಿಕೊಳ್ಳಲ್ಲ ಎಂದಿದ್ದಾರೆ. ಹಾಗೇ, ಮತ್ತೊಂದು ಕಡೆ ಫ್ರಾನ್ಸ್ ಕೂಡ ಇಸ್ರೇಲ್‌ನ ಈ ಕಿರಿಕ್ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದು ಶಾಂತಿಪಾಲನಾ ಪಡೆಗಳ ರಕ್ಷಣೆ ಜಗತ್ತಿನ ಪ್ರತಿಯೊಂದು ದೇಶದ ಕರ್ತವ್ಯವಾಗಿದೆ ಎಂದಿದ್ದಾರೆ.
ಇಸ್ರೇಲ್ ನಡೆಗೆ ಜಗತ್ತಿನಾದ್ಯಂತ ಬೇಸರ?
ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್ ಸೇನೆ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳ ಮೇಲೆ ದಾಳಿ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್‌ನಲ್ಲಿ ಇರುವ ಶಾಂತಿಪಾಲನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ ಅಂತ, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರ ಬಳಿ ಮನವಿ ಮಾಡಿದ್ದರು. ಇದೀಗ ಇಸ್ರೇಲ್ ಮನವಿ ಬಗ್ಗೆ ಬೇಸರ ಹೊರ ಹಾಕುತ್ತಿದೆ ವಿಶ್ವ ಸಮುದಾಯ ಎಂಬ ಭಾರಿ ಗಂಭೀರ ಆರೋಪ ಕೇಳಿಬಂದಿದೆ.












Click it and Unblock the Notifications