ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಅಂತ್ಯಕ್ರಿಯೆ, ಇರಾನ್‌ನಲ್ಲಿ ಭುಗಿಲೆದ್ದ ಆಕ್ರೋಶ!
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಸಾವಿನ ಬಳಿಕ ಇರಾನ್ ಕೊತ ಕೊತ ಕುದಿಯುತ್ತಿದೆ. ಇಸ್ರೇಲ್ ಸೇನೆಯೇ ಈ ಹತ್ಯೆ ಮಾಡಿದೆ ಎಂಬ ಆರೋಪದ ನಡುವೆ ಇರಾನ್ ಕೋಪವನ್ನು ಹೊರ ಹಾಕುತ್ತಿದೆ. ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದ್ರು ಇರಾನ್ & ಇಸ್ರೇಲ್ ನಡುವೆ ಘೋರ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇಂತಹ ಪರಿಸ್ಥಿತಿ ಇದ್ದಾಗಲೇ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಗೆ ಅಂತಿಮ ನಮನ ಸಲ್ಲಿಸಿದ ಇರಾನ್ ಸರ್ವೋಚ್ಛ ನಾಯಕ ಏನ್ ಹೇಳಿದ್ದಾರೆ ಗೊತ್ತಾ?
ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 10 ತಿಂಗಳಿಂದ ಭೀಕರ ಕದನ ನಡೆಯುತ್ತಿದ್ದು, ಈ ತಿಕ್ಕಾಟದಲ್ಲಿ ಗಾಜಾಪಟ್ಟಿ ನಗರ ನರಳಿ ಹೋಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಇಸ್ರೇಲ್ ಮಾತ್ರ ಸುಮ್ಮನೆ ಕೂರದೆ ಈಗ ಹಮಾಸ್ ಮುಖ್ಯಸ್ಥನನ್ನೇ ಕೊಲೆ ಮಾಡಿದೆ ಎಂಬುದು ಇರಾನ್ ಆರೋಪ. ಹೀಗೆ ಆರೋಪ ಮಾಡಿ, ಇಸ್ರೇಲ್ ಮೇಲೆ ನೇರವಾಗಿ ದಾಳಿ ಮಾಡಲು ಆದೇಶ ನೀಡಿದೆ ಇರಾನ್. ಹೀಗೆಲ್ಲಾ ಇದ್ದಾಗ ಇರಾನ್ ಸರ್ವೋಚ್ಛ ನಾಯಕ ಕೂಡ ಇಸ್ರೇಲ್ ವಿರುದ್ಧ ಗುಡುಗಿದ್ದಾರೆ.

ಇಸ್ರೇಲ್ ವಿರುದ್ಧ ಮೊಳಗಿದ ಆಕ್ರೋಶ
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮತ್ತು ಅಂಗರಕ್ಷಕನಿಗೆ ಇರಾನ್ ಸರ್ವೊಚ್ಛ ನಾಯಕ ಅಯಾತೊಲ್ಲ ಆಲಿ ಖಮೇನಿ ಅವರು ನಮನ ಸಲ್ಲಿಸಿದ್ದಾರೆ. ಇರಾನ್ ರಾಜಧಾನಿ ಟೆಹರಾನ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಹನಿಯೆ & ಅಂಗರಕ್ಷನ ಮೃತದೇಹ ಇದ್ದ ಶವ ಪೆಟ್ಟಿಗೆಗಳನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಅಂತಿಮ ದರ್ಶನಕ್ಕೆ ಜನ ಸಾಗರ ಹರಿದು ಬಂದಿತ್ತು. ಆ ನಂತರ ಶವ ಪೆಟ್ಟಿಗೆಗಳನ್ನು ಟ್ರಕ್ ಮೂಲಕ ಆಜಾದಿ ಸ್ಕ್ವೇರ್‌ಗೆ ತರಲಾಯಿತು. ಇಸ್ರೇಲ್ ವಿರುದ್ಧ ಅಲ್ಲಿ ಸೇರಿದ್ದ ಜನರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಯುದ್ಧದ ಭಯ ಜಗತ್ತನ್ನೇ ಕಾಡುತ್ತಿದೆ
ಮತ್ತೊಂದು ಕಡೆ ಇರಾನ್ ಕಡೆಯಿಂದ ದಾಳಿ ನಡೆದು ಹೋಗುವ ಭಯದಲ್ಲಿ ಇಸ್ರೇಲ್ ಕೂಡ ಇದೆ. ಹಾಗೆ ಇದಕ್ಕೆ ಬೇಕಾದ ತಯಾರಿ ಕೂಡ ಇಸ್ರೇಲ್ ಮಾಡಿಕೊಂಡಿದೆ. ಹೀಗಾಗಿ, ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭಯವು ಕೂಡ ಕಾಡುತ್ತಿದೆ. ಒಂದು ಕಡೆ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ಸಮಯದಲ್ಲೇ ಇಸ್ರೇಲ್ & ಗಾಜಾ ನಡುವೆ ಕೂಡ ತಿಕ್ಕಾಟ ಜೋರಾಗಿದೆ. ಇದು ಸಾಲದೆಂಬ ರೀತಿ ಇದೀಗ ಇರಾನ್ & ಇಸ್ರೇಲ್ ಕೂಡ ಯುದ್ಧ ಶುರು ಮಾಡಿದರೆ ಮುಂದೆ ಏನು ಗತಿ? ಅಂತಾ ಜನರು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications