Iran Vs Usa: ಇರಾನ್‌ನ ಡ್ರೋನ್ ಹೊಡೆದುರುಳಿಸಿದ ಅಮೆರಿಕ ಸೇನೆ
Iran Vs Usa: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಮಧ್ಯಪ್ರಚ್ಯದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಇದೀಗ ಅಮೆರಿಕ ಮತ್ತು ಇರಾನ್‌ನ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ವಿಮಾನವಾಹಕ ನೌಕೆಯನ್ನು (ವಿಮಾನಗಳ ಲ್ಯಾಂಡಿಂಗ್‌ಗೆ ಬಳಸುವ ನೌಕೆ) ಆಕ್ರಮಣಕಾರಿಯಾಗಿ ಸಮೀಪಿಸುತ್ತಿದ್ದ ಇರಾನಿನ ಡ್ರೋನ್ ಅನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಅಮೆರಿಕ ಮಿಲಿಟರಿ ಪಡೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಇರಾನ್ ಮತ್ತು ಅಮೆರಿಕದ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇರಾನ್‌ನಲ್ಲಿ ನಡೆದಿದ್ದ ಆಂತರಿಕ ಗಲಭೆಗೆ ಅಮೆರಿಕವೇ ಕಾರಣ ಎಂದು ಇರಾನ್ ಆರೋಪಿಸಿತ್ತು. ಈ ಬಾರಿ ಯಾವುದೇ ದಾಳಿ ಮಾಡಿದರೂ ಅದನ್ನು ಯುದ್ಧ ಮಾದರಿ ಪ್ರಚೋದನೆ ಎಂದೇ ಪರಿಗಣಿಸಲಿದ್ದೇವೆ ಎಂದು ಇರಾನ್ ಎಚ್ಚರಿಕೆ ಕೊಟ್ಟಿತ್ತು. ಇದೀಗ ಅಮೆರಿಕದ ನೌಕಾಪಡೆಯ ಯುದ್ಧ ವಿಮಾನವು ಅರೇಬಿಯನ್ ಸಮುದ್ರದಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯನ್ನು ಸಮೀಪಿಸುತ್ತಿದ್ದ ಇರಾನಿನ ಡ್ರೋನ್ ಅನ್ನು ಹೊಡೆದುರುಳಿಸಿದೆ. ಈ ವಿಷಯವನ್ನು ಯುಎಸ್ ಸೆಂಟ್ರಲ್ ಕಮಾಂಡ್ ಖಚಿತಪಡಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಮಾತುಕತೆ ನಡೆಸಲು ಮಿಲಿಟರಿ ಪ್ರಯೋಗ ಅಥವಾ ಯುದ್ಧ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆದಿರುವ ಬೆಳವಣಿಗೆಯು ಇರಾನ್ ಮತ್ತು ಅಮೆರಿಕದ ನಡುವೆ ಹೊಸ ಉದ್ವಿಗ್ನತೆ ಮತ್ತು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನು ಇರಾನ್‌ನ ದಕ್ಷಿಣ ಕರಾವಳಿಯಿಂದ ಸುಮಾರು 500 ಮೈಲುಗಳು (800 ಕಿ.ಮೀ) ದೂರದಲ್ಲಿ ಪ್ರಯಾಣಿಸುತ್ತಿದ್ದ ಲಿಂಕನ್‌ನಿಂದ ಬಂದ ಎಫ್-35 ಸಿ ಫೈಟರ್ ಜೆಟ್‌ನಿಂದ ಶಹೆದ್-139 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಅಮೆರಿಕದ ಮಿಲಿಟರಿ ಪಡೆ ಖಚಿತಪಡಿಸಿದೆ. ಡ್ರೋನ್ ಹೊಡೆದುರುಳಿಸುವ ಸಂದರ್ಭದಲ್ಲಿ ಅಮೆರಿಕದ ಪಡೆಗಳಿಗೆ ಹಾನಿಯಾಗಿಲ್ಲ. ಅಲ್ಲದೇ ಅಮೆರಿಕದ ಯಾವುದೇ ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ಮಿಲಿಟರಿ ವರದಿಯು ಉಲ್ಲೇಖಿಸಿದೆ.
ಡ್ರೋನ್‌ನಿಂದ ಮಾಹಿತಿ ಸಂಗ್ರಹವಾಗಿತ್ತು
ಇನ್ನು ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ಸ್ ಡ್ರೋನ್‌ಗೆ ಉಂಟಾದ ಅಡ್ಡಿ ಕುರಿತು ತನಿಖೆ ನಡೆಸುತ್ತಿದೆ. ಸೆಮಿ-ಅಧಿಕೃತ ತಸ್ನೀಮ್ ಸುದ್ದಿ ಸಂಸ್ಥೆಯು ಟೆಲಿಗ್ರಾಂನಲ್ಲಿ ಹಂಚಿಕೊಂಡ ಮಾಹಿತಿಯಂತೆ ದೃಶ್ಯ ಪ್ರಸಾರ ಕಡಿತವಾಗುವ ಮೊದಲು ಡ್ರೋನ್ ತೆಗೆದ ಚಿತ್ರಗಳನ್ನು ಯಶಸ್ವಿಯಾಗಿ ಇರಾನ್‌ಗೆ ಕಳುಹಿಸಲಾಗಿತ್ತು ಎಂದು ವರದಿಯಾಗಿದೆ.












Click it and Unblock the Notifications