America And Iran: ಆಂತರಿಕ ಹಿಂಸಾಚಾರ ನಡುವೆ ಅಮೆರಿಕ ದಾಳಿ ಭೀತಿ, ಇರಾನ್ ಸೇನೆಗೆ ನಡುಕ
ಇರಾನ್ ನೆಲದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದ್ದು, ಭಾರಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಪ್ರತಿಭಟನೆ ಕೈಮೀರಿ ಹೋಗಿರುವ ಕಾರಣಕ್ಕೆ ಕಠಿಣ ಮಾರ್ಗಗಳನ್ನು ಅನುಸರಿಸುತ್ತಾ ಇದೀಗ ಹಿಂಸೆಗೆ ತಡೆ ಹಾಕಲು ಮುಂದಾಗಿದೆ ಇರಾನ್ ಸರ್ಕಾರ. ಇಂತಹ ಸಮಯದಲ್ಲೇ ಅಮೆರಿಕದ ಕಡೆಯಿಂದ ಕೂಡ ದಾಳಿಯ ಭೀತಿ ಎದುರಾಗಿದೆ.
ಹೀಗಿದ್ದಾಗಲೇ ಇರಾನ್ ಸೇನೆ ಅಲರ್ಟ್ ಆಗಿದ್ದು, ಈ ಹೊತ್ತಲ್ಲಿ ದಿಢೀರ್ ಹೊರಗಿನಿಂದ ದಾಳಿ ನಡೆದರೆ ಅದನ್ನು ಎದುರಿಸಲು ಸಿದ್ಧತೆ ನಡೆಸಿದೆ. ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಆದೇಶ ನೀಡಿದ್ದಾರೆ. ಆದರೆ ಇದಕ್ಕೆ ಕೇರ್ ಮಾಡದ ಇರಾನ್ ಪ್ರತಿಭಟನೆ ಹತ್ತಿಕ್ಕುತ್ತಿದೆ ಎಂಬ ಆರೋಪವಿದೆ. ಹೀಗಿದ್ದಾಗ ಅಮೆರಿಕ ಸೇನೆ ನೇರವಾಗಿ ಇರಾನ್‌ಗೆ ನುಗ್ಗುವ ಸಾಧ್ಯತೆ ದಟ್ಟವಾಗಿದೆ.

2,000ಕ್ಕೂ ಹೆಚ್ಚು ಜನ ಬಲಿ
ಅಕಸ್ಮಾತ್ ಇರಾನ್ ನೆಲದ ಮೇಲೆ ಅಮೆರಿಕ ಸೇನೆಯಿಂದ ದಾಳಿ ನಡೆದರೆ ಅದನ್ನು ಎದುರಿಸುವ & ದಾಳಿಗೆ ಉತ್ತರ ಕೊಡುವ ಬಗ್ಗೆ ಇರಾನ್ ಈಗಾಗಲೇ ಸಿದ್ಧತೆ ಆರಂಭ ಮಾಡಿದೆ. ಯಾವುದೇ ಕ್ಷಣದಲ್ಲಿ ದಾಳಿ ನಡೆಯಬಹುದು ಎಂಬ ಆತಂಕದಲ್ಲೇ ಇರಾನ್ ಇದ್ದು, ಕಳೆದ ವರ್ಷ ಇಸ್ರೇಲ್ ಜೊತೆ ಮತ್ತು ಅಮೆರಿಕದ ಜೊತೆಗೂ ಇರಾನ್ ಬಡಿದಾಡಿತ್ತು. ಆ ಯುದ್ಧದ ನಂತರ ಇದೀಗ ಮತ್ತೊಮ್ಮೆ ಯುದ್ಧಕ್ಕೆ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಇರಾನ್ ಹಿಂಸಾಚಾರಕ್ಕೆ ಈವರೆಗೂ 2,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಮತ್ತೊಂದು ಕಡೆ ಅಮೆರಿಕ ಇದೀಗ ಇರಾನ್ ಮೇಲೆ ದಾಳಿ ಮಾಡಲು ಮುಂದಾಗಿರುವುದು ವೈಯಕ್ತಿಕ ಲಾಭಕ್ಕೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಇರಾನ್ ನೆಲದಲ್ಲಿ ಇರುವ ಸಂಪತ್ತು ಪಡೆಯಲು ಅಮೆರಿಕ ಹೀಗೆ ಮಾಡುತ್ತಿದೆ ಎಂಬ ಆರೋಪಗಳ ನಡುವೆ ತಲೆ ಕೆಡಿಸಿಕೊಳ್ಳದ ಟ್ರಂಪ್ ಅವರು, ಈಗಾಗಲೇ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ ಇರಾನ್ ಜೊತೆಗೆ ವ್ಯಾಪಾರ ಮಾಡುವ ದೇಶಗಳಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
9700 ಚದರ ಕಿಲೋ ಮೀಟರ್ ತೈಲ!
ಇರಾನ್ ಜೊತೆಗೆ ವ್ಯಾಪಾರ ಮಾಡುವ ದೇಶಗಳಿಗೆ ಶೇಕಡಾ 25ರಷ್ಟು ಸುಂಕ ಹೇರಿಕೆ ಮಾಡಿ ಈಗಾಗಲೇ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೂ ಮೊದಲು, ವೆನೆಜುವೆಲಾ ಜೊತೆಗೆ ವ್ಯಾಪಾರ ಮಾಡುವವರ ಮೇಲೂ ಅಮೆರಿಕ ಸವಾರಿ ಮಾಡಿತ್ತು. 1990ರ ಸಮಯದಲ್ಲಿ ಇರಾನ್ & ಕತಾರ್ ಮಧ್ಯೆ ಗಡಿ ಭಾಗದಲ್ಲಿ ನೈಸರ್ಗಿಕ ಸಂಪನ್ಮೂಲ ಪತ್ತೆ ಆಗಿತ್ತು. ಈ ಅನಿಲ ನಿಕ್ಷೇಪವು ಬರೋಬ್ಬರಿ 9700 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ.
9700 ಚದರ ಕಿಲೋ ಮೀಟರ್ ಪೈಕಿ 3700 ಚದರ ಕಿ.ಮೀ. ಇರಾನ್ ವಶದಲ್ಲೇ ಇದೆ. ಉಳಿದ ಭಾಗವು ಕತಾರ್ ಗಡಿಯಲ್ಲಿದೆ. ಹೀಗಿದ್ದಾಗ, ಇರಾನ್ 14 ಟ್ರಿಲಿಯನ್ ಘನ ಮೀಟರ್ ಅನಿಲ ಹೊಂದಿದ್ದು, ಭಾರಿ ದೊಡ್ಡ ಮೊತ್ತದ ತೈಲ ಇಲ್ಲಿದೆ. ಇಷ್ಟೆಲ್ಲದರ ನಡುವೆ ಅಮೆರಿಕ ಈಗ ಹೊಸ ಲೆಕ್ಕಾಚರ ಹಾಕಿಕೊಂಡು ಮುಂದೆ ನುಗ್ಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ದೊಡ್ಡಣ್ಣನ ಶತ್ರುಗಳು. ಅಕಸ್ಮಾತ್ ಈಗ ಇರಾನ್ ಪತನವಾದರೆ ಅಮೆರಿಕಗೆ ಅದು ದೊಡ್ಡ ಲಾಭವನ್ನೇ ಮಾಡಲಿದೆ ಎಂಬ ಮಾತು ಕೇಳಿಬರುತ್ತಿದೆ.











Click it and Unblock the Notifications