ಭಾರತೀಯ ವಿದ್ಯಾರ್ಥಿಗಳಿಗಾಗಿ ಆನಂದ್ ಮಹೀಂದ್ರಾ ವೈದ್ಯಕೀಯ ಅಧ್ಯಯನ ಸಂಸ್ಥೆ ಪ್ರಾರಂಭ
ನವದೆಹಲಿ, ಮಾರ್ಚ್ 3: ಭಾರತದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ಈ ಬಾರಿ ಮಹೀಂದ್ರಾ ಕ್ಯಾಂಪಸ್ ಅಡಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲ ಆಗುವಂತೆ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಹಲವು ಪಾಠಗಳನ್ನು ಕಲಿಸುತ್ತಿದೆ. ಉಕ್ರೇನ್ ನೆಲದಲ್ಲಿ ಭಾರತೀಯ ವಿದ್ಯಾರ್ಥಿಗಳು ಏಕೆ ಅಷ್ಟೊಂದು ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟಸಾಧ್ಯವಾದ ಹಿನ್ನೆಲೆ ವಿದೇಶಗಳಲ್ಲಿ ಶಿಕ್ಷಣಕ್ಕಾಗಿ ಭಾರತೀಯರು ತೆರಳುತ್ತಿದ್ದಾರೆ. ಈ ಕುರಿತು ಖಾಸಗಿ ಸಂಸ್ಥೆಯೊಂದು ಪ್ರಕಟಿಸಿದ ವರದಿಯನ್ನು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ತಾವು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದಾಗಿ ಬರೆದುಕೊಂಡಿದ್ದಾರೆ.

ವೈದ್ಯಕೀಯ ಕಾಲೇಜುಗಳಿಗೆ ಭಾರತದಲ್ಲಿ ಇಷ್ಟು ಕೊರತೆಯೇ?
"ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಕೊರತೆ ಇದೆ ಎಂದು ನನಗೆ ತಿಳಿದಿರಲಿಲ್ಲ. @C_P_Gurnani ಯವರೇ ನಾವು ಮಹೀಂದ್ರಾ ವಿಶ್ವವಿದ್ಯಾಲಯದ(@MahindraUni) ಕ್ಯಾಂಪಸ್‌ನಲ್ಲಿ ವೈದ್ಯಕೀಯ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆಯನ್ನು ಅನ್ವೇಷಿಸಬಹುದೇ?," ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಚೀನಾದಲ್ಲಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ವ್ಯಾಸಂಗ
ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವುದಕ್ಕಾಗಿ ಹೋಗುತ್ತಿರುವುದರ ಬಗ್ಗೆ ಇತ್ತೀಚಿಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದರ ಮಧ್ಯೆ ವೈದ್ಯಕೀಯ ಶಿಕ್ಷಣಕ್ಕಾಗಿ ಅತಿಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಗೆ ಹೋಗಿದ್ದಾರೆ. ಚೀನಾಗೆ 23,000 ವಿದ್ಯಾರ್ಥಿಗಳು ಹೋಗಿದ್ದರೆ, ಈಗ ಯುದ್ಧದಿಂದ ಸಾಕಷ್ಟು ಸುದ್ದಿ ಆಗಿರುವ ಉಕ್ರೇನ್ ರಾಷ್ಟ್ರಕ್ಕೆ 18,000 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವುದಕ್ಕಾಗಿ ಹೋಗಿದ್ದಾರೆ. ಅದೇ ರೀತಿ ರಷ್ಯಾಗೆ 16,500, ಫಿಲಿಫೈನ್ಸ್ 15,000, ಕಿರ್ಗಿಸ್ತಾನ್ 10,000, ಜಾರ್ಜಿಯಾ 7500, ಬಾಂಗ್ಲಾದೇಶ 5200, ಕಜಕಿಸ್ತಾನ್ 5200, ಪೊಲೆಂಡ್ 4000 ಮತ್ತು ಅರ್ಮೆನಿಯಾದಲ್ಲಿ 3000 ಬಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವುದಕ್ಕಾಗಿ ಹೋಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ಕೈಗೆಟುಕದ ಶುಲ್ಕ
ಭಾರತದ ಮೆಡಿಕಲ್ ಕಾಲೇಜುಗಳು ರಾಜಕಾರಣಿಗಳು ಮತ್ತು ಉಳ್ಳವರ ಅಧೀನವೆ. ಇಲ್ಲಿ ವೈದ್ಯಕೀಯ ಪದವಿ ಮಾಡಬೇಕಾದರೆ ಕನಿಷ್ಠ ಒಂದೂವರೆ ಕೋಟಿ ರೂ.ನಿಂದ ಎರಡು ಕೋಟಿ ರೂ. ಪಾವತಿಸಬೇಕು. ಅದೇ ಉಕ್ರೇನ್, ಫಿಲಿಫೈನ್ಸ್‌ನಂತಹ ದೇಶಗಳಲ್ಲಿ ಕೇವಲ 15 ರಿಂದ 20 ಲಕ್ಷ ರೂ. ನಲ್ಲಿ ಆರು ವರ್ಷದ ವೈದ್ಯಕೀಯ ಪದವಿ ಮುಗಿಸಬಹುದು. ಭಾರತದಲ್ಲಿ ನೀಟ್ ಪರೀಕ್ಷೆ ಪಾಸಾಗಿ ಸರ್ಕಾರಿ ಸೀಟು ಗಿಟ್ಟಿಸಿಕೊಂಡರು ತಗಲುವ ವೆಚ್ಚದಲ್ಲಿ ವಿದೇಶದಲ್ಲಿ ಮೆಡಿಕಲ್ ಪದವಿ ಪಡೆಯಬಹುದು. ಅಂತಹ ದುಃಸ್ಥಿತಿ ಭಾರತದಲ್ಲಿದೆ.












Click it and Unblock the Notifications